ಹುಬ್ಬಳ್ಳಿ/ದಾವಣಗೆರೆ: ವಿವಿಧೆಡೆ ಬಕ್ರೀದ್ ಹಬ್ಬದ ಸಂಭ್ರಮ ಮನೆ ಮಾಡಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಮುಸ್ಲಿಂ ಬಾಂಧವರು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಇದರ ಬೆನ್ನಲ್ಲೇ ಸರ್ವಧರ್ಮ ಸಮನ್ವಯತೆಯನ್ನು ಸಾರುವ ಸದುದ್ದೇಶದಿಂದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಬಳಿಕ ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಭೇಟಿ ನೀಡಿದ್ದಾರೆ.
ಮಾಜಿ ಸಚಿವ, ಅಂಜುಮನ್ ಸಂಸ್ಥೆ ಅಧ್ಯಕ್ಷ ಎ. ಎಂ. ಹಿಂಡಸಗೇರಿ ನೇತೃತ್ವದಲ್ಲಿ ಮೂರುಸಾವಿರ ಮಠದ ಪೀಠಾಧಿಪತಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಬಕ್ರೀದ್ ಹಬ್ಬದ ಶುಭಾಶಯ ಕೋರಿದ ಶ್ರೀಗಳು, ಮುಸ್ಲಿಂ ಬಾಂಧವರಿಗೆ ಹೂವಿನ ಹಾರ ಹಾಕಿ, ಹಣ್ಣು ನೀಡಿ ಆಶೀರ್ವಾದ ಮಾಡಿದರು. 40ರಿಂದ 45 ವರ್ಷಗಳಿಂದ ಬೆಳೆದು ಬಂದಿರುವ ಈ ಪರಂಪರೆ ಇಂದಿಗೂ ಕೂಡ ಆಚರಣೆಯಲ್ಲಿದೆ.
ಸಾಮೂಹಿಕವಾಗಿ ಪ್ರಾರ್ಥನೆ: ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ಬಕ್ರೀದ್ ಹಬ್ಬದ ಅಂಗವಾಗಿ ಹುಬ್ಬಳ್ಳಿಯಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತ್ಯಾಗ ಬಲಿದಾನ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಚಿಕ್ಕ ಮಕ್ಕಳು, ಹಿರಿಯರು ಸೇರಿದಂತೆ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಬಕ್ರೀದ್ ಹಿನ್ನೆಲೆಯಲ್ಲಿ, ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿರುವುದು ಕಂಡು ಬಂದಿತು.
ದಾವಣಗೆರೆಯಲ್ಲಿ ಬಕ್ರೀದ್ ಹಬ್ಬದ ಸಂಭ್ರಮ: ತ್ಯಾಗ, ಬಲಿದಾನಗಳ ಪ್ರತೀಕ ಬಕ್ರೀದ್ ಹಬ್ಬದ ಸಂಭ್ರಮ ದಾವಣಗೆರೆಯಲ್ಲಿ ಮನೆಮಾಡಿದೆ. ಇಡೀ ಮುಸ್ಲಿಂ ಸಮುದಾಯ ಇಂದು (ಸೋಮವಾರ) ಒಂದು ಕಡೆ ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಒಬ್ಬರಿಗೊಬ್ಬರು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ದಾವಣಗೆರೆ ನಗರದ ಪಿ.ಬಿ. ರಸ್ತೆಯಲ್ಲಿರುವ ಹಳೇ ಖಬರ್ಸ್ತಾನ್ದಲ್ಲಿ ನಮಾಜ್ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಇದಲ್ಲದೆ ಶಿವ ನಗರದಲ್ಲಿರುವ ಹೊಸ ಈದ್ಗಾ ಮೈದಾನ, ರಾಮನಗರ ಈದ್ಗಾ ಮೈದಾನ ಹಾಗು ಆವರಗೆರೆ ಈದ್ಗಾ ಮೈದಾನದಲ್ಲಿ ಒಟ್ಟು ನಾಲ್ಕು ಕಡೆ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
''ದೇಶದಲ್ಲಿ ಶಾಂತಿ, ನೆಮ್ಮದಿ ನೆಲೆಸಿ, ಸಮೃದ್ಧ ಮಳೆಯಾಗಲೆಂದು ಇಮಾಮ್ ಅವರು ಪ್ರಾರ್ಥಿಸಿದರು. ಇದಲ್ಲದೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿ ಮುಸ್ಲಿಂ ಬಾಂಧವರು ಹಜರಾತ್ ಮನ್ಸೂರ್ ಷಾ ವಲಿ ದರ್ಗಾದಿಂದ ಸಾಮೂಹಿಕವಾಗಿ ಮೆರವಣಿಗೆ ತೆರಳಿ ರಾಜಬೀದಿಯಿಂದ ಅಲ್ಲಾ ದೇವರನ್ನು ನೆನೆಯುತ್ತ, ಐತಿಹಾಸಿಕ ಪುಷ್ಕರಣಿ ಮುಂಭಾಗ ಹಾದು ಇರುವ ಈದ್ಗಾ ಮೈದಾನಕ್ಕೆ ತೆರಳಿದರು. ಬಳಿಕ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಇಮಾಮ್ ಅವರು ದೇಶದಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ಇರಲಿ ಎಂದು ಪ್ರಾರ್ಥಿಸಿದರು.