ರಾಮನಗರ : ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಮತ್ತೊಂದು ಭೀಕರ ಅಪಘಾತ ಭಾನುವಾರ ಸಂಭವಿಸಿದ್ದು, ಭಾರಿ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಚನ್ನಪಟ್ಟಣ ತಾಲೂಕಿನ ಕಣ್ವ ರಸ್ತೆ ಬಳಿ ಘಟನೆ ನಡೆದಿದೆ. ಸಿನಿಮೀಯ ರೀತಿಯಲ್ಲಿ ಕಾರುಗಳು ಒಂದರ ಮೇಲೊಂದು ಏರಿ ನಿಂತಿದ್ದವು.
ಹೆದ್ದಾರಿಯಲ್ಲಿ ಸಿಬ್ಬಂದಿ ಬ್ಯಾರಿಕೇಡ್ ಹಾಕಿ ರಸ್ತೆ ಕ್ಲೀನ್ ಮಾಡುತ್ತಿದ್ದಾಗ ಘಟನೆ ನಡೆದಿದೆ. ಬ್ಯಾರಿಕೇಡ್ ಗಮನಿಸದೆ ಬಂದ ಕಾರು ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದು, ಈ ವೇಳೆ ಹಿಂಬದಿಯಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಸಿನಿಮೀಯವಾಗಿದ್ದು, ಮುಂದೆ ನಿಂತಿದ್ದ ಕಾರಿನ ಕೆಳಗೆ ಹಿಂದಿನಿಂದ ಬಂದ ಕಾರು ನುಗ್ಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಬಗ್ಗೆ ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಪಲ್ಟಿ : ಲಕ್ಷಾಂತರ ಮೌಲ್ಯದ ಸ್ಪಿರಿಟ್ ಮಣ್ಣುಪಾಲು : ಪ್ರತ್ಯೇಕ ಘಟನೆಯಲ್ಲಿ, ಸ್ಪಿರಿಟ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಲಕ್ಷಾಂತರ ರೂ. ಮೌಲ್ಯದ ಸ್ಪಿರಿಟ್ ಹೆದ್ದಾರಿಯಲ್ಲಿ ಮಣ್ಣುಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಬಸ್ತಿ ಬಳಿ ಸಂಭವಿಸಿದೆ.

ಅಬಕಾರಿ ಇಲಾಖೆಯ ಸುಪರ್ದಿಯಲ್ಲಿ ಮಹಾರಾಷ್ಟ್ರದಿಂದ ಕೇರಳಕ್ಕೆ ಸಾಗಿಸುತ್ತಿದ್ದ 9 ಸಾವಿರ ಲೀಟರ್ ದ್ರಾಕ್ಷಾ ಸ್ಪಿರಿಟ್ ತುಂಬಿದ ಲಾರಿ ಮುರುಡೇಶ್ವರದ ಬಸ್ತಿ ಬಳಿ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸ್ಪಿರಿಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆಲ್ಲಿ ನಷ್ಟವಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ದೌಡಾಯಿಸಿ ಸ್ಪಿರಿಟ್ ಸಾಗಾಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದಾರೆ.
ಇದನ್ನೂ ಓದಿ: ಹೊತ್ತಿ ಉರಿದ ದನದ ಕೊಟ್ಟಿಗೆ: ಕಟ್ಟಿದ ಸ್ಥಿತಿಯಲ್ಲೇ 6 ಹಸು, 2 ಕರು ಸಜೀವ ದಹನ