ಮೈಸೂರು: ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅರ್ಧಕ್ಕಿಂತ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಭವಿಷ್ಯ ನುಡಿದಿದ್ದಾರೆ. ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಅವರಿಂದ ತಮ್ಮ ನಿವಾಸದಲ್ಲಿ ಸನ್ಮಾನ ಸ್ವೀಕರಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲೋದು ಕಷ್ಟ. ಯಾಕಂದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸ್ಟ್ರಾಂಗ್ ಇದೆ ಎಂದರು.
ಕರ್ನಾಟಕದಲ್ಲಿ ಬಿಜೆಪಿ ಬಹಳ ವೀಕ್ ಇದೆ. ಕಳೆದ ಬಾರಿ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿಯವರು, ಸರ್ಕಾರವನ್ನು ಸರಿಯಾಗಿ ನಡೆಸಲಿಲ್ಲ. ಈ ಅಂಶವನ್ನು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬಹಳ ಚೆನ್ನಾಗಿ ಬಳಸಿಕೊಂಡಿತು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಸ್ಥಿತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದನ್ನು ಮರೆ ಮಾಚಲು ಕಾಂಗ್ರೆಸ್ , ಕೇಂದ್ರದ ಕಡೆ ಬೊಟ್ಟು ಮಾಡುತ್ತಿದೆ. ಜತೆಗೆ ಕೇಂದ್ರದಿಂದ ಬಂದ ಅನುದಾನವನ್ನು ಫ್ರೀ ಬೀಸ್ಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಮಾದರಿ ಸರ್ಕಾರ ನಡೆಸಿದ್ದರೆ ಹೆಚ್ಚು ಸೀಟ್ ಗೆಲ್ಲಬಹುದಿತ್ತು. ನರೇಂದ್ರ ಮೋದಿ ಅಲೆ ಕಡಿಮೆ ಆಗಿದೆಯೋ, ಇಲ್ವೋ ಗೊತ್ತಿಲ್ಲ. ಆದರೆ ಈ ಬಾರಿಯೂ ಕೇಂದ್ರದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ ಎಂದು ಭವಿಷ್ಯ ನುಡಿದರು.
ಪ್ರತಾಪ್ ಸಿಂಹ ಡೈನಾಮಿಕ್ ಮ್ಯಾನ್: ಇನ್ನು ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಪ್ರತಾಪ್ ಸಿಂಹ ಡೈನಾಮಿಕ್ ಮ್ಯಾನ್. ಅವರು ತುಂಬಾ ಕೆಲಸ ಮಾಡಿದ್ದಾರೆ. ಕೊಡಗಿನಲ್ಲಿ ಟಿಪ್ಪು ಜಯಂತಿಗೆ ಬ್ರೇಕ್ ಹಾಕಿದ್ದಾರೆ. ಅವರ ಬಳಿ ಫೈಟಿಂಗ್ ಸ್ಪಿರೀಟ್ ಇದೆ. ಇವತ್ತು ಕೂಡ ಫೈಟಿಂಗ್ ಸ್ಪಿರೀಟ್‌ನಲ್ಲಿ ಇದ್ದಾರೆ. ಟಿಕೆಟ್ ಮಿಸ್ ಆದರೆ ಏನಾಗುತ್ತೆ. ಸಂಸದನಾದರೆ ಅಲ್ಲೇ ಕೇಂದ್ರೀಕೃತವಾಗಿರುತ್ತಾರೆ. ಅದನ್ನ ಬಿಟ್ಟು ಮಾಡುವುದಕ್ಕೆ ಬಹಳ ಕೆಲಸ ಇದೆ. ಅದೇ ಉತ್ಸಾಹದಲ್ಲಿ ಪ್ರತಾಪ್ ಸಿಂಹ ಇದ್ದಾರೆ. ಯದುವೀರ್‌ಗೆ ಟಿಕೆಟ್ ಕೊಟ್ಟಿರೋದಕ್ಕೆ ಒಂದಕ್ಕೊಂದು ವಿರೋಧ ಇಲ್ಲ. ಯದುವೀರ್‌ಗೆ ಟಿಕೆಟ್ ಕೊಟ್ಟಿದ್ದು ಒಳ್ಳೆಯದೇ ಆಯ್ತು. ಯದುವೀರ್ ಹಿನ್ನೆಲೆ ನೋಡಿದಾಗ ಇವರಿಗೆ ಸ್ಥಾನಮಾನ ಕೊಟ್ಟರೆ ಉತ್ತಮವಾಗಿ ನಿಭಾಯಿಸುತ್ತಾರೆ ಅನಿಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗುಜರಾತಿಗಳು ಪ್ರಮಾಣಿಕರು: ಗುಜರಾತಿನವರು ಆಕ್ಟಿವ್ ಹಾಗೂ ಆನೆಸ್ಟ್ ಆಗಿ ಕೆಲಸ ಮಾಡುತ್ತಾರೆ. ನಮ್ಮಲ್ಲಿ ಅಂಗಡಿ ವ್ಯಾಪಾರಿಗಳು ಅಂದ್ರೆ ಪೂರ್ಣ ಪ್ರಾಮಾಣಿಕರು ಎಂದು ಹೇಳೊಕೆ ಆಗಲ್ಲ. ಆದರೆ, ಗುಜರಾತ್‌ನಲ್ಲಿ 6 ವರ್ಷದ ಮಗು ಕೈಯಲ್ಲಿ ಹಣ ಕೊಟ್ಟು ಕಳುಹಿಸಿದ್ರೂ ವ್ಯಾಪಾರಸ್ಥರು ಪ್ರಾಮಾಣಿಕವಾಗಿ ಚಿಲ್ಲರೆ ಕೊಟ್ಟು ಕಳುಹಿಸುತ್ತಾರೆ. ಹಾಗೇ ಗುಜರಾತಿಗಳು ಸುಳ್ಳು ಹೇಳಲ್ಲ. ಅವರು ವ್ಯಾಪಾರಿಯಾಗಿ ಪ್ರಮಾಣಿಕರಾಗಿದ್ದಾರೆ. ವ್ಯಾಪಾರ ಕೇವಲ ಹಣಕ್ಕಾಗಿ ಅಲ್ಲ, ದೇಶಕ್ಕಾಗಿ ಮಾಡುತ್ತಾರೆ. ಅದಿಲ್ಲ ಅಂದರೆ ಯಾವ ದೇಶ ಉದ್ದಾರ ಆಗೋಕೆ ಸಾಧ್ಯ ಹೇಳಿ. ಮೋದಿ ಅವರಿಗೂ ಅದೇ ಇದೆ. ಅವರು ವ್ಯಾಪಾರ ಬಿಟ್ಟು ಬರುವಾಗ ಅಲ್ಲಿದ್ದ ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತಮ್ಮ ಬಳಿ ಇದ್ದ 23 ಲಕ್ಷ ಕೊಟ್ಟು ಬಂದರು. ಅದೊಂದು ಮಾದರಿ ಆಯ್ತು ಎಂದು ಹೇಳಿದರು.