ರಾಯಚೂರು : ದರಿದ್ರ ಕಾಂಗ್ರೆಸ್ ಬಂದ ಮೇಲೆ ರಾಜ್ಯದಲ್ಲಿ ಯಾವ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಲಿಂಗಸುಗೂರಿನಲ್ಲಿ ಆಯೋಜಿಸಿದ್ದ ನಮ್ಮ ಭೂಮಿ, ನಮ್ಮ ಹಕ್ಕು ಬೃಹತ್ ಆಂದೋಲನದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹಾಸನದಲ್ಲಿ ಕಾಂಗ್ರೆಸ್ ಜನಕಲ್ಯಾಣ ಸಮಾವೇಶ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕರು ಕಷ್ಟಪಟ್ಟು ಚುನಾವಣೆ ಗೆದ್ದು, ಸಿದ್ದರಾಮಯ್ಯನವರು ಹೊಸ ಯೋಜನೆಗಳನ್ನ ಕೊಡುತ್ತಾರೆ ಎಂದು ಗುದ್ದಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಅವು ಮನೆಗಳನ್ನ ಸೇರಿವೆ. ಯಾವುದೇ ಗುದ್ದಲಿ ಪೂಜೆ, ಶಂಕುಸ್ಥಾಪನೆಯೂ ನಡೆಯುತ್ತಿಲ್ಲ. ಇಂತಹ ಅಭಿವೃದ್ಧಿ ಶೂನ್ಯ ಸರ್ಕಾರವನ್ನ ಹಿಂದೆಂದೂ ಕೂಡ ನಾಡಿನ ಜನತೆ ನೋಡಿರಲಿಲ್ಲ ಎಂದಿದ್ದಾರೆ.
ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಗಾದಿಗೆ ಪೈಪೋಟಿ ಶುರುವಾಗಿದೆ, ಮುಂದೆ ಯಾವುದೇ ಹಂತಕ್ಕೆ ಹೋಗಬಹುದು. ಒಪ್ಪಂದ ಆಗಿದೆ, ಬಹಿರಂಗವಾಗಿ ಮಾತಾಡಲ್ಲ ಎಂದಿದ್ದು ಡಿಕೆಶಿ, ನಾವಲ್ಲ. ಶಾಸಕರು ಅವರ ಜೊತೆಯಿಲ್ಲ, ಆದ್ರೂ ಸಿದ್ದರಾಮಯ್ಯ ಮನಸ್ಸು ಗೆಲ್ಲುವ ಶತ ಪ್ರಯತ್ನ ಡಿ. ಕೆ ಶಿವಕುಮಾರ್ ಮಾಡುತ್ತಿದ್ದಾರೆ. ಸಿಎಂ ಖುರ್ಚಿ ಇರುವುದು ಒಂದೇ, ಮುಂದೆ ಏನಾಗುತ್ತೋ ನೋಡೋಣ. ಸಿಎಂ ಗಾದಿಗೆ ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್ ಮಾತ್ರವಲ್ಲ 8 ಜನ ಪೈಪೋಟಿಯಲ್ಲಿದ್ದಾರೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಸರಿ ಹೋಗಲಿದೆ: ಬಿಜೆಪಿಯಲ್ಲಿ ಯತ್ನಾಳ್ ಭಿನ್ನಮತ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪಕ್ಷದಲ್ಲಿನ ಈ ಬೆಳವಣಿಗೆ ಜನರಲ್ಲೂ ಗೊಂದಲ ಮೂಡಿಸಿದೆ. ರಾಜ್ಯದಲ್ಲಿ ಲಕ್ಷಾಂತರ ಕಾರ್ಯಕರ್ತರು ಹಗಲು ರಾತ್ರಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಶ್ರಮ ಹಾಕುತ್ತಿದ್ದಾರೆ. ಇದರ ನಡುವೆ ನನ್ನ ಸೇರಿ ಎಲ್ಲಾ ನಾಯಕರ ನಡವಳಿಕೆಯನ್ನ ಕಾರ್ಯಕರ್ತರು, ಜನರು ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸರಿ ಹೋಗಲಿದೆ ಎಂಬ ವಿಶ್ವಾಸವಿದೆ ಎಂದರು.
ಪಕ್ಷದ ಹಿರಿಯರು ನನಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಟ್ಟ ನಂತರದಲ್ಲಿ ನಾನು ಪ್ರಾಮಾಣಿಕವಾಗಿ ಹಗಲು ರಾತ್ರಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟಿಸುವ ಕೆಲಸ ಮಾಡುತ್ತಿದ್ದೇನೆ. ಕಾರ್ಯಕರ್ತರಿಗೆ ಸ್ಪೂರ್ತಿ, ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇನೆ. ಗಂಭೀರವಾಗಿ ಇದನ್ನ ಪರಿಗಣಿಸಿ ಸರಿ ಮಾಡುವ ಕೆಲಸವನ್ನು ಪಕ್ಷದ ಹಿರಿಯರು, ವರಿಷ್ಠರು ಮಾಡಲಿದ್ದಾರೆ ಎಂಬ ವಿಶ್ವಾಸ ನಮಗಿದೆ ಎಂದು ವಿಜಯೇಂದ್ರ ತಿಳಿಸಿದರು.
ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸಲು ಕೇಂದ್ರ ಬಿಜೆಪಿ ಸರ್ಕಾರ ಕುತಂತ್ರ ನಡೆಸಿದೆ ಎಂಬ ಕಾಂಗ್ರೆಸ್ ನಾಯಕ ಸುರ್ಜೆವಾಲಾ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕುಣಿಯಲು ಬಾರದವನು ನೆಲ ಡೊಂಕು ಅನ್ನೋ ಹಾಗಾಗಿದೆ ಕಾಂಗ್ರೆಸ್ ಪರಿಸ್ಥಿತಿ. ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸ್ಕಾಲರ್ಶಿಪ್ ಬಂದ್ ಮಾಡಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಶಕ್ತಿ ಯೋಜನೆ ನಿಲ್ಲಿಸುವ ಬಗ್ಗೆ ಡಿಕೆಶಿ ಮಾತನಾಡಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚಾಟಿ ಬೀಸಿದ್ದರು. ಕಾಂಗ್ರೆಸ್ ನವರಿಗೆ ಈಗ ಜ್ಞಾನೋದಯವಾಗಿದೆ. ಮನವರಿಕೆ ಮಾಡಿಕೊಳ್ಳುತ್ತಿದ್ದಾರೆ. ಸುರ್ಜೇವಾಲಾ ಈ ರೀತಿ ತಮ್ಮ ಸತ್ಯ ಬಿಚ್ಚಿಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ರಾಜ್ಯದಲ್ಲಿ ಕೆಲ ತಿಂಗಳಿಂದ ವಕ್ಫ್ ನೋಟಿಸ್ ಬಂದಿದ್ದರಿಂದ ರೈತರು ಆತಂಕದಲ್ಲಿದ್ರು. ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ರೈತರು, ಮಠ ಮಾನ್ಯಗಳಿಗೆ ನೋಟಿಸ್ ನೀಡಲಾಗಿತ್ತು. ಎನ್ಡಿಎ ವಕ್ಫ್ ಕಾಯಿದೆ ತರಬೇಕು ಅಂತ, ಜಾಯಿಂಟ್ ಪಾರ್ಲಿಮೆಂಟ್ ಕಮಿಟಿ ಎಲ್ಲೆಡೆ ಓಡಾಡಿ ತಿದ್ದುಪಡಿಗೆ ತಯಾರಿ ನಡೆಸಿದೆ. ಬಿಜೆಪಿ ವಿರೋಧ ಪಕ್ಷವಾಗಿ ರೈತರ ಪರವಾಗಿ ಹೋರಾಟ ಮಾಡಬೇಕು ಅಂತ 3 ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ ರೈತರನ್ನ ಸಂಪೂರ್ಣ ಮರೆತಿದೆ. ಸಿಎಂಗೆ ಯಾಕೆ ರೈತರ ಮೇಲೆ ಆಕ್ರೋಶ ಅನ್ನೋ ಪ್ರಶ್ನೆ ಕಾಡುತ್ತಿದೆ. ಕೇಂದ್ರದ ರೈತರಿಗೆ ಸಿಗುವ ಯೋಜನೆಗಳನ್ನ ಸಿಎಂ ಸಿದ್ದರಾಮಯ್ಯ ಬಂದ್ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.
ಚುನಾವಣೆ ಗೆಲ್ಲುವ ಟೆಕ್ನಿಕ್ ಕಲಿತಿದ್ದಾರೆ: ಬೊಮ್ಮಾಯಿ ಅವರಿದ್ದಾಗ ರೈತ ವಿದ್ಯಾನಿಧಿ ಜಾರಿಗೆ ತಂದಿದ್ದರು, ಅದಕ್ಕೂ ಕಲ್ಲಾಕುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡಿದೆ. ಮತದಾನಕ್ಕೂ ಮುಂಚೆ ಹಣ ವರ್ಗಾವಣೆ ಮಾಡಿ ಚುನಾವಣೆ ಗೆಲ್ಲುವ ಟೆಕ್ನಿಕ್ ಕಲಿತಿದ್ದಾರೆ. ಆದರೆ ರೈತರಿಗೆ, ಜನರಿಗೆ ಮೋಸ ಮಾಡುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸಗಳು ಕೂಡಾ ನಡೆಯುತ್ತಿಲ್ಲ. ಆಡಳಿತ ಪಕ್ಷದ ಶಾಸಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಅಂತ ಹೇಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ದೂರಿದರು.
ಇದನ್ನೂ ಓದಿ : ಸರ್ಕಾರ ಸ್ವಾಮೀಜಿಗಳಿಗೆ ಬೆದರಿಕೆ ಹಾಕುವುದು ಸರಿಯಲ್ಲ, ಅವರ ಪರ ನಾವಿದ್ದೇವೆ: ವಿಜಯೇಂದ್ರ