ಹಾವೇರಿ: ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಪ್ರಸ್ತುತ ಹಣಕಾಸು ವರ್ಷದಲ್ಲಿ 3,184 ಕೋಟಿ ರೂಪಾಯಿ ವಹಿವಾಟು ನಡೆಸಿ ಸಾರ್ವಕಾಲಿಕ ದಾಖಲೆ ಬರೆದಿದೆ. ಕಳೆದ ವರ್ಷ ಸುಮಾರು 2,281 ಕೋಟಿ ರೂಪಾಯಿ ವಹಿವಾಟು ನಡೆದಿತ್ತು. ಈ ವರ್ಷ ಶೇ.30ರಷ್ಟು ಅಧಿಕ ವಹಿವಾಟು ದಾಖಲಾಗಿದೆ.
ಬರಗಾಲವಿದ್ದರೂ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ವಹಿವಾಟಿಗೆ ಯಾವುದೇ ಅಡ್ಡಿಯಾಗಿಲ್ಲ. ಅರೆ-ಮಳೆಗಾಲ ಮೆಣಸಿನಕಾಯಿ ಬೆಳೆಗೆ ಉತ್ತಮ ಎನ್ನುವಂತೆ ಈ ವರ್ಷ ಸ್ವಲ್ಪ ಮಳೆ ಕಡಿಮೆಯಾಗಿದ್ದು ಈ ರೀತಿಯ ವಹಿವಾಟಿಗೆ ಕಾರಣ ಎನ್ನುತ್ತಾರೆ ವರ್ತಕರು.
ಅತಿ ಮಳೆಯಾದರೆ ಮೆಣಸಿನಕಾಯಿ ಬೆಳೆಗೆ ರೋಗ ಬಾಧಿಸುತ್ತದೆ. ಸ್ವಲ್ಪವೂ ಮಳೆಯಾಗದೇ ಇದ್ದರೆ ಬೆಳೆಯೇ ಬರುವುದಿಲ್ಲ. ಈ ವರ್ಷ ಮೆಣಸಿನಕಾಯಿ ಬೆಳೆಯುವ ಪ್ರದೇಶಗಳೂ ಹೆಚ್ಚಿದ್ದು, ಅಧಿಕ ಪ್ರಮಾಣದ ಇಳುವರಿ ಮಾರುಕಟ್ಟೆಗೆ ಬಂದಿದೆ.
"ಇಳುವರಿಯಲ್ಲಿ ಬಿಳಿಗಾಯಿ ಫಂಗಸ್ ಇಲ್ಲದಿರುವುದರಿಂದ ರೈತರಿಗೆ ಉತ್ತಮ ದರವೂ ದೊರೆತಿದೆ. ಆದರೆ ಅರ್ಥಶಾಸ್ತ್ರದ ನಿಯಮದಂತೆ ಅಧಿಕ ಪೂರೈಕೆಯಾದಾಗ ದರ ಇಳಿಕೆಯಾಗುವುದು ಸಾಮಾನ್ಯ. ಅದರಂತೆ ಮಾರುಕಟ್ಟೆಗೆ ಅಧಿಕ ಪ್ರಮಾಣದ ಮೆಣಸಿನಕಾಯಿ ಬಂದಾಗ ಟೆಂಡರ್‌ದಾರರು ಕಡಿಮೆ ಬೆಲೆಗೆ ಟೆಂಡರ್ ಹಾಕುತ್ತಾರೆ" ಎಂದು ವರ್ತಕರ ಸಂಘದ ಕಾರ್ಯದರ್ಶಿ ರಾಜು ಮೋರಗೇರಿ ಹೇಳಿದರು.
ಮಾರುಕಟ್ಟೆ ವಿಸ್ತರಿಸಲು 120 ಎಕರೆ ಜಮೀನು: ಈ ವರ್ಷ ಒಂದೇ ದಿನದಲ್ಲಿ 3 ಲಕ್ಷ 60 ಸಾವಿರ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದವು. ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಚೀಲಗಳನ್ನಿಡಲು ಜಾಗ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾದಾಗ ನಗರದ ತಾಲೂಕು ಕ್ರೀಡಾಂಗಣದಲ್ಲಿ ಲಾಟ್ ಮಾಡಿ ದರ ನಿಗದಿ ಮಾಡಲಾಗಿತ್ತು. ಇದಕ್ಕಾಗಿ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ವಿಸ್ತರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರ 120 ಎಕರೆ ಜಮೀನು ನೀಡುವ ಭರವಸೆ ನೀಡಿದೆ. ಈ ಜಾಗ ಸಿಕ್ಕರೆ ನಾಲ್ಕು ಲಕ್ಷ ಚೀಲದವರೆಗೆ ಮೆಣಸಿನಕಾಯಿಗೆ ಟೆಂಡರ್ ಹಾಕುವ ಅವಕಾಶ ಸಿಗಲಿದೆ. ಮಾರುಕಟ್ಟೆಯಲ್ಲಿ ಪಾರದರ್ಶಕ ಆಡಳಿತ, ಇ-ಟೆಂಡರ್ ಮತ್ತು ನ್ಯಾಯಯುತ ದರ ಹಾಗೂ ರೈತರಿಗೆ ಆರ್‌ಟಿಜಿಎಸ್ ಮೂಲಕ ಖಾತೆಗೆ ಹಣ ರವಾನೆಯಾಗುತ್ತಿದೆ. ಹೀಗಾಗಿ ವರ್ತಕರ ಸಂಘ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಿದೆ ಎಂದು ರಾಜು ಮೋರಗೇರಿ ತಿಳಿಸಿದರು.
ಬೇರೆ ಬೇರೆ ರಾಜ್ಯಗಳಿಂದ ರೈತರು ಬ್ಯಾಡಗಿ ಮಾರುಕಟ್ಟೆಗೆ ಮೆಣಸಿನಕಾಯಿ ತರುತ್ತಾರೆ. ಮಾರುಕಟ್ಟೆಯು ವರ್ಷದ 12 ತಿಂಗಳೂ ಕಾರ್ಯನಿರ್ವಹಿಸುತ್ತಿದೆ. ಜಮೀನಿನಿಂದ ನೇರವಾಗಿ ಮಾರುಕಟ್ಟೆಗೆ ಮೆಣಸಿನಕಾಯಿ ತರುವ ರೈತರು ದರ ಸೂಕ್ತ ಸಿಗದಿದ್ದರೆ ಕೋಲ್ಡ್ ಸ್ಟೋರೇಜ್‌ಗಳಲ್ಲಿ ಸಂಗ್ರಹಿಸುತ್ತಾರೆ. ಜಮೀನಿನಲ್ಲಿ ಉತ್ಪನ್ನ ಕಡಿಮೆಯಾದ ಮೇಲೆ ಕೋಲ್ಡ್ ಸ್ಟೋರೇಜ್‌ನಿಂದ ಮೆಣಸಿನಕಾಯಿ ಮಾರುಕಟ್ಟೆಗೆ ತಂದು ಮಾರುತ್ತಾರೆ. ವರ್ಷದಿಂದ ವರ್ಷಕ್ಕೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಅಧಿಕ ಪ್ರಮಾಣದ ಆವಕದ ಜೊತೆಗೆ ವಹಿವಾಟು ಕೂಡಾ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದಕ್ಕೆ ಇಲ್ಲಿನ ವರ್ತಕರ ಸಂಘದ ನ್ಯಾಯಯುತ ನಿಯಮಗಳೇ ಕಾರಣ ಎನ್ನುವುದು ವರ್ತಕ ಮಹದೇವಪ್ಪ ಅಭಿಪ್ರಾಯ.
ಇದನ್ನೂ ಓದಿ: ಬಹು ಬೆಳೆ ಬೇಸಾಯದಿಂದ ಹಾವೇರಿ ರೈತನಿಗೆ ಲಕ್ಷ ಲಕ್ಷ ಆದಾಯ - Multi Cropping