ಶಿರಸಿ(ಉತ್ತರ ಕನ್ನಡ): ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ನಮಗೆ ಹಣ ನೀಡಿದೆ ಎಂಬುದಾದರೆ ಉತ್ತರ ಪ್ರದೇಶ, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಕಾಂಗ್ರೆಸ್ನವರಿಗೆ ಎಷ್ಟು ಹಣ ನೀಡಿದೆ ಎಂದು ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಪ್ರಶ್ನಿಸಿದ್ಧಾರೆ.
ಶಿರಸಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಮೇಲೆ ಹಣ ಪಡೆದಿರುವ ಆರೋಪ ಮಾಡಿರುವ ಈಶ್ವರಪ್ಪನವರ ಮಾತಿಗೆ ತಿರುಗೇಟು ನೀಡಿದರು. ಬೇರೆ ರಾಜ್ಯದಲ್ಲಿ ಬಿಜೆಪಿ ಎಷ್ಟೆಷ್ಟು 'ಇನ್ವೆಸ್ಟ್ಮೆಂಟ್' ಮಾಡಿದೆ ಎಂಬುದನ್ನೂ ಹೇಳಬೇಕು ಎಂದರು.
ಮಾಜಿ ಸಚಿವ ಈಶ್ವರಪ್ಪನವರ ಮಾತನ್ನು ರಾಜ್ಯ ಬಿಜೆಪಿಯೇ ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರು ಏನೆಲ್ಲಾ ಮಾಡಿಕೊಂಡು ರಾಜೀನಾಮೆ ನೀಡುವ ಸ್ಥಿತಿ ಬಂದಿತ್ತು ಎಂಬುದು ನಾಡಿನ ಜನರು ಹಾಗೂ ಸ್ವತಃ ಈಶ್ವರಪ್ಪನವರಿಗೂ ತಿಳಿದಿದೆ. ಅಲ್ಲದೇ ಬಿಜೆಪಿ ಸರ್ಕಾರ ಬರುವಾಗ ಈಶ್ವರಪ್ಪ ನಮಗೆ ಎಷ್ಟು ಕೋಟಿ ಕೊಟ್ಟಿದ್ದರು? ಎಂಬುದನ್ನೂ ಹೇಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈಶ್ವರಪ್ಪನವರು ಗಾಜಿನ ಮನೆಯಲ್ಲಿ ಕುಳಿತುಕೊಂಡು ಇನ್ನೊಂದು ಗಾಜಿಗೆ ಕಲ್ಲು ಹೊಡೆಯುವಾಗ ಎಚ್ಚರಿಕೆಯಿಂದ ಇರಬೇಕು ಎಂದರು. ಇದೇ ವೇಳೆ ಲೋಕಸಭಾ ಚುನಾವಣೆಗೆ ಸ್ಪರ್ಧೆಯ ಬಗ್ಗೆ ಇದು ಕೇವಲ ಮಾಧ್ಯಮ ಸೃಷ್ಟಿ ಎಂದು ಪ್ರತಿಕ್ರಿಯಿಸಿದರು.
ಈಶ್ವರಪ್ಪ ಹೇಳಿದ್ದೇನು?: ಮೈಸೂರಿನಲ್ಲಿ ಶನಿವಾರ, ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯವರು 50 ಕೋಟಿ ರೂ. ಆಫರ್ ನೀಡಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಗರಂ ಆಗಿಯೇ ಪ್ರತಿಕ್ರಿಯೆ ನೀಡಿದ್ದ ಈಶ್ವರಪ್ಪ, 50 ಕೋಟಿ ಆಫರ್ ಕೊಟ್ಟಿದ್ದು ಯಾರು ಎಂಬುದನ್ನು ಸಿಎಂ ಹೇಳಲಿ. ಆಫರ್ ಕೊಟ್ಟವರನ್ನು ಮೊದಲು ಜೈಲಿಗೆ ಕಳುಹಿಸಲಿ. ಇಲ್ಲದಿದ್ದರೆ, ತಾವು ರಾಜಕೀಯಕ್ಕಾಗಿ ಸುಳ್ಳು ಹೇಳಿದ್ದೇನೆ ಎಂದು ಜನರ ಕ್ಷಮೆ ಕೇಳಲಿ. ಸಿಎಂ ಬಾಯಲ್ಲಿ ಈ ರೀತಿಯ ಮಾತು ಬರಬಾರದು. ಮಾತನಾಡಿದರೆ ಅದಕ್ಕೆ ಸಾಕ್ಷಿ ಕೊಡಬೇಕು. ಗುಪ್ತಚರ ಇಲಾಖೆಯು ಅವರ ಕೈಯಲ್ಲೇ ಇದೆ. ನಿಮ್ಮ ಶಾಸಕರಿಗೆ ಆಫರ್ ಕೊಟ್ಟಿದ್ದು ಯಾರು ಅಂತ ಜನರ ಮುಂದೆ ನೇರವಾಗಿ ಹೇಳಿ. ಶಾಸಕ ಎಸ್.ಟಿ.ಸೋಮಶೇಖರ್ಗೆ ವೋಟ್ ಹಾಕಿಸಿಕೊಳ್ಳಲು ಎಷ್ಟು ನೂರು ಕೋಟಿ ಕೊಟ್ಟಿದ್ದೀರಿ. ಶಿವರಾಮ್ ಹೆಬ್ಬಾರ್ ವೋಟ್ ಹಾಕದಂತೆ ತಡೆಯಲು ಎಷ್ಟು ಹಣ ಕೊಟ್ಟಿರಿ. ನೀವು ಮೊದಲು ಅದನ್ನು ಹೇಳಿ ಎಂದು ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯಗೆ ಸುಳ್ಳು ಹೇಳುವುದರಲ್ಲಿ ನೊಬೆಲ್ ಪ್ರಶಸ್ತಿ ಕೊಡಬೇಕು: ಕೆ ಎಸ್ ಈಶ್ವರಪ್ಪ