ರಾಯಚೂರು : ವಕ್ಫ್ ಮೇಲೆ ಕೇಳಿ ಬಂದಿರುವ ಆರೋಪಗಳ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ನೇತೃತ್ವದಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗಿದ್ದು, ಸ್ಥಳ ವೀಕ್ಷಣೆ, ಸಂತ್ರಸ್ತರೊಂದಿಗೆ ಚರ್ಚೆ ಮತ್ತು ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 4ಕ್ಕೆ ಬೀದರ್, ಕಲಬುರ್ಗಿಯಲ್ಲಿ, ಡಿ. 5 ರಂದು ಯಾದಗಿರಿ, ರಾಯಚೂರಿನಲ್ಲಿ ಹೋರಾಟ ನಡೆಸಲಾಗುವುದು. ಬಳಿಕ ಸದನದ ಹೊರಗೆ ಹಾಗೂ ಒಳಗೆ ಗಟ್ಟಿಯಾದ ಹೋರಾಟ ಮಾಡುವುದಾಗಿ ತಿಳಿಸಿದರು.
ಬಹಳಷ್ಟು ದಿನಗಳ ಹಿಂದೆಯೇ ಇದರ ಬಗ್ಗೆ ಪಕ್ಷದ ವತಿಯಿಂದ ತೀರ್ಮಾನ ಆಗಿತ್ತು. ಅಧಿವೇಶನದ ಪೂರ್ವದಲ್ಲಿ ದಿನಾಂಕ ನಿರ್ಧಾರ ಮಾಡಬೇಕು ಅಂತ ಎಲ್ಲ ವರಿಷ್ಠರು ತೀರ್ಮಾನ ಮಾಡಿ ನಿಗದಿ ಮಾಡಲಾಗಿದೆ. ಅದೇ ದಿನಾಂಕದಂದು ಹೋರಾಟ ಮಾಡುತ್ತಿದ್ದಾರೆ. ಇದು ಅಧಿಕೃತವಾದ ಪಕ್ಷದ ಹೋರಾಟ. ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಇಲ್ಲ, ವ್ಯಕ್ತಿಗತವಾಗಿ ಯಾರು ಬೇಕಾದರೂ ಹೋರಾಟ ಮಾಡಬಹುದು ಎಂದರು.
ಗೊಂದಲಗಳು ಸೃಷ್ಟಿಯಾದರೆ ಲಾಭ ಆಗುವುದು ಕಾಂಗ್ರೆಸ್‌ಗೆ: ಶಾಸಕ ಬಸನಗೌಡ ಯತ್ನಾಳ್ ಟೀಂ ಕಾಂಗ್ರೆಸ್‌ನ ಬಿ ಟೀಂ ಅನ್ನೋ ರೇಣುಕಾಚಾರ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಪಕ್ಷ ಸರ್ಕಾರದ ವೈಫಲ್ಯಗಳನ್ನ ಎತ್ತಿ ಹಿಡಿದು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಒಟ್ಟಾಗಿ ಹೋರಾಟ ಮಾಡಬೇಕಿದೆ. ಎಲ್ಲರೂ ಒಗ್ಗಟ್ಟಿನಲ್ಲಿ ಒಂದೇ ಮಾರ್ಗದಲ್ಲಿ ಹೋದಾಗ ಮಾತ್ರ ಕಟ್ಟಿಹಾಕಲಿಕ್ಕೆ ಸಾಧ್ಯ. ಈ ರೀತಿ ಗೊಂದಲಗಳು ಸೃಷ್ಟಿಯಾದರೆ ಲಾಭ ಆಗುವುದು ಕಾಂಗ್ರೆಸ್‌ಗೆ. ಕಾಂಗ್ರೆಸ್‌ನ ಷಡ್ಯಂತ್ರಕ್ಕೆ ಯಾರೂ ಬಲಿಯಾಗಬಾರದು ಅನ್ನೋ ಒಂದು ಅಪೇಕ್ಷೆಯಿದೆ ಎಂದು ಹೇಳಿದರು.
ರಾಜ್ಯಾಧ್ಯಕ್ಷ ಹುದ್ದೆ ಪಕ್ಷದ ಸಂವಿಧಾನಾತ್ಮಕ ಹುದ್ದೆ. ಆ ಹುದ್ದೆಗೆ ಪ್ರತಿಯೊಬ್ಬರು ಗೌರವ ಕೊಡಲೇಬೇಕು. ಹುದ್ದೆಗೆ ಚ್ಯುತಿ ಬರುವಂತಹ ಮಾತುಗಳನ್ನ ಯಾರೂ ಆಡಬಾರದು. ಇದರಿಂದ ಕಾರ್ಯಕರ್ತರಿಗೆ ನೋವಾಗುತ್ತೆ ಎಂದರು.
ಪಕ್ಷಕ್ಕೆ ಹಾನಿ ಮಾಡುವ ನಿಟ್ಟಿನಲ್ಲಿ ಯಾರೂ ಮಾತನಾಡಬಾರದು: ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ವರಿಷ್ಠರ ಕ್ರಮ ಕುರಿತು ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರ ಇನ್ನಿತರ ರಾಜ್ಯಗಳ ಚುನಾವಣೆ ಹಿನ್ನೆಲೆ ವರಿಷ್ಠರಿಗೆ ಸಮಯ ಸಿಕ್ಕಿಲ್ಲ. ಈಗ ವರಿಷ್ಠರ ಗಮನಕ್ಕೆ ಎಲ್ಲವೂ ಬಂದಿದೆ. ವರಿಷ್ಠರು ಎಲ್ಲವನ್ನೂ ಸರಿಪಡಿಸುತ್ತಾರೆ. ಆದರೆ ಎಲ್ಲದಕ್ಕೂ ವರಿಷ್ಠರೇ ಬಂದು ಸರಿಪಡಿಸುವುದಾದರೆ, ಪಕ್ಷದ ಕಾರ್ಯಕರ್ತರಾಗಿ ನಾವೇನು..?. ಇವತ್ತು ಯಾರಾದ್ರು ಶಾಸಕರಾಗಿದ್ರೆ, ಮಾತನಾಡುತ್ತಿದ್ದಾರೆ ಅಂದ್ರೆ ಪಕ್ಷದ ವೇದಿಕೆಯಿಂದ ಬೆಳೆದಿರುತ್ತಾರೆ. ತಾನು ಬೆಳೆದಂತ ಪಕ್ಷಕ್ಕೆ ಹಾನಿ ಮಾಡುವ ನಿಟ್ಟಿನಲ್ಲಿ ಯಾರೂ ಮಾತನಾಡಬಾರದು ಎಂದು ತಿಳಿಸಿದರು.
ಇದನ್ನೂ ಓದಿ : ವಕ್ಫ್ ಒತ್ತುವರಿ ಮಾಹಿತಿ ಸಂಗ್ರಹಕ್ಕೆ ಬಿಜೆಪಿ ಜಿಲ್ಲಾ ಪ್ರವಾಸ: 'ಯತ್ನಾಳ್ ಹೋರಾಟಕ್ಕೆ ನಾಯಕರ ಅನುಮತಿ ಪಡೆದಿಲ್ಲ'- ಪಿ.ರಾಜೀವ್