ಬೆಂಗಳೂರು: ಗಾಂಧಿ ಕುಟುಂಬ ಎಂದೂ ದಲಿತರ ಮೀಸಲಾತಿ ತೆಗೆಯಲು ಸಾಧ್ಯವಿಲ್ಲ. ಅದಕ್ಕೆ ನಾವು ಆಸ್ಪದ ನೀಡುವುದಿಲ್ಲ. ನಮ್ಮ ಸಂವಿಧಾನವನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ನಮ್ಮ ಪಕ್ಷ ಸ್ಪಷ್ಟ ನಿಲುವು ಹೊಂದಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗುರು ಪ್ರಕಾಶ್ ಪಾಸ್ವಾನ್ ತಿಳಿಸಿದರು.
ಇಂದು ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ವಿದೇಶದಲ್ಲಿ ಮೀಸಲಾತಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರು ಪ್ರತಿಪಕ್ಷ ನಾಯಕ. ಪ್ರತಿಪಕ್ಷ ನಾಯಕ ಸಾಂವಿಧಾನಿಕ ಹುದ್ದೆಯ ವ್ಯಕ್ತಿ ಆಗಿರುತ್ತಾರೆ. ವಿದೇಶದಲ್ಲಿ ಅವರ ಹೇಳಿಕೆ ಗಮನಿಸಿದ್ದೇವೆ. ಬಿಜೆಪಿ ಅಂತ್ಯೋದಯದ ಮೇಲೆ ನಂಬಿಕೆ ಇಟ್ಟಿದೆ. ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಅನ್ನುವ ಕಲ್ಪನೆ ಇದೆ. ಬಿಜೆಪಿ ದೇಶಾದ್ಯಂತ ಮೀಸಲಾತಿ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ಬಿಜೆಪಿ ಇರುವುವರೆಗೂ ಮೀಸಲಾತಿ ತೆಗೆಯಲ್ಲ ಅಂತ ಸ್ಪಷ್ಟಪಡಿಸಿದೆ ಎಂದರು.
1961ರಲ್ಲಿ ನೆಹರು ಪ್ರಧಾನಿ ಆಗಿದ್ದಾಗ ಎಲ್ಲ ರಾಜ್ಯದ ಸಿಎಂಗಳಿಗೆ ಪತ್ರ ಬರೆದಿದ್ದರು. ನಾನು ಮೀಸಲಾತಿ ವಿರೋಧಿಸುವುದಾಗಿ ತಿಳಿಸಿದ್ದರು. ಮಾಜಿ ಪ್ರಧಾನಿ ಬರೆದಿರುವ ಪತ್ರ ದಲಿತರಿಗೆ ಅನ್ಯಾಯ ಮಾಡುವುದಾಗಿದೆ. ಪ್ರಧಾನಿ ಆದವರು ಸಿಎಂಗಳಿಗೆ ಮೀಸಲಾತಿ ವಿರೋಧ ಮಾಡುವಂತೆ ಪತ್ರ ಬರೆಯುತ್ತಾರೆ. ಬಳಿಕ ಬಂದ ಇಂದಿರಾ ಗಾಂಧಿ ಕೂಡ ಎಸ್ಸಿ, ಎಸ್ಟಿ ಮೀಸಲಾತಿ ಬಗ್ಗೆ ವಿರೋಧ ಮಾಡಿದ್ದಾರೆ. ನಿಮ್ಮ ಅಜ್ಜ, ಅಜ್ಜಿ, ಅಪ್ಪ ಎಲ್ಲರೂ ಮೀಸಲಾತಿ ವಿರೋಧಿಸಿದವರೇ. ಮಂಡಲ್ ಕಮಿಟಿ ವರದಿ ಬಗ್ಗೆಯೂ ರಾಜೀವ್ ಗಾಂಧಿ ವಿರೋಧ ಮಾಡಿದ್ದಾರೆ ಎಂದು ಹೇಳಿದರು.
ದಲಿತರು, ಆದಿವಾಸಿಗಳು ಕಾಂಗ್ರೆಸ್‌ಗೆ ಕೇವಲ ಮತ ಬ್ಯಾಂಕ್: ನಮ್ಮ ಪಕ್ಷದ ಆಳ್ವಿಕೆಯ ಮಧ್ಯಪ್ರದೇಶ, ರಾಜಸ್ಥಾನದಲ್ಲಿ ದಲಿತ ಮುಖ್ಯಮಂತ್ರಿ ಇದ್ದಾರೆ. ನಾವು ಅರ್ಥ ಮಾಡಿಕೊಳ್ಳಬೇಕು. ಆದಿವಾಸಿ ಸಮುದಾಯದ ಮಹಿಳೆ ದೇಶದ ಮೊದಲ ಪ್ರಜೆ. ಅದನ್ನು ಮಾಡಿರುವುದು ಬಿಜೆಪಿ. ಸಿಎಂ, ಡಿಸಿಎಂ, ಪ್ರಮುಖರನ್ನು ನೇಮಕ ಮಾಡುವಾಗ ಕಾಂಗ್ರೆಸ್ ದಲಿತರನ್ನು ಕಡೆಗಣಿಸುತ್ತದೆ. ಕರ್ನಾಟಕದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರನ್ನಾಗಿ ದಲಿತರನ್ನು ಬಿಜೆಪಿ ನೇಮಿಸಿದೆ. ಕಾಂಗ್ರೆಸ್ ಪಕ್ಷ ಯಾವಾಗಲೂ ದಲಿತರು, ಆದಿವಾಸಿಗಳನ್ನು ಕೇವಲ ಮತ ಬ್ಯಾಂಕ್ ಆಗಿ ಮಾತ್ರ ನೋಡುತ್ತದೆ.
ಬಾಬು ಜಗಜೀವನ್ ರಾಮ್ ಅವರ ಬಗ್ಗೆ ನಮಗೆ ಗೌರವ ಇದೆ. ಅವರು ದೇಶದ ಪ್ರಧಾನಿ ಆಗಲು ಅರ್ಹರಿದ್ದರು. ಆದರೆ ಇಂದಿರಾ ಗಾಂಧಿ, ಬಾಬು ಅವರು ಪ್ರಧಾನಿ ಆಗುವುದನ್ನು ತಡೆದರು. ಇದು ಪುಸ್ತಕದಲ್ಲಿ ದಾಖಲಾಗಿದೆ. ಬಾಬು ಜಗಜೀವನ್ ರಾಮ್ ಅವರಿಗೆ ಕಾಂಗ್ರೆಸ್ ಕಿರುಕುಳ ಕೊಟ್ಟು, ಪಕ್ಷದಿಂದ ಹೊರಹೋಗುವಂತೆ ಮಾಡಿತು ಎಂದು ದೂರಿದರು.
ಇದನ್ನೂ ಓದಿ: ರಾಜ್ಯಪಾಲರ ನಡವಳಿಕೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ: ಪರಮೇಶ್ವರ್ - G Parameshwar