ಬೆಂಗಳೂರು: ಮೈಸೂರು ಮುಡಾ ಹಗರಣ ಪ್ರಕರಣ ಕುರಿತು ನಿಯಮ 59ರ ಅಡಿ ಚರ್ಚೆಗೆ ಅನುಮತಿ ನೀಡುವಂತೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಂಡಿಸಿದ ನಿಲುವಳಿ ಸೂಚನೆಯನ್ನು ಚರ್ಚೆಗೆ ಪರಿಗಣಿಸಲು ನಿರಾಕರಿಸಿ ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದರು.
ವಿಧಾನ ಪರಿಷತ್ ಕಲಾಪದಲ್ಲಿ ಮುಡಾ ಹಗರಣ ಪ್ರಕರಣದ ಚರ್ಚೆಗೆ ಅನುಮತಿ ನೀಡುವಂತೆ ನಿಲುವಳಿ ಸೂಚನೆ ಮಂಡನೆಗೆ ಅನುಮತಿ ಕೋರಿದ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ನಿಯಮ 59ರ ಅಡಿ ನಿಲುವಳಿ ಸೂಚನೆ ಮಂಡನೆ ಮಾಡಿದರು. ಆದರೆ, ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡದೇ ಗದ್ದಲ ಎಬ್ಬಿಸಿದ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಈಗಾಗಲೇ ನಿವೃತ್ತ ನ್ಯಾಯಮೂರ್ತಿಗಳ ಏಕಸದಸ್ಯ ತನಿಖಾ ಆಯೋಗ ರಚನೆ ಮಾಡಲಾಗಿದೆ. ಅವಶ್ಯಕತೆ ಇಲ್ಲ ಎಂದು ಸಭಾನಾಯಕ ಬೋಸರಾಜ್ ವಿರೋಧಿಸಿದರು. ಆಡಳಿತ ಪಕ್ಷದ ಸದಸ್ಯರ ವಿರೋಧದ ನಡುವೆಯೂ ಮುಡಾ ನಿಲುವಳಿ ಪ್ರಸ್ತಾಪಿಸಿದ ಛಲವಾದಿ ನಾರಾಯಣಸ್ವಾಮಿ, ಮುಡಾದಿಂದ ಸಾವಿರಾರು ಕೋಟಿ ಮೌಲ್ಯದ ಸೈಟುಗಳನ್ನು ಹಂಚಿಕೆ ಮಾಡಲಾಗಿದೆ. ಡಿನೋಟಿಫೈ ಮಾಡಲಾದ ಜಮೀನನ್ನು ಬಳಸಿಕೊಂಡು ಅಕ್ರಮ ಸೈಟು ಹಂಚಿಕೆ ಮಾಡಲಾಗಿದೆ. ರೈತರ ಜಮೀನಿನ ಮೌಲ್ಯಕ್ಕಿಂತ ದುಬಾರಿ ಸೈಟು ಪಡೆಯಲಾಗಿದೆ. ಇಲ್ಲಿ ಸಾವಿರಾರು ಕೋಟಿ ಅವ್ಯವಹಾರವಾಗಿದೆ. ಕಾಣದ ಕೈಗಳ ಕೈಚಳಕದಿಂದ ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಪರಭಾರೆ ಮಾಡಲಾಗಿದೆ. ಸತ್ತವರ ಹೆಸರಿಗೂ ಪರಭಾರೆ ಮಾಡಲಾಗಿದೆ. ಮುಡಾ ಅಕ್ರಮದ ಕುರಿತು ನಿಲುವಳಿ ಸೂಚನೆ ಮೇರೆಗೆ ಚರ್ಚಿಸಲು ಅನುಮತಿ ನೀಡುವಂತೆ ಕೋರಿದರು.
ವಿರೋಧ ಪಕ್ಷದ ನಿಲುವಳಿ ಸೂಚನೆಯನ್ನು ತಿರಸ್ಕರಿಸಿ ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದರು. ರಾಜ್ಯ ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದ ಆಯೋಗ ನೇಮಿಸಿ ವರದಿ ನೀಡಲು ಆಯೋಗಕ್ಕೆ ಸೂಚಿಸಿದೆ ಹಾಗಾಗಿ ವಿರೋಧ ಪಕ್ಷದ ನಾಯಕರು ನಿಯಮ 59 ರ ಅಡಿ ಮಂಡಿಸಿದ ನಿಲುವಳಿ ಸೂಚನೆಯನ್ನು ನಿಯಮ 62 ರ ಅಡಿ ಚರ್ಚೆಗೆ ಅನುಮತಿ ನಿರಾಕರಿಸಿಲಾಗಿದೆ ಎಂದು ರೂಲಿಂಗ್ ನೀಡಿದರು.
ಆದರೂ ಚರ್ಚೆಗೆ ಬಿಜೆಪಿ ಜೆಡಿಎಸ್ ಪಟ್ಟು ಹಿಡಿದರೆ ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿಕೆ ಮಾಡಲಾಯಿತು.