ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕಾಂತೇಶ್ಗೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಬೇಕೆಂದು ಅವರ ಬೆಂಬಲಿಗರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಶಿವಮೊಗ್ಗದ ನಿವಾಸದಲ್ಲಿ ಭೇಟಿಯಾಗಿ ಮನವಿ ಮಾಡಿದರು. ಈ ವೇಳೆ ಕಾಂತೇಶ್ಗೆ ಟಿಕೆಟ್ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದರು.
ನಂತರ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಬಿಎಸ್ವೈ, ''ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೊಡಿಸಲು ಶಕ್ತಿಮೀರಿ ಪ್ರಯತ್ನ ಮಾಡುತ್ತೇನೆ. ಈಗಲೂ ಕಾಲ ಮಿಂಚಿಲ್ಲ, ಈಶ್ವರಪ್ಪನವರು ನನ್ನ ಜೊತೆ ಬಂದರೆ, ದೆಹಲಿಗೆ ಕರೆದುಕೊಂಡು ಹೋಗುತ್ತೇನೆ. ಗೃಹ ಸಚಿವ ಅಮಿತ್ ಶಾ ಅವರ ಜೊತೆ ಮಾತನಾಡಿಸುತ್ತೇನೆ. ಸೀಟ್ ಕೊಡಿಸಲು ನನ್ನಿಂದ ಆಗುವ ಎಲ್ಲಾ ಪ್ರಯತ್ನ ಮಾಡುತ್ತೇನೆ'' ಎಂದರು.
''ಎಲ್ಲಾ ರೀತಿಯ ಪ್ರಯತ್ನ ಮಾಡಲು ನಾನು ಸಿದ್ಧನಿದ್ದೇನೆ. ಈಶ್ವರಪ್ಪ ಬಂದರೆ ಜೊತೆಗೆ ಕರೆದುಕೊಂಡು ಮಾತನಾಡಬಹುದು. ನಿಮ್ಮ ಮೂಲಕ ಅವರಿಗೆ ಈ ಬಗ್ಗೆ ಮನವಿ ಮಾಡುತ್ತಿದ್ದೇನೆ. ಈಶ್ವರಪ್ಪನವರೇ ದಯವಿಟ್ಟು ಬನ್ನಿ, ದೆಹಲಿಗೆ ಕರೆದುಕೊಂಡು ಹೋಗುತ್ತೇನೆ'' ಎಂದು ತಿಳಿಸಿದರು. ''ಚುನಾವಣೆ ಸಮಿತಿ ಸಭೆಯನ್ನು ನಾಳೆ ಮತ್ತೆ ಕರೆಯಬಹುದು, ಈ ಸಭೆಯಲ್ಲಿ ಪ್ರಧಾನಿ ಮೋದಿ ಕೂಡ ಭಾಗಿಯಾಗಬಹುದು. ಹಾಗಾಗಿ, ಒಂದು ದಿನ ಮುಂದೂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಈಗ ಬೆಂಗಳೂರಿಗೆ ಹೋಗುತ್ತಿದ್ದೇನೆ'' ಎಂದು ಇದೇ ವೇಳೆ ಯಡಿಯೂರಪ್ಪ ಮಾಹಿತಿ ನೀಡಿದರು.
ಪ್ರಹ್ಲಾದ್ ಜೋಶಿಗೆ ಕಾಂತೇಶ್ ಬೆಂಬಲಿಗರ ಮನವಿ: ಈಶ್ವರಪ್ಪ ಪುತ್ರ ಕಾಂತೇಶ್ ಅವರಿಗೆ ಹಾವೇರಿ-ಗದಗ ಲೋಕಸಭೆ ಟಿಕೆಟ್ ನೀಡಬೇಕೆಂದು ಎಂದು ಹಾವೇರಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಶಿವಮೊಗ್ಗದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೂ ಮನವಿ ಮಾಡಿದ್ದಾರೆ.
ಶಿವಮೊಗ್ಗದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ವಿಪ್ರ ಸಮಾಜದವರ ವತಿಯಿಂದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾವೇಶದಲ್ಲಿ ಭಾಗವಹಿಸಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ವಾಪಸ್ ತೆರಳುವಾಗ ಬಿಜೆಪಿ ಕಾರ್ಯಕರ್ತರು, ಈಶ್ವರಪ್ಪ ಹಾಗೂ ಕಾಂತೇಶ್ ಅಭಿಮಾನಿಗಳು ಟಿಕೆಟ್ ನೀಡುವಂತೆ ಆಗ್ರಹಿಸಿದರು. ಈ ವೇಳೆ, ''ಟಿಕೆಟ್ ನಾನು ಕೊಡುವುದಲ್ಲ. ಕೇಂದ್ರದ ಚುನಾವಣಾ ಸಮಿತಿ ನೀಡುತ್ತದೆ, ನೋಡೋಣ'' ಎಂದು ಜೋಶಿ ಪ್ರತಿಕ್ರಿಯಿಸಿದರು.
ಈ ವೇಳೆ ಮಾತನಾಡಿದ ಹಾವೇರಿಯ ಕಾಂತೇಶ್ ಅಭಿಮಾನಿ ಬಸವರಾಜ್, ''ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಶ್ವರಪ್ಪನವರಿಗೆ ಫೋನ್ ಮಾಡಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಬೇಡ ಎಂದಾಕ್ಷಣ ಮರು ಮಾತನಾಡದೆ, ಕೇಂದ್ರಕ್ಕೆ ರಾಜೀನಾಮೆ ಪತ್ರ ಕಳುಹಿಸಿಕೊಟ್ಟಿದ್ದರು. ನಮ್ಮ ಹಾವೇರಿ ಜಿಲ್ಲೆಯಲ್ಲಿ 12.50 ಲಕ್ಷಕ್ಕೂ ಅಧಿಕ ವೀರಶೈವ ಲಿಂಗಾಯತರು ಇದ್ದಾರೆ. ಎಲ್ಲರೂ ಸಹ ಕಾಂತೇಶ್ ಪರ ಇದ್ದಾರೆ. ಹೀಗಾಗಿ, ಕಾಂತೇಶ್ ಅವರಿಗೆ ಟಿಕೆಟ್ ಕೊಡಬೇಕು'' ಎಂದು ಆಗ್ರಹಿಸಿದರು.
ಯಡಿಯೂರಪ್ಪ ಮೇಲೆ ವಿಶ್ವಾಸವಿದೆ: ''ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ'' ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಶನಿವಾರ ಶಿವಮೊಗ್ಗದಲ್ಲಿ ತಿಳಿಸಿದ್ದರು. ''ನಾವು ಕಾಂತೇಶ್ ಸ್ಪರ್ಧೆಗೂ ಮುನ್ನ ಯಡಿಯೂರಪ್ಪ ಬಳಿ ಮಾತನಾಡಿದ್ದೆವು. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವಂತೆ ಅವರು ಹೇಳಿದ್ದರು. ಹಾಗಾಗಿ, ಅವರು ಆ ಮಾತನ್ನು ತಪ್ಪುವುದಿಲ್ಲ ಎಂಬ ವಿಶ್ವಾಸವಿದೆ. ಹಾವೇರಿ ಕ್ಷೇತ್ರದಿಂದ ಬೇರೆಯವರು ಸ್ಪರ್ಧಿಸುತ್ತಾರೆ ಎಂಬ ವಿಚಾರ ಮಾಧ್ಯಮಗಳಲ್ಲಿ ಬಂದ ಕಾರಣ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ'' ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: ಚುನಾವಣಾ ಸಮಿತಿ ಸಭೆ ಮುಂದೂಡಿಕೆ: ಬಿ.ಎಸ್.ಯಡಿಯೂರಪ್ಪ