ಉಳ್ಳಾಲ (ಮಂಗಳೂರು): ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯನ್ನು ಅಟ್ಟಾಡಿಸಿ ತಲವಾರಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ವಿ.ಕೆ. ಫರ್ನಿಚರ್ ಕಟ್ಟಡದ ಹಿಂಭಾಗದಲ್ಲಿ ಭಾನುವಾರ ತಡರಾತ್ರಿ ವೇಳೆ ನಡೆದಿದೆ.
ಉಳ್ಳಾಲ ಕಡಪ್ಪುರ ನಿವಾಸಿ ಸಮೀರ್ (35) ಹತ್ಯೆಯಾದಾತ. ರಾತ್ರಿ 10ರ ಸುಮಾರಿಗೆ ತಾಯಿ ಜೊತೆಗೆ ಕಲ್ಲಾಪುವಿನ ರೆಸ್ಟೋರೆಂಟ್ ಒಂದಕ್ಕೆ ಊಟಕ್ಕೆಂದು ಬಂದ ಸಂದರ್ಭ ಹಿಂಬದಿಯಿಂದ ಕಾರಿನಲ್ಲಿ ಹಿಂಬಾಲಿಸಿದ್ದ ತಂಡ ಸಮೀರ್ ಇಳಿಯುತ್ತಿದ್ದಂತೆ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದೆ.
ಅಪಾಯವನ್ನು ಅರಿತ ಸಮೀರ್ ತಕ್ಷಣ ಸ್ಥಳದಿಂದ ಓಡಲು ಯತ್ನಿಸಿದ್ದಾನೆ. ಈ ವೇಳೆ ಅಟ್ಟಾಡಿಸಿದ ಐದು ಮಂದಿಯ ತಂಡ ಕಲ್ಲಾಪು ಜಂಕ್ಷನ್ನಿಂದ 500 ಮೀಟರ್ ದೂರದಲ್ಲಿರುವ ವಿ.ಕೆ. ಫರ್ನಿಚರ್ ಹಿಂಭಾಗದವರೆಗೂ ಅಟ್ಟಾಡಿಸಿ, ಅಲ್ಲಿ ತಲವಾರಿನಿಂದ ಕೊಚ್ಚಿ ಹತ್ಯೆ ಮಾಡಿದೆ. 2018 ರಲ್ಲಿ ರೌಡಿಶೀಟರ್ ಟಾರ್ಗೆಟ್ ಇಲ್ಯಾಸ್ನನ್ನು ಜೆಪ್ಪುವಿನ ಫ್ಲಾಟ್‍ವೊಂದರಲ್ಲಿ ದಾವುದ್, ಸಮೀರ್, ರಿಯಾಝ್, ನಮೀರ್, ಅಬ್ದುಲ್ ಖಾದರ್, ಉಮ್ಮರ್ ನವಾಫ್, ಮೊಹಮ್ಮದ್ ನಝೀರ್, ನೌಷಾದ್, ಅಝ್ಗರ್ ಆಲಿ ಎಂಬವರು ಸೇರಿಕೊಂಡು ಕೊಲೆ ಮಾಡಿದ್ದರು.
ಪ್ರಕರಣದಲ್ಲಿ ಸಮೀರ್ ಎರಡನೇ ಆರೋಪಿಯಾಗಿದ್ದು, ದಾವುದ್ ಮತ್ತು ಸಮೀರ್ ಇಬ್ಬರು ನೇರವಾಗಿ ಫ್ಲ್ಯಾಟ್ ಪ್ರವೇಶಿಸಿ ಇಲ್ಯಾಸ್ನನ್ನು ಹತ್ಯೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿತ್ತು. ಪ್ರಕರಣ ಸಂಬಂಧ ಜೈಲುಪಾಲಾದ ಸಮೀರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ.
ಕೊಲೆಯಾದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಉಳ್ಳಾಲ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ: ಪ್ರೀತಿಗೆ ಪೋಷಕರ ವಿರೋಧ; ಪ್ರೇಮಿಗಳಿಬ್ಬರು ಆತ್ಮಹತ್ಯೆ