ಬೆಂಗಳೂರು: ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ನಲ್ಲಿ ಇಂದು ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದಾಗಿ ಸದನದಲ್ಲಿ ಗದ್ದಲ, ಕೋಲಾಹಲ ಸೃಷ್ಟಿಯಾಯಿತು. ಪರಿಣಾಮ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.
"ರಾಜ್ಯ ಹೆಚ್ಚಿನ ತೆರಿಗೆ ಪಾವತಿಸುತ್ತಿದೆ. ಹೀಗಿದ್ದರೂ ಕೇಂದ್ರದಿಂದ ಬರುವ ಅನುದಾನ ಕಡಿಮೆ ಆಗುತ್ತಿದೆ ಏಕೆ?" ಎಂದು ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ರಾಜ್ಯ ತೆರಿಗೆ ಪಾವತಿಯಲ್ಲಿ 2ನೇ ಸ್ಥಾನದಲ್ಲಿದೆ. ಆದರೂ ಕೇಂದ್ರದಿಂದ ತೆರಿಗೆ ಪಾಲು ಕಡಿಮೆ ಬರ್ತಿದೆ. 2018-19ರಲ್ಲಿ 24 ಲಕ್ಷ 42 ಸಾವಿರ ಕೋಟಿ ರೂ., 2023ರಲ್ಲಿ 45 ಲಕ್ಷ ಕೋಟಿಗೂ ಅಧಿಕ ಗಾತ್ರದ ಬಜೆಟ್ ಮಂಡನೆಯಾಗಿದೆ. ಬಜೆಟ್ ಗಾತ್ರಕ್ಕೆ ಅನುಗುಣವಾಗಿ ತೆರಿಗೆ ಪಾಲು ಬರಬೇಕಿತ್ತು. ಆದರೆ ಆ ರೀತಿ ಆಗುತ್ತಿಲ್ಲ" ಎಂದು ಹೇಳಿದರು.
"14ನೇ ಹಣಕಾಸು ಆಯೋಗದಲ್ಲಿ ಶೇ.42 ತೆರಿಗೆ ಪರಿಹಾರ ಕೊಡಬೇಕು ಎಂದು ಶಿಫಾರಸು ಇದೆ. 15ನೇ ಹಣಕಾಸು ಆಯೋಗದಲ್ಲಿ ಕಡಿಮೆ ಆಗಿದ್ದು, ಇದರಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಹಣಕಾಸು ಆಯೋಗ 5,495 ಕೋಟಿ ರೂ ಕೊಡಬೇಕು ಎಂದು ಶಿಫಾರಸು ಮಾಡಿತ್ತು. ಫೆರಿಫೆರಲ್ ರಿಂಗ್ ರೋಡ್ಗೆ 3 ಸಾವಿರ ಕೋಟಿ, ಕೆರೆಗಳ ಅಭಿವೃದ್ಧಿಗೆ 3 ಸಾವಿರ ಕೋಟಿ ಸೇರಿ ಒಟ್ಟು 11,495 ಕೋಟಿ ಕೊಡಬೇಕು ಎಂದು ಹಣಕಾಸು ಆಯೋಗ ಶಿಫಾರಸು ಮಾಡಿತ್ತು. 11,495 ಕೋಟಿ ಕೊಡಲು ಆಗುವುದಿಲ್ಲ ಎಂದು ಕೇಂದ್ರ ಹೇಳಿದೆ. ಹಣಕಾಸು ಆಯೋಗ ಅಟಾನಮಸ್ ಬಾಡಿ, ಅದರಲ್ಲಿ ನಾವು ಹಸ್ತಕ್ಷೇಪ ಮಾಡಲ್ಲ ಎಂದು ಹೇಳಿದ್ದರು. ಹಾಗಿದ್ದರೆ ಕೇಂದ್ರ 11,495 ಕೋಟಿ ರೂ. ಕೊಡಬೇಕಿತ್ತು. ಯಡಿಯೂರಪ್ಪ, ಬೊಮ್ಮಾಯಿ ಸಿಎಂ ಇದ್ದಾಗ ಮನವಿ ಮಾಡಿದ್ದೆವು. 5,490 ಕೋಟಿ ವಿಶೇಷ ಅನುದಾನ ಕೇಳಿ ಎಂದು ಹೇಳಿದ್ದೆವು. ಆಗ ಕೇಂದ್ರಕ್ಕೆ ಪತ್ರ ಬರೆಯುತ್ತೇವೆ ಎಂದಷ್ಟೆ ಹೇಳಿದ್ದರು."
"ಅಂದಾಜು 4 ಲಕ್ಷ 30 ಸಾವಿರ ಕೋಟಿ ರೂ. ಹೆಚ್ಚು ತೆರಿಗೆ ಸಂಗ್ರಹ ಆಗುತ್ತದೆ. ತೆರಿಗೆ ಪಾಲಿನಲ್ಲಿ 37,252 ಕೋಟಿ, ಕೇಂದ್ರ ಪ್ರಾಯೋಜಿತ ಯೋಜನೆಯಲ್ಲಿ 13,005 ಕೋಟಿ ಹಣ ಬರಬೇಕು. 100 ರೂ. ತೆರಿಗೆಗೆ 12-13 ರೂ. ಮಾತ್ರ ಕೇಂದ್ರದಿಂದ ಬರುತ್ತದೆ. ಇದರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಇದರಲ್ಲಿ ರಾಜಕೀಯ ಇಲ್ಲ" ಎಂದರು.
ಸಿಎಂ ಮಾತಿನ ನಡುವೆ ಎದ್ದು ನಿಂತ ಬಿಜೆಪಿ ಸದಸ್ಯ ರುದ್ರೇಶ್ ವರ್ತನೆಗೆ ಸಿಟ್ಟಾದ ಸಿಎಂ, ಪ್ರಶ್ನೋತ್ತರದಲ್ಲಿ ಚರ್ಚೆಗೆ ಅವಕಾಶ ಇಲ್ಲ ಎಂದರು. ಪ್ರಶ್ನೋತ್ತರದ ವೇಳೆ ಭಾಷಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸುಳ್ಳುರಾಮಯ್ಯ ಎಂದು ಘೋಷಣೆ ಕೂಗಿದರು. ಇದರಿದಾಗಿ ಸದನದಲ್ಲಿ ಗದ್ದಲ ಕೋಲಾಹಲ ಸೃಷ್ಟಿಯಾಯಿತು. ಸುಳ್ಳು ಮಾಹಿತಿ ಎಂದ ಬಿಜೆಪಿಗೆ, ಬಿಜೆಪಿ ಎಂದರೆ ಸುಳ್ಳು. ಬಿಜೆಪಿಯವರು ನಮ್ಮ ಉತ್ತರದಿಂದ ಡಿಸ್ಟರ್ಬ್ ಆಗಿದ್ದಾರೆ. ಬಿಜೆಪಿ ಜೊತೆ ಜೆಡಿಎಸ್ ಕೂಡ ಸೇರಿಕೊಂಡಿದೆ ಎಂದು ಎಂದು ಸಿಎಂ ತಿರುಗೇಟು ನೀಡಿದರು.
ಈ ವೇಳೆ ಗದ್ದಲ ತಾರಕಕ್ಕೇರಿದ್ದು, ಸಭಾಪತಿ ಎದ್ದು ನಿಂತು ಸಮಾಧಾನಪಡಿಸಲು ಯತ್ನಿಸಿದರು. ಆದರೆ 'ಬೇಡ ಬೇಡ ಸಿಎಂ ಆನ್ಸರ್ ಬೇಡ' ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಗ್ರೆಸ್ನ ಎಲ್ಲಾ ಸದಸ್ಯರಿಂದ 'ಬೇಕೆ ಬೇಕು ಕೇಂದ್ರದಿಂದ ಅನುದಾನ ಬರಬೇಕು' ಎಂದು ಘೋಷಣೆ ಮೊಳಗಿತು.
ನಂತರ ಮಾತು ಮುಂದುವರೆಸಿದ ಸಿಎಂ, "ಕೇಂದ್ರದ ಬಜೆಟ್ನಲ್ಲಿ 5,300 ಕೋಟಿ ಹಣ ಭದ್ರಾ ಮೇಲ್ದಂಡೆಗೆ ಕೊಡುತ್ತೇವೆ ಅಂದಿದ್ದರು. ಬೊಮ್ಮಾಯಿ ಅವರು ಬಜೆಟ್ನಲ್ಲಿ ಅಪ್ಪರ್ ಭದ್ರಾ ರಾಷ್ಟ್ರೀಯ ಯೋಜನೆ ಆಗಲಿದೆ ಎಂದಿದ್ದರು. ಇದುವರೆಗೆ ಕೇಂದ್ರದಿಂದ ಹಣ ಬಂದಿಲ್ಲ" ಎಂದರು. ಈ ವೇಳೆ ಮತ್ತೆ ಸದನದಲ್ಲಿ ಗದ್ದಲ ಕೋಲಾಹಲ ಸೃಷ್ಟಿಯಾಯಿತು. "ಕೇಳಿದ ಪ್ರಶ್ನೆಗೆ ಉತ್ತರ ಕೊಡುತ್ತಿದ್ದೇನೆ. ಮಧ್ಯದಲ್ಲಿ ಎದ್ದು ಮಾತಾಡ್ತಿರಾ, ಗೂಂಡಾಗಿರಿ ಮಾಡ್ತೀರಾ, ನಾನು ಇದಕ್ಕೆಲ್ಲ ಹೆದರಲ್ಲ" ಎಂದು ಸಿಎಂ ಬಿಜೆಪಿ ವಿರುದ್ಧ ಹರಿಹಾಯ್ದರು.
"ಗೂಂಡಾಗಿರಿ ಪದ ಬಳಸಿದ್ದಾರೆ. ವಿಪಕ್ಷದಲ್ಲಿದ್ದಾಗ ತೊಡೆ ತಟ್ಟಿದವರು ಯಾರು?" ಎಂದು ಪ್ರಶ್ನಿಸಿದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಗೂಂಡಾಗಿರಿ ಪದ ಕಡತದಿಂದ ತೆಗೆಯಲು ಮನವಿ ಮಾಡಿದರು. ನಂತರ "ಗೂಂಡಾಗಿರಿ ಪದವನ್ನು ಕಡತದಿಂದ ತೆಗೆಯಲಾಗಿದೆ" ಎಂದು ಸಭಾಪತಿ ಹೊರಟ್ಟಿ ರೂಲಿಂಗ್ ನೀಡಿದರು. ಆದರೂ ಮತ್ತೆ ಗೂಂಡಾಗಿರಿ ಪದ ಬಳಸಿದ ಸಿಎಂ "ನಿಮ್ಮ ಗೂಂಡಾಗಿರಿಗೆ ಹೆದರಲ್ಲ" ಎಂದರು. "ಸತ್ಯವನ್ನು ಹೇಳಿಯೇ ಹೇಳುತ್ತೇನೆ, ಜನ ಛೀ ಥೂ ಎನ್ನುತ್ತಿದ್ದಾರೆ" ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಈ ವೇಳೆ "ನಮ್ಮ ತೆರಿಗೆ ನಮ್ಮ ಹಕ್ಕು" ಎಂದು ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು. "ಗೂಂಡಾ ರಾಜ್ಯ ಸರ್ಕಾರಕ್ಕೆ ಧಿಕ್ಕಾರ" ಎಂದ ಬಿಜೆಪಿ ಸದಸ್ಯರು ಹಾಗು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸದನ ಸಹಜ ಸ್ಥಿತಿಗೆ ಬಾರದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಮಹತ್ವದ ವಿಧೇಯಕ ಪಾಸ್: ಇನ್ಮುಂದೆ ನಾಮಫಲಕಗಳಲ್ಲಿ ಶೇ.60 ಕನ್ನಡ ಕಡ್ಡಾಯ