ಶಿವಮೊಗ್ಗ: ಲೋಕಸಭೆ ಚುನಾವಣೆ ಘೋಷಣೆಗೆ ದಿನಗಣನೆ ಪ್ರಾರಂಭವಾಗಿದೆ. ಶಿಕಾರಿಪುರ ಪಟ್ಟಣದಲ್ಲಿ ಇಂದು ಬಿಜೆಪಿ ತಾಲೂಕು ಎಸ್ಸಿ, ಎಸ್ಟಿ ಸಮಾವೇಶ ನಡೆಸುವ ಮೂಲಕ ಚುನಾವಣೆ ಪ್ರಚಾರ ಶುರುಮಾಡಿದೆ. ಮಾರಿಕಾಂಬಾ ಮೈದಾನದಲ್ಲಿ ನಡೆದ ಸಮಾವೇಶವನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟಿಸಿದರು.
ಬಳಿಕ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲಿ ಎಸ್ಸಿ ಎಸ್ಟಿಗೆ ಅತಿ ಹೆಚ್ಚು ಅನುದಾನ ನೀಡಿದ್ದು ಬಿಜೆಪಿ ಸರ್ಕಾರ. ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನಕ್ಕೆ 5 ಕೋಟಿ, ತಾಲೂಕು ಭವನಕ್ಕೆ 50 ಲಕ್ಷ ರೂ. ಸೊರಗೊಂಡನಕೊಪ್ಪದಲ್ಲಿ 5 ಕೋಟಿ ರೂ. ನೀಡಲಾಗಿದೆ. ರಾಮನಾಥ ಕೋವಿಂದ್, ದ್ರೌಪತಿ ಮುರ್ಮ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು ಬಿಜೆಪಿ. ಎಸ್ಸಿ ಎಸ್ಟಿ ಅವರಿಗೆ ಉನ್ನತ ಸ್ಥಾನ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ತಿಳಿಸಿದರು.
ಎಸ್ಸಿ ಎಸ್ಟಿ ಸಮುದಾಯವರಿಗೆ ಕೈಗಾರಿಕೆ ತೆರೆಯಲು ಅನುಕೂಲ ಮಾಡಿಕೊಡಲಾಗಿದೆ. ಶಿಕಾರಿಪುರ ತಾಲೂಕು ಅಭಿವೃದ್ಧಿಯನ್ನು ನಿಮ್ಮ ನಿರೀಕ್ಷೆಗೂ ಮೀರಿ ಮಾಡಲಾಗಿದೆ. ಇನ್ನುಳಿದ ಕೆಲಸವನ್ನೂ ಮಾಡುತ್ತೇವೆ. ಈ ಬಾರಿ ಹಿಂದಿನಗಿಂತ ಹೆಚ್ಚಿನ ಮತಗಳ ಅಂತರದಿಂದ ರಾಘವೇಂದ್ರ ಅವರನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
3 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಿಸಿ-ವಿಜಯೇಂದ್ರ: ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಬಿಜೆಪಿ ಸರ್ಕಾರ ಆಡಳಿತದಲ್ಲಿ ಎಸ್ಸಿ/ಎಸ್ಟಿ ಸಮುದಾಯ ಅಭಿವೃದ್ಧಿಗಾಗಿ ವಿವಿಧ ಕಾಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಘಣ್ಣ ಅವರು ಈಗ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಅವರು ಯಡಿಯೂರಪ್ಪ ಮಗನೆಂದು ಮಾತ್ರವಲ್ಲ, ಅವರ ಅಭಿವೃದ್ಧಿ ಕಾರ್ಯವನ್ನು ಎಲ್ಲರೂ ಮೆಚ್ಚುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕನಿಷ್ಠ 3 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ನವರಿಗೆ ಚುನಾವಣೆ ಬಂದಾಗ ಮಾತ್ರ ಡಾ.ಅಂಬೇಡ್ಕರ್ ಹೆಸರು ನೆನಪಾಗುತ್ತದೆ. ದಲಿತರಿಗೆ ನ್ಯಾಯ ಒದಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿಲ್ಲ. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ನವರು ಭಾರತ ರತ್ನ ನೀಡಲಿಲ್ಲ. ಆದರೆ ವಿ.ಪಿ. ಸಿಂಗ್ ನೇತೃತ್ವದ ಸರ್ಕಾರಕ್ಕೆ ಬಿಜೆಪಿ ಬೆಂಬಲಿಸಿ, ಡಾ. ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಾಯಿತು. ಆದರೆ ಚುನಾವಣೆಯಲ್ಲಿ ಅಂಬೇಡ್ಕರ್ ಅನ್ನು ಕಾಂಗ್ರೆಸ್ನವರು ಸೋಲಿಸಿದರು ಎಂದು ಹೇಳಿದರು.
ಸರ್ಕಾರ 6 ಸಾವಿರ ಕೋಟಿ ರೂ. ದಲಿತರ ಮಕ್ಕಳ ಶಿಕ್ಷಣಕ್ಕೆ ಮೀಸಲಿಡಲಾಗಿದೆ. ಬಿಜೆಪಿ ಮೂರು ಜನ ದಲಿತರನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆ. ಬಂಜಾರ ಅಭಿವೃದ್ಧಿ ನಿಗಮ ಮಾಡಿದ್ದು ಯಡಿಯೂರಪ್ಪನವರು. ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಮಾಡಿಲ್ಲ. ಕಾಂಗ್ರೆಸ್ ಆಡಳಿತದಿಂದ ಜನ ಬೇಸತ್ತಿದ್ದಾರೆ ಎಂದರು.
ಇದನ್ನೂಓದಿ: ಪಾಕ್ ಪರ ಘೋಷಣೆ ಕೂಗಿದವನನ್ನು ಮೊದಲು ಒದ್ದು ಒಳಗೆ ಹಾಕಬೇಕು: ಬಿ.ವೈ.ವಿಜಯೇಂದ್ರ