ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ವ್ಯಕ್ತಿಯೊಬ್ಬರನ್ನು ರಾಷ್ಟ್ರೀಯ ತನಿಖಾ ದಳದವರು ವಶಕ್ಕೆ ಪಡೆದ ಸುದ್ದಿ ಉಲ್ಲೇಖಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಕಿಡಿಕಾರಿರುವ ಬಿಜೆಪಿ, ಸಚಿವ ದಿನೇಶ್ ಗುಂಡೂರಾವ್ ಅನಾರೋಗ್ಯಕ್ಕೆ ಒಳಗಾಗಿ ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ಟೀಕಿಸಿದೆ.
ದಿನೇಶ್ ಗುಂಡೂರಾವ್ ಮಾಡಿರುವ ಟ್ವೀಟ್ಗೆ ತಿರುಗೇಟು ನೀಡಿರುವ ಬಿಜೆಪಿ, ಕಾಂಗ್ರೆಸ್ ಐಟಿ ಸೆಲ್ ಹರಡುವ ಸುಳ್ಳು ಸುದ್ದಿಯನ್ನೇ ಸತ್ಯ ಎಂದು ಬಿಂಬಿಸಲು ಹೊರಟಿದ್ದಾರೆ. ನೀವು ಆರೋಗ್ಯ ಸಚಿವರೋ ಅಥವಾ ಸುಳ್ಳು ಹೇಳುವ ಸಚಿವರೋ? ಎಂದು ಬಿಜೆಪಿ ಪ್ರಶ್ನಿಸಿದೆ. ಸಾಕ್ಷಿ ವಿಚಾರಣೆ, ಆರೋಪಿ ವಿಚಾರಣೆ ತಿಳಿಯದಷ್ಟು ಮೂರ್ಖರು ಸಚಿವ ಸ್ಥಾನದಲ್ಲಿ ಕೂತಿರುವುದು ದುರಂತ. ಕೂಡಲೇ ರಾಜ್ಯದ ಜನರ ಮುಂದೆ ಕ್ಷಮೆ ಕೇಳಿ ಮಾನ ಉಳಿಸಿಕೊಳ್ಳಿ ಎಂದು ಈ ಮೂಲಕ ಬಿಜೆಪಿ ಆಗ್ರಹಿಸಿದೆ.
ಟ್ವೀಟ್ ನಲ್ಲೇನಿತ್ತು: "ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಬಿಜೆಪಿ ಮುಖಂಡ ಸಾಯಿಪ್ರಸಾದ್‌ನನ್ನು ರಾಷ್ಟ್ರೀಯ ತನಿಖಾ ದಳದವರು ವಶಕ್ಕೆ ಪಡೆದಿದ್ದಾರೆ. ಸ್ಫೋಟಕ್ಕೆ ನಮ್ಮ ಸರ್ಕಾರವೇ ಕಾರಣ ಅನ್ನೋವಂತೆ ಮಾತಾನಾಡುತ್ತಿದ್ದ ರಾಜ್ಯದ ಕೇಸರಿ ಕಲಿಗಳು ಈಗ ಏನು ಹೇಳುತ್ತಾರೆ? ಬಿಜೆಪಿ ಮುಖಂಡನನ್ನು ಎನ್ಐಎ ವಶಕ್ಕೆ ಪಡೆದಿದೆ ಎಂದ ಮೇಲೆ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಿಜೆಪಿ ಕೈವಾಡ ಇದೆ ಎಂದು ಅರ್ಥಅಲ್ಲವೇ? ಧರ್ಮ ರಕ್ಷಣೆ ಹೆಸರಲ್ಲಿ ರಾಜ್ಯದಲ್ಲಿ ಬಿಜೆಪಿ ನಡೆಸುತ್ತೀರೋ ಕೇಸರಿ ಭಯೋತ್ಪಾದನೆ ಎಷ್ಟು ಗಂಭೀರ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದೆ ಅನ್ನೋದಕ್ಕೆ ಇದಕ್ಕಿಂತಾ ಸಾಕ್ಷಿ ಬೇಕಾ? ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ದೇಶದ ಮೇಲೆ ಹೇರುತ್ತಿರುವ ಕೇಂದ್ರ ಬಿಜೆಪಿಯು ಇದಕ್ಕೇನು ಹೇಳುತ್ತದೆ?" ಎಂದು ಪ್ರಶ್ನಿಸಿದ್ದರು.
ರಾಷ್ಟ್ರದ ಭದ್ರತೆ ವಿಚಾರವನ್ನೂ ಲೆಕ್ಕಿಸದೇ ರಾಮೇಶ್ವರಂ ಬಾಂಬ್ ಸ್ಫೋಟ ಪ್ರಕರಣವನ್ನು ಕಾಂಗ್ರೆಸ್ ಸರ್ಕಾರದ ಮೇಲೆ ಹೊರೆಸಿದ ರಾಜ್ಯ ಬಿಜೆಪಿ ನಾಯಕರು ಈಗ ಉತ್ತರ ನೀಡಲೇ ಬೇಕು ಎಂದಿದ್ದರು.
ಇದನ್ನೂ ಓದಿ: ಕೆಫೆ ಸ್ಫೋಟ ಕೇಸ್: ಪ್ರಮುಖ ಆರೋಪಿ, ಸಹ ಸಂಚಕೋರ ಇಬ್ಬರೂ ಶಿವಮೊಗ್ಗದವರು; ಸ್ನೇಹಿತರು, ಪರಿಚಯಸ್ಥರ ವಿಚಾರಣೆ - Cafe Blast Case