ಕಾರವಾರ: ಅಂಕೋಲಾದ ಶಿರೂರು ಗುಡ್ಡ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ವೇಳೆ ಮನುಷ್ಯರ ಮೂಳೆಯೊಂದು ಪತ್ತೆಯಾಗಿದೆ. ಅದರ ಗುರುತು ಪತ್ತೆಗಾಗಿ ತಾಲೂಕು ಆಡಳಿತವು ಡಿಎನ್ಎ ಪರೀಕ್ಷೆಗೆ ಕಳುಹಿಸಿದೆ.
ಶಿರೂರು ಬಳಿ ಗಂಗಾವಳಿ ನದಿಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ವೇಳೆ ಮುಳುಗು ತಜ್ಞರು ಶೋಧಕಾರ್ಯ ನಡೆಸುತ್ತಿರುವ ವೇಳೆ ಮನುಷ್ಯನ ಮೂಳೆ ಪತ್ತೆಯಾಗಿದೆ. ಸದ್ಯ ಮೂರನೇ ಹಂತದ ಶೋಧ ಕಾರ್ಯ ನಡೆಸುತ್ತಿರುವ ಡ್ರೆಜ್ಜರ್ ತಂಡ ನಾಪತ್ತೆಯಾಗಿರುವ ಜಗನ್ನಾಥ ನಾಯ್ಕ ಹಾಗೂ ಲೋಕೇಶ್‌ಗಾಗಿ ಶೋಧ ಕಾರ್ಯ ಮುಂದುವರೆಸಿದೆ.
ಕಳೆದ ಎರಡು ದಿನಗಳ ಹಿಂದೆ ವಿದ್ಯುತ್ ಟವರ್ ಹೊರತೆಗೆದಿದ್ದ ಡ್ರೆಜ್ಜರ್ ಕ್ರೇನ್, ಇಂದು ಕೂಡ ಕಾರ್ಯಾಚರಣೆ ಮುಂದುವರೆಸಿದೆ. ನಿನ್ನೆ ಟವರ್ ಪತ್ತೆಯಾದ ಜಾಗದಲ್ಲೇ ಮೂಳೆ ಕೂಡ ಸಿಕ್ಕಿದೆ. ಅದೇ ಜಾಗದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ನದಿಯಾಳದಲ್ಲಿ ಆಲದ ಮರ ಇದ್ದ ಜಾಗದಲ್ಲಿಯೂ ಶೋಧ ಕಾರ್ಯ ನಡೆಯುತ್ತಿದೆ. ಆಲದ ಮರವು ಈ ಹಿಂದೆ ಹೋಟೆಲ್ ಇದ್ದ ಸ್ಥಳಕ್ಕೆ ಹೊಂದಿಕೊಂಡಿತ್ತು. ಜಗನ್ನಾಥ ಕೂಡ ಹೋಟೆಲ್ನಲ್ಲಿಯೇ ಇದ್ದ ಕಾರಣ ಕುಟುಂಬಸ್ಥರು ಹೋಟೆಲ್ ಇದ್ದ ಕೆಳಭಾಗದಲ್ಲಿ ಹುಟುಕಾಟಕ್ಕೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಶೋಧ ತೀವ್ರಗೊಳಿಸಲಾಗಿದೆ.
ಸ್ಥಳಕ್ಕೆ ಶಾಸಕ ಸತೀಶ್ ಸೈಲ್ ದೌಡಾಯಿಸಿದ್ದು, ಮೂಳೆಯನ್ನು ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗಿದೆ. ಡಿಎನ್‌ಎ ಪರೀಕ್ಷೆ ಬಳಿಕ ಮೂಳೆಯ ಗುರುತು ಪತ್ತೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ, ಸರ್ಕಾರಿ ಶಾಲೆ ಜಲಾವೃತ - Davanagere Rain