ಚಿಕ್ಕಮಗಳೂರು: ಲೋಕಸಭೆ ಚುನಾವಣೆಯ ಅಖಾಡ ರಂಗೇರುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ಕಳಸ ತಾಲೂಕಿನಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರಕ್ಕೆ (ಹೊರನಾಡು) ಮಾಜಿ ಮುಖ್ಯಮಂತ್ರಿ ಹಾಗು ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ತಮ್ಮ ಕುಟುಂಬ ಸದಸ್ಯರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಇದಕ್ಕೂ ಮುನ್ನ ಬಿಎಸ್‌ವೈ ಕುಟುಂಬಕ್ಕೆ ದೇಗುಲದ ಆಡಳಿತ ಮಂಡಳಿ ಅದ್ಧೂರಿ ಸ್ವಾಗತ ನೀಡಿತು. ಅನ್ನಪೂರ್ಣೇಶ್ವರಿ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಕುಟುಂಬ ಸದಸ್ಯರು, ದೇವಸ್ಥಾನದ ಆವರಣದಲ್ಲಿ ರಥೋತ್ಸವ ಸೇವೆ ಮಾಡಿಸಿದರು. ಅನ್ನಪೂರ್ಣೇಶ್ವರಿ ಕುಳಿತ ರಥವನ್ನು ದೇವಸ್ಥಾನದ ಸುತ್ತ ಯಡಿಯೂರಪ್ಪ ಹಾಗೂ ಪುತ್ರ ಬಿ.ವೈ ವಿಜಯೇಂದ್ರ ಎಳೆದರು.
ರಥ ಎಳೆಯುವಾಗ ದೇಗುಲದ ಆವರಣದಲ್ಲಿ ಮಂತ್ರ ಘೋಷ ಮೊಳಗಿತು. ಯಡಿಯೂರಪ್ಪ ಕುಟುಂಬದ 20ಕ್ಕೂ ಹೆಚ್ಚು ಸದಸ್ಯರು ಆಗಮಿಸಿದ್ದರು. ಬಿಎಸ್‌ವೈ ಕುಟುಂಬ ದೇಗುಲದಲ್ಲಿ ಚಂಡಿಕಾಹೋಮವನ್ನೂ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತಮ್ಮ ಕುಟುಂಬ ಹಾಗೂ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಹೋಮ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ದತ್ತು ಕಾಯ್ದೆ ಉಲ್ಲಂಘನೆ ಕೇಸ್: ಸೋನು ಶ್ರೀನಿವಾಸ್ ಗೌಡರನ್ನು ರಾಯಚೂರಿಗೆ ಕರೆದೊಯ್ದ ಪೊಲೀಸರು - Sonu Shrinivas Gowda
ಈಗಾಗಲೇ ಲೋಕಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದ ಮತದಾನ ಏಪ್ರಿಲ್ 19ಕ್ಕೆ ಆರಂಭವಾಗಲಿದೆ. ಜೂನ್ 1ರ ವರೆಗೂ ಮತದಾನ ಜರುಗಲಿದೆ. ಜೂನ್ 4ಕ್ಕೆ ಕಣಕ್ಕಿಳಿದಿರುವ ಅಭ್ಯರ್ಥಿಗಳ ಫಲಿತಾಂಶ ಹೊರಬರಲಿದೆ.
ವಿವಿಧ ರಾಜಕೀಯ ಪಕ್ಷಗಳು ಒಂದರ ಹಿಂದೊಂದರಂತೆ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಅನಾವರಣಗೊಳಿಸುತ್ತಿವೆ. ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಂತಿಮವಾಗಿದ್ದು, ಕೆಲಕ್ಷೇತ್ರಗಳಷ್ಟೇ ಬಾಕಿ ಉಳಿದಿವೆ. ಅಂತಿಮಗೊಂಡಿರುವ ಅಭ್ಯರ್ಥಿಗಳು ಈಗಾಗಲೇ ಪ್ರಚಾರ ಕೈಗೊಂಡಿದ್ದಾರೆ.
ಇದನ್ನೂ ಓದಿ: ಸರ್ಕಾರ ಮಹಿಳೆಯರ ಖಾತೆಗಳಿಗೆ ಹಣ ಹಾಕುತ್ತಿರುವುದೇಕೆ? ಡಿಕೆಶಿ ಕೊಟ್ಟ ಕಾರಣ ಇದು! - D K Shivakumar