ಹಾಸನ : ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಹತಾಶವಾಗಿದೆ. ಬೇಜವಾಬ್ದಾರಿತನದಿಂದ ಸರ್ಕಾರ ನಡೆಸುತ್ತಿದೆ. ಚುನಾವಣೆ ಬಳಿಕ ಏಕಾಏಕಿ ತೈಲ ಬೆಲೆ ಏರಿಕೆ ಮಾಡುವ ಮೂಲಕ ಜನರನ್ನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಹಾಸನದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜನ ಹಿಡಿಶಾಪ ಹಾಕುತ್ತಿದ್ದಾರೆ. ಬರಗಾಲದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಜನರಿಗೆ ಪೆಟ್ರೋಲ್ ಮತ್ತು ಡಿಸೇಲ್ ದರದಿಂದ ಸರಕು ಸಾಗಾಣಿಕೆ ಮೇಲೆ ಹೊರೆ ಬೀಳಲಿದೆ. ಇದರಿಂದ ದಿನನಿತ್ಯದ ತರಕಾರಿ ಬೆಲೆಯಿಂದ ಹಿಡಿದು ಪ್ರತಿ ವಸ್ತುಗಳ ಮೇಲೆ ಆರ್ಥಿಕ ಹೊರೆಯಾಗಲಿದೆ ಎಂದಿದ್ದಾರೆ.
ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೆ, ರೈತಾಪಿ ವರ್ಗದವರಿಗೂ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಇದು ರಾಜ್ಯ ಸರ್ಕಾರದ ಬೇಜವಾಬ್ದಾರಿ ಜನಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ನಾಳೆಯಿಂದ ರಾಜ್ಯಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿರುದ್ಧ ಹಾಗೂ ಕಾಂಗ್ರೆಸ್ ಪಕ್ಷದ ಬೇಜವಾಬ್ದಾರಿತನದ ವಿರುದ್ಧ ಪಕ್ಷ ಹೋರಾಟಕ್ಕಿಳಿಯಲಿದೆ ಎಂದು ಹೇಳಿದ್ದಾರೆ.
ಸರ್ಕಾರ ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಅದಕ್ಕೆ ಹಣ ಹೊಂದಿಸಲು ಸಾಧ್ಯವಾಗದೆ ಈ ರೀತಿ ಜನರಿಂದಲೇ ವಸೂಲಿ ಮಾಡುವಂತಹ ಕಾರ್ಯಕ್ಕೆ ಕೈ ಹಾಕಿರುವುದು ನಿಮ್ಮ ಸರ್ಕಾರದ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮುಖ್ಯಮಂತ್ರಿಗಳು ತಮ್ಮ ಕೈಯನ್ನ ಕಟ್ಟಿ ಹಾಕಿಕೊಂಡು ಕಳೆದ ಒಂದು ವರ್ಷದಿಂದ ರಾಜ್ಯದ ಜನರಿಗೆ ಯಾವುದೇ ಹೊಸ ಯೋಜನೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಒಂದು ಕಡೆ ಯಥೇಚ್ಛವಾಗಿ ಸಾಲ ಮಾಡಿಕೊಂಡು, ಆ ಸಾಲವನ್ನು ತೀರಿಸಲಾಗದೆ ಅದನ್ನ ರಾಜ್ಯದ ಜನರ ಮೇಲೆ ಪರೋಕ್ಷವಾಗಿ ಹೇರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹಾಸನ ಜಿಲ್ಲೆಯಲ್ಲಿಯೂ ಕೂಡ ನಮ್ಮ ಪಕ್ಷದ ಶಾಸಕರಿದ್ದಾರೆ. ಅವರಿಗೆ ಅನುದಾನದ ಕೊರತೆ ಉಂಟಾಗಿದೆ. ರಸ್ತೆ, ಚರಂಡಿ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗದಂತೆ ಸರ್ಕಾರ ಅನುದಾನವನ್ನ ತಡೆಹಿಡಿದಿರುವುದರಿಂದ ಶಾಸಕರುಗಳು, ತಮ್ಮ ತಮ್ಮ ಕ್ಷೇತ್ರದಲ್ಲಿ ತಲೆಯೆತ್ತಿ ತಿರುಗಲು ಸಾಧ್ಯವಾಗುತ್ತಿಲ್ಲ. ಇದರಿಂದ ರಾಜ್ಯ ಸರ್ಕಾರ ಅಭಿವೃದ್ಧಿ ಶೂನ್ಯವಾಗಿದ್ದು, ಜನರ ಮೇಲೆ ಪದೇ ಪದೆ ಆರ್ಥಿಕ ಹೊರೆ ಹೇರುತ್ತಿರುವುದು ಬೇಜವಾಬ್ದಾರಿತನದ ಪರಮಾವಧಿಯಾಗಿದೆ ಎಂದು ಆಕ್ರೋಶ ಹೊರ ಹಾಕಿದ್ರು.
ಸೋರಿಕೆ ತಡೆಯುವ ಬದಲು ಜನರ ಜೇಬಿಗೆ ಕತ್ತರಿ - ಬಿ. ವೈ ರಾಘವೇಂದ್ರ : ರಾಜ್ಯ ಸರ್ಕಾರ ಸೋರಿಕೆ ತಡೆಯುವ ಬದಲಿಗೆ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಸಂಸದ ಬಿ. ವೈ ರಾಘವೇಂದ್ರ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಪೆಟ್ರೋಲ್- ಡೀಸೆಲ್ ದರ ಏರಿಕೆ ಮಾಡಿರುವುದರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯ ಸರ್ಕಾರ ತೆರಿಗೆ ಹೆಚ್ಚಳ ಮಾಡಿ ಜನಸಾಮಾನ್ಯರ ಮೇಲೆ ಸೇಡಿನ ರೀತಿ ತೀರ್ಮಾನ ತೆಗೆದುಕೊಂಡಿದೆ ಎಂದಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಮತ ನೀಡದ ಹಿನ್ನೆಲೆ ರಾಜ್ಯ ಸರ್ಕಾರ ಜನರ ಮೇಲೆ ಸೇಡು ತೀರಿಸಿಕೊಂಡಿದೆ. ಜನರ ಪ್ರಾಣ ಹಿಂಡುವ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರ ಮಧ್ಯಮ ವರ್ಗದವರ ಮೇಲೆ ಹೊರೆ ಹೊರಿಸುವ ಕೆಲಸ ಮಾಡಿದೆ. ಈ ತೀರ್ಮಾನ ಕಡು ಬಡವರು, ರೈತರ ಮೇಲೆ ಪರಿಣಾಮ ಬೀರಲಿದೆ. ಈ ಬೆಲೆ ಏರಿಕೆಯಿಂದಾಗಿ ಇದಕ್ಕೆ ಸಂಬಂಧಿಸಿದ ಎಲ್ಲ ಬೆಲೆಗಳು ಏರಿಕೆಯಾಗಲಿವೆ. ಕೆ.ಎಸ್.ಆರ್.ಟಿ.ಸಿ ಬಸ್ ಪ್ರಯಾಣ ದರ ಹೆಚ್ಚಳವಾಗಲಿದೆ ಎಂದು ಹೇಳಿದ್ದಾರೆ.
ಒಂದು ಕೈಯಲ್ಲಿ ಗ್ಯಾರಂಟಿ ಯೋಜನೆ ನೀಡಿ, ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಈ ಬೆಲೆ ಏರಿಕೆಯಿಂದ ಸರ್ಕಾರದ ಖಜಾನೆ ತುಂಬುವ ಕೆಲಸ ಆಗುತ್ತಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ. ಗ್ಯಾರಂಟಿ ಹೆಸರು ಹೇಳಿಕೊಂಡು ರಾಜ್ಯದ ಅಭಿವೃದ್ಧಿ ಕಡೆಗಣಿಸಿದೆ. ರಾಜಕೀಯ ದ್ವೇಷವನ್ನು ಜನರ ಬಳಿ ತೀರಿಸಿಕೊಳ್ಳುತ್ತಿದೆ ಎಂದು ಹೇಳಿದರು.
ಹಿಂದೆ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ತೈಲ ದರವನ್ನು ಕಡಿಮೆ ಮಾಡಿದ್ದರು. ಅಲ್ಲದೆ, ಕಳೆದ ವರ್ಷ ಬರ ಬಂದಿತ್ತು. ಇದರಿಂದ ರಾಜ್ಯ ಸರ್ಕಾರ ದರ ಏರಿಕೆಯನ್ನು ತಡೆಯಬಹುದಾಗಿತ್ತು. ರಾಜ್ಯ ಸರ್ಕಾರಕ್ಕೆ ಈಗಲೂ ವಿನಂತಿ ಮಾಡುತ್ತೇವೆ. ತೈಲ ದರವನ್ನು ಕಡಿಮೆ ಮಾಡಬೇಕು ಎಂದರು.
ಇದು ಸುಲಿಗೆಕೋರ ಸರ್ಕಾರವಾಗಿದೆ : ಇದೇ ವೇಳೆ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ತೈಲ ದರ ಏರಿಕೆಯನ್ನು ಖಂಡಿಸಿದರು. ಇದು ಸುಲಿಗೆಕೋರ ಸರ್ಕಾರವಾಗಿದೆ. ಅಧಿಕಾರದ ದಾಹದಿಂದ ಜನರ ಸುಲಿಗೆಗೆ ಮುಂದಾಗಿದೆ. ಇವರ ಜನ ವಿರೋಧಿ ನೀತಿಯಿಂದ ಜನಸಾಮಾನ್ಯರ ಬದುಕು ಕಷ್ಟವಾಗುತ್ತಿದೆ. ದಿನ ನಿತ್ಯದ ವಸ್ತುಗಳ ಬೆಲೆಯಲ್ಲಿ ತೀವ್ರ ಹೆಚ್ಚಾಗಲಿದೆ. ರೈತರ ಪಹಣಿ ಸೇರಿದಂತೆ ಪ್ರತಿಯೊಂದರ ದರ ಹೆಚ್ಚಿಸಿದೆ ಎಂದಿದ್ದಾರೆ.
ರಾಜ್ಯದಿಂದ ಬಂಡವಾಳ ಹೂಡಿಕೆದಾರರು ಹಿಂದಿರುಗುತ್ತಿದ್ದಾರೆ. ವಿದ್ಯುತ್ ದರ ಹೆಚ್ಚಳದಿಂದ ಉದ್ಯಮಿಗಳು ರಾಜ್ಯ ತೊರೆಯುತ್ತಿದ್ದಾರೆ. ಈ ಕಾಂಗ್ರೆಸ್ ಯಾವಾಗ ತೊಲಗುತ್ತದೆ ಎಂದು ಜನರು ಕಾಯುತ್ತಿದ್ದಾರೆ ಎಂದು ಹರಿಹಾಯ್ದರು. ಈ ವೇಳೆ ಜಿಲ್ಲಾಧ್ಯಕ್ಷ ಟಿ. ಡಿ ಮೇಘರಾಜ್ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ : ಕಿವಿಗೆ ಹೂವು, ಕೈಗೆ ಚಿಪ್ಪು; ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವಿನೂತನ ಪ್ರತಿಭಟನೆ - PETROL AND DIESEL PRICE