ಬೆಂಗಳೂರು: ನೈಸರ್ಗಿಕ ನ್ಯಾಯ ತತ್ವಗಳನ್ನು ಅನುಸರಿಸದೇ ಗುತ್ತಿಗೆ ಪಡೆದ ವ್ಯಕ್ತಿ ಅಥವಾ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಮೆಸರ್ಸ್ ಸುಜಲಾ ಫಾರ್ಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ಮಾಡಿದೆ. ಅಲ್ಲದೆ, ಕೋವಿಡ್ -19 ಸಾಂಕ್ರಾಮಿಕ ವೇಳೆ ಕಳಪೆ ಗುಣಮಟ್ಟದ ಸ್ಯಾನಿಟೈಜರ್ ಪೂರೈಕೆ ಆರೋಪದಡಿ ಬೆಂಗಳೂರು ಮೂಲದ ಸುಜಲ್ ಫಾರ್ಮಾ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದ ಕರ್ನಾಟಕ ರಾಜ್ಯ ವೈದ್ಯಕೀಯ ಪೂರೈಕೆ ನಿಗಮ ನಿಯಮಿತದ ಕ್ರಮವನ್ನು ನ್ಯಾಯಾಲಯ ರದ್ದುಪಡಿಸಿದೆ.
ಅರ್ಜಿದಾರರು ಪೂರೈಸಿದ್ದ ಸ್ಯಾನಿಟೈಸರ್ ಈ ವೇಳೆ ಒಣಗಿ ಹೋಗಿರುವುದರಿಂದ ನಿಯಮದಂತೆ ಮತ್ತೆ ಪ್ರತಿವಾದಿಗೆ ನಿರ್ಧಾರ ಕೈಗೊಳ್ಳಲು ವಾಪಸ್ ಕಳುಹಿಸುವುದಿಲ್ಲ, ಬದಲಿಗೆ ನಿಗಮದ ಕ್ರಮ ರದ್ದುಪಡಿಸಿ ಪ್ರಕರಣಕ್ಕೆ ಇತಿಶ್ರೀ ಹಾಡಲಾಗುವುದು ಎಂದು ಪೀಠ ತಿಳಿಸಿದೆ.
ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿಲ್ಲ. ಎರಡು ನೋಟಿಸ್ ನೀಡಿದ್ದರೂ ಅದರಲ್ಲಿ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸುವ ಬಗ್ಗೆ ಯಾವುದೇ ಇಂಗಿತ ವ್ಯಕ್ತಪಡಿಸಿಲ್ಲ. ನಿಯಮದಂತೆ ಶೋಕಾಸ್ ನೋಟಿಸ್ ನೀಡಬೇಕು. ಅದರಲ್ಲಿ ಏಕೆ ಕಪ್ಪು ಪಟ್ಟಿಗೆ ಸೇರಿಸಬಾರದು ಎಂದು ಕಾರಣಗಳ ಸಹಿತ ವಿವರಿಸಬೇಕು. ಆ ನಂತರವೇ ಅಂತಿಮ ಆದೇಶವನ್ನು ಹೊರಡಿಸಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ನಿಯಮಗಳನ್ನು ಪಾಲನೆ ಮಾಡದಿರುವುದರಿಂದ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸುವ ಆದೇಶ ರದ್ದುಗೊಳಿಸಲಾಗುತ್ತಿದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.
ಇದನ್ನೂ ಓದಿ: ರಸ್ತೆ ಅಪಘಾತದಿಂದ ಯುವಕನ ವೈವಾಹಿಕ ಜೀವನಕ್ಕೂ ಕುತ್ತು: 38 ಲಕ್ಷ ಪರಿಹಾರಕ್ಕೆ ಹೈಕೋರ್ಟ್ ಆದೇಶ - High Court
ಪ್ರಕರಣದ ಹಿನ್ನೆಲೆ: ಕರ್ನಾಟಕ ರಾಜ್ಯ ವೈದ್ಯಕೀಯ ಪೂರೈಕೆ ನಿಗಮ ನಿಯಮಿತವು ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ 5000 ಎಂಎಲ್ ತೂಕದ 10 ಸಾವಿರ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ತಲಾ 2500 ರೂ.ಗೆ ಪೂರೈಕೆ ಮಾಡುವಂತೆ ಖರೀದಿ ಆದೇಶವನ್ನು ಸುಜಲಾ ಫಾರ್ಮಾ ಕಂಪನಿಗೆ ನೀಡಿತ್ತು. ಅದರ ಒಟ್ಟು ಮೌಲ್ಯ 2.5 ಕೋಟಿ ರೂ. ಅರ್ಜಿದಾರರರು 2020ರ ಏ.6 ಮತ್ತು 29ರಂದು ಸ್ಯಾನಿಟೈಸರ್ ಕಲಬುರಗಿ ಮತ್ತು ಬೆಳಗಾವಿಯ ಗೋದಾಮುಗಳಿಗೆ ಪೂರೈಕೆ ಮಾಡಿದ್ದರು. ಆದರೆ, ಅವುಗಳ ಗುಣಮಟ್ಟ ಸರಿ ಇಲ್ಲ, ಹಾಗಾಗಿ ಸ್ಯಾನಿಟೈಸರ್ ಬದಲಾಯಿಸಿಕೊಡಬೇಕು ಎಂದು 2021ರ ಏ.16ಕ್ಕೆ ಕಂಪನಿಗೆ ನೋಟಿಸ್ ನೀಡಲಾಗಿತ್ತು. ಆಗ ಯಾವ ವರದಿ ಆಧರಿಸಿ ಕಳಪೆ ಗುಣಮಟ್ಟ ಎಂದು ನಿರ್ಧರಿಸಲಾಗಿದೆ ಎಂಬ ಬಗ್ಗೆ ವರದಿಯ ಪ್ರತಿಯನ್ನು ನೀಡುವಂತೆ ಕಂಪನಿ ಕೋರಿತ್ತು. ಆ ವರದಿಯನ್ನು ನೀಡುವ ಬದಲು ನಿಗಮವು 2021ರ ಅ.2ರಂದು ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು. ಅದನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್ ಮೊರೆ ಹೋಗಿತ್ತು.