ಬೆಂಗಳೂರು: "ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಹೆಸರು ಇಂದು ಅಂತಿಮಗೊಳ್ಳಲಿದ್ದು, ಅಭ್ಯರ್ಥಿಗಳ ಮೊದಲ ಪಟ್ಟಿ ಇಂದೇ ಬಿಡುಗಡೆಯಾಗಲಿದೆ" ಎಂದು ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಇಂದು ಕರ್ನಾಟಕದಿಂದ ಸ್ಪರ್ಧೆ ಮಾಡುವ ಅಭ್ಯರ್ಥಿಗಳ ಹೆಸರು ಫೈನಲ್ ಆಗಲಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಅಲ್ಲೇ ಇದ್ದಾರೆ. ಈಗಾಗಲೇ ಒಂದು ಸುತ್ತಿನ ಸಭೆಯೂ ಮುಕ್ತಾಯವಾಗಿದೆ. ಇಂದು ನರೇಂದ್ರ ಮೋದಿಯವರ ಸಮಕ್ಷಮ ಚರ್ಚೆಯಾಗಿ ಒಂದು ಅಂತಿಮ ತೀರ್ಮಾನ ಆಗುತ್ತದೆ. ಬಹುತೇಕ ಇಂದೇ ಮೊದಲ ಪಟ್ಟಿ ಬಿಡುಗಡೆ ಆಗಲಿದೆ" ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿ ಇದೆ. ಈಗಾಗಲೇ ಕಳೆದ ಬಾರಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧೆ ಮಾಡಿ 28ಕ್ಕೆ 25 ಕ್ಷೇತ್ರ ಗೆದ್ದಿದ್ದೇವೆ. ಈಗ ನಾವು ಮತ್ತು ಜೆಡಿಎಸ್ 28ಕ್ಕೆ 25 ಸೀಟು ಗೆಲ್ಲುತ್ತೇವೆ. ಆದರೆ ನಮ್ಮ ಗುರಿ 28ಕ್ಕೆ 28 ಕ್ಷೇತ್ರಗಳನ್ನೂ ಎನ್ಡಿಎ ಗೆಲ್ಲಬೇಕು ಎನ್ನುವುದಾಗಿದೆ" ಎಂದರು.
"ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸ ಕರ್ನಾಟಕಕ್ಕೂ ಕೂಡಾ ನಿಶ್ಚಯ ಆಗಿದೆ. ಶಿವಮೊಗ್ಗಕ್ಕೂ ಬರುತ್ತಾರೆ. ಎಲ್ಲಾ ಕಡೆ ದೊಡ್ಡ ಪ್ರಮಾಣದಲ್ಲಿ ಜನ ಸೇರಿಸುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ" ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಹಾಲಿ ಸಂಸದರ ಬದಲಾವಣೆ ವಿಚಾರದ ಕುರಿತು ಇಲ್ಲಿ ಚರ್ಚೆ ಮಾಡಲ್ಲ, ಅದರ ಬಗ್ಗೆ ಏನೂ ಗೊತ್ತಿಲ್ಲ. ಪ್ರಧಾನಿ ಮೋದಿ ಅವರೇ ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದಯ ಡಿಯೂರಪ್ಪ, ಮೈಸೂರು ಅಭ್ಯರ್ಥಿಯಾಗಿ ಯದುವೀರ್ ಒಡೆಯರ್ ಕಣಕ್ಕಿಳಿಸುವ ಸಂಬಂಧ ಮಾತುಕತೆ ನಡೆಸಿದ ಕುರಿತು ವಿವರ ನೀಡಲು ನಿರಾಕರಿಸಿದರು. "ಆ ವಿಚಾರ ಇಲ್ಲಿ ಪ್ರಸ್ತಾಪ ಮಾಡಲ್ಲ" ಎಂದರು.
ಇದನ್ನೂ ಓದಿ: ದೆಹಲಿಯತ್ತ ರಾಜ್ಯ ಬಿಜೆಪಿ ನಾಯಕರು: ಬೀಳ್ಕೊಡಲು ವಿಮಾಣ ನಿಲ್ದಾಣಕ್ಕೆ ಆಗಮಿಸಿದ ಸುಧಾಕರ್