ಬೆಂಗಳೂರು: ಬಸವಣ್ಣನವರು ಸಮಾಜದ ಬದಲಾವಣೆ ಬಯಸಿದ್ದರು, ಮೂಢನಂಬಿಕೆ ಇರಬಾರದು ಅಂತ ಹೇಳಿದ್ದರು. ಆದರೆ, ಸಮಾಜದಲ್ಲಿ ಇನ್ನು ಮೌಢ್ಯಗಳು ಇವೆ. ವಿದ್ಯಾವಂತರೇ ಮೌಢ್ಯವನ್ನು ನಂಬುತ್ತಿದ್ದಾರೆ. ಎಲ್ಲಿವರೆಗೂ ಮೌಢ್ಯಗಳು ಇರುತ್ತವೆಯೋ ಅಲ್ಲಿಯವರೆಗೂ ಸಾಮಾಜಿಕ ನ್ಯಾಯ ತರುವುದಕ್ಕೆ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜಗಜ್ಯೋತಿ ಬಸವಣ್ಣನವರ ಅನುಭವ ಮಂಟಪ ಭಾವಚಿತ್ರವನ್ನು ವಿಧಾನ ಪರಿಷತ್ ಸದಸ್ಯರಿಗೆ ನೀಡುವ ಕಾರ್ಯಕ್ರಮವನ್ನು ವಿಧಾನಸೌಧದಲ್ಲಿರುವ ಸಭಾಪತಿಗಳ ಕೊಠಡಿಯಲ್ಲಿ ನಡೆಸಲಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಆಯೋಜಿಸಿದ್ದ ಕಾರ್ಯಕ್ರಮಲ್ಲಿ ಭಾಗಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್ ಸದಸ್ಯರಿಗೆ ಅನುಭವ ಮಂಟಪ ಭಾವಚಿತ್ರ ನೀಡಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 850 ವರ್ಷಗಳ ಹಿಂದೆಯೇ ಬಸವಾದಿ ಶರಣರು ಅನುಭವ ಮಂಟಪ ಮಾಡಿದ್ದರು. ಅಂದಿನ ಕಾಲದಲ್ಲೇ ಅನುಭವ ಮಂಟಪ ಮಾಡಿ ಅದರ ಮುಖಾಂತರ ಸಮಾಜದ ಆನೇಕ ಸಮಸ್ಯೆ ಚೆರ್ಚೆ ಆಗುವಂತೆ ಮಾಡಲಾಗಿತ್ತು. ಸಮಾಜದ ಬದಲಾವಣೆ ಬಗ್ಗೆ ಚೆರ್ಚೆ ಹಾಗೂ ಸಮಾಜಕ್ಕೆ ಒಳಿತು ಆಗುವುದರ ಬಗ್ಗೆ ಚೆರ್ಚೆ ಆಗುತ್ತಿತ್ತು. ಬಸವಣ್ಣ ಅವರು ಸಾಮಾಜಿಕ ಕ್ರಾಂತಿ ಮಾಡಿದ್ದರು. ಅದರ ನಿಮಿತ್ತ ಇಂದು ಅನುಭವ ಮಂಟಪ ನಿರ್ಮಿಸಲಾಗುತ್ತಿದೆ. ಬಸವಣ್ಣನವರ ಬದುಕಿನ ಅನುಭವ ಏನಿದೆಯೋ ಅದರ ಚೆರ್ಚೆ ಆಗುತ್ತದೆ. ಯಡಿಯೂರಪ್ಪ ಅವರು ಸಿಎಂ ಆದಮೇಲೆ ಅದಕ್ಕೇ ಹಣ ಹೊಂದಿಸಲು ಆಗಲಿಲ್ಲ. ಈಗ ನಮ್ಮ ಸರ್ಕಾರ ಬಂದಿದೆ ಅದಕ್ಕೇ ಎಷ್ಟು ಹಣಬೇಕೋ ಅದನ್ನ ಕೊಡಲು ಮುಂದೆ ಸಿದ್ಧವಿದ್ದೇವೆ ಎಂದರು.
ಬಸವಣ್ಣ ಸಮಾಜದ ಬದಲಾವಣೆ ಬಯಸಿದ್ದರು ಮೂಢನಂಬಿಕೆ ಇರಬಾರದು ಅಂತ ಹೇಳಿದ್ದರು. ಇವುಗಳನೆಲ್ಲ ಅಂದಿನ ಕಾಲದಲ್ಲೇ ಬಸವಣ್ಣ ಮಾಡಿದ್ದರು ಹಾಗಾಗಿ ಬಸವಣ್ಣ ಅವರನ್ನು ಸಂಸ್ಕೃತಿ ನಾಯಕ ಹಾಗೂ ಬಸವಣ್ಣ ಭಾವಚಿತ್ರ ಎಲ್ಲಾ ಸರ್ಕಾರಿ ಹಾಗೂ ಅನುಧಾನಿತಾ ಕಚೇರಿಯಲ್ಲಿ ಹಾಕಬೇಕು ಅಂತ ಹೇಳಿದ್ದೆವು. ನಾನು ಕೌನ್ಸಿಲ್ನಲ್ಲಿ ಬಸವಣ್ಣನವರ ಫೋಟೋ ಇಡಬೇಕು ಅಂಥ ಹೇಳಿದ್ದೆ ಆದರೆ, ಸಭಾಪತಿ ಎಲ್ಲಾ ಶಾಸಕರಿಗೂ ಹಂಚುವ ಪ್ರಯತ್ನ ಮಾಡಬೇಕು ಅಂತ ಹೇಳಿದರು ಹಾಗಾಗಿ ಎಲ್ಲಾ ಶಾಸಕರಿಗೂ ಭಾವಚಿತ್ರ ಕೊಡಲಾಗುತ್ತದೆ ನಾನು ಉದ್ಘಾಟನೆ ಮಾಡಿದ್ದಕ್ಕೆ ಸಂತೋಷ ಆಗಿದೆ ಇದರಿಂದ ನಮಗೆ ಸ್ಫೂರ್ತಿ ಆಗಿದೆ ಎಲ್ಲಾ ಶಾಸಕರಿಗೂ ಬಸವಣ್ಣ ಸ್ಫೂರ್ತಿ ಕೊಡಲಿ ಎಲ್ಲರೂ ಬಸವಣ್ಣ ಅವರ ತತ್ವ ಅಳವಡಿಸಿಕೊಳ್ಳಲಿ ಎಂದರು.
ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಎಲ್ಲಾ ಶಾಸಕರಿಗೆ ಅನುಭವ ಮಂಟಪ ಭಾವಚಿತ್ರ ಕೊಡಲಿದ್ದೇವೆ. ಹಿಂದೆ ಬಜೆಟ್ ಸೆಷನ್ ನಡೆದಾಗ, ಅನುಭವ ಮಂಟಪದ ಬಗ್ಗೆ ಚರ್ಚೆಗೆ ಬಂತು. ಹೇಳ್ತೀರಾ ಆದ್ರೆ ಎಲ್ಲೂ ಹಾಕಿಲ್ಲ ಅಂತ ಸಿಎಂ ತಿಳಿಸಿದ್ರು. ಹಾಗಾಗಿ 110 ಭಾವಚಿತ್ರಗಳನ್ನ ಮಾಡಿಸಿದ್ದೇವೆ. ಸದನದಲ್ಲೂ ಕೂಡ ಶಾಸಕರಿಗೆ ಹಂಚಿಕೆ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಮೋದಿ, ಅಮಿತ್ ಶಾ 'ED' ಮೂಲಕ ಎಲ್ಲವನ್ನೂ ಮಾಡಿಸುತ್ತಿದ್ದಾರೆ: ಸಚಿವ ದಿನೇಶ್ ಗುಂಡೂರಾವ್ - Dinesh Gundu rao