ಬೆಂಗಳೂರು: "ಶಿವರಾತ್ರಿಯಂದು ಮೊಣಕಾಲುದ್ದ ಹರಿಯುತ್ತಿದ್ದ ಕಾವೇರಿ ನದಿ ಇಂದು 20 ಅಡಿಗಳಷ್ಟು ಎತ್ತರದಲ್ಲಿ ಹರಿಯುತ್ತಿದೆ. ಇದು ಬೆಂಗಳೂರಿಗರ ನೀರಿನದಾಹ ತೀರಿಸಲು ಅಲ್ಲ ಮಿತ್ರಪಕ್ಷವನ್ನು ತೃಪ್ತಪಡಿಸಲ ಹರಿಸುತ್ತಿರುವ ನೀರು. ನಿಮ್ಮ "ಮೇಕೆದಾಟು" ಯೋಜನೆ ಎಂದರೆ ಇದೇನಾ? ಡಿಸಿಎಂ ಡಿಕೆ ಶಿವಕುಮಾರ್ ಅವರೇ" ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ನದಿ ನೀರಿನ ವಿಡಿಯೋ ಹಂಚಿಕೊಂಡಿರುವ ಸುರೇಶ್ ಕುಮಾರ್, "ಇದು ಸಂಗಮದ ಬಳಿ ಇರುವ, ಕನಕಪುರ ತಾಲೂಕಿನ ಬೊಮ್ಮಸಂದ್ರದ ಬಳಿ ಬಸವನ ಕಡ ಹತ್ತಿರ ಕಾವೇರಿ ನದಿ ಇಂದು ಬೆಳಗ್ಗೆ 8.30 ಗಂಟೆಗೆ ತುಂಬಿ ಹರಿಯುತ್ತಿರುವ ಪರಿ. ಉಪಮುಖ್ಯಮಂತ್ರಿಗಳ ಕನಕಪುರ ತಾಲೂಕಿನ ಇದೇ ಜಾಗದಲ್ಲಿ ಶಿವರಾತ್ರಿ ದಿನ ಮಲೆ ಮಹದೇಶ್ವರ ಸ್ವಾಮಿಯ ದರ್ಶನಕ್ಕಾಗಿ ಭಕ್ತರು ಮೊಣಕಾಲಿನವರೆಗೂ ಇದ್ದ ನೀರಿನಲ್ಲಿ ನಡೆದುಕೊಂಡು ಪಾದಯಾತ್ರೆ ಮಾಡಿದ್ದು. ಮಂಗಳವಾರ ಅಂದರೆ ಕೇವಲ 3 ದಿನಗಳ ಅಂತರದಲ್ಲಿ ಇದೇ ಜಾಗದಲ್ಲಿ ಸುಮಾರು 20ಕ್ಕೂ ಹೆಚ್ಚು ಅಡಿ ಆಳದಷ್ಟು ನೀರು ತುಂಬಿ ಹರಿಯುತ್ತಿದೆ. ಈ ನೀರು ಹರಿಯುತ್ತಿರುವುದು ಬೆಂಗಳೂರಿನ ನಾಗರಿಕರ ಬಾಯಾರಿಕೆ ಪೂರೈಸುವುದಕ್ಕಲ್ಲ ಎನ್ನುವುದು ಸ್ಪಷ್ಟ" ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಆರೋಪ ಮಾಡಿದ್ದಾರೆ.
"ಈ ನೀರನ್ನು ಹರಿಸುತ್ತಿರುವುದು ಐಎನ್ಡಿಐಎ( I.N.D.I.A) ಪಾಲುದಾರ ಪಕ್ಷವಾದ ತಮಿಳುನಾಡಿನ ಡಿಎಂಕೆ ಸರ್ಕಾರವನ್ನು ತೃಪ್ತಿಗೊಳಿಸಲು ಎಂಬುದು ಸ್ಥಳೀಯರು ನೀಡಿರುವ ಖಚಿತ ಮಾಹಿತಿ. ಏಕೆಂದರೆ ಈ ಜಾಗ ಬೆಂಗಳೂರಿಗೆ ನೀರು ಪೂರೈಸುವ "ಶಿವ ಅಣೆಕಟ್ಟು" ಇರುವ ಟಿಕೆ ಹಳ್ಳಿಯಿಂದ ತಮಿಳುನಾಡಿನ ಕಡೆ ಸುಮಾರು 20 ಕಿಮೀ ದೂರದಲ್ಲಿ ಇದೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೇ ಉತ್ತರಿಸಿ. ನಿಮ್ಮ "ಮೇಕೆದಾಟು" ಯೋಜನೆ ಎಂದರೆ ಇದೇನಾ?" ಎಂದು ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಕೇಳಿದರೂ, ಕೇಂದ್ರ ಸರ್ಕಾರ ಹೇಳಿದ್ರೂ ಕಾವೇರಿ ನೀರು ಬಿಡಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ