ಬೆಳಗಾವಿ: ಮೈಸೂರು ಚಲೋ ಪಾದಯಾತ್ರೆ ಮುಗಿದ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಕುತೂಹಲಕಾರಿ ಬೆಳವಣಿಗೆ ಕಂಡುಬಂದಿದೆ. ಪಾದಯಾತ್ರೆಯಿಂದ ದೂರ ಉಳಿದಿದ್ದ ಬಿಜೆಪಿ ನಾಯಕರು ಗೌಪ್ಯ ಸಭೆ ನಡೆಸುತ್ತಿದ್ದಾರೆ.
ಬೆಳಗಾವಿ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ 10ಕ್ಕೂ ಹೆಚ್ಚು ನಾಯಕರು ಸಭೆ ನಡೆಸುತ್ತಿದ್ದಾರೆ. ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಮಾಜಿ ಸಂಸದರಾದ ಜಿ.ಎಂ. ಸಿದ್ದೇಶ್ವರ, ಪ್ರತಾಪ ಸಿಂಹ, ಅಣ್ಣಾ ಸಾಹೇಬ ಜೊಲ್ಲೆ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಮುಂದಿನ ಹೋರಾಟದ ರೂಪುರೇಷೆಗೆ ತಯಾರಿ ಕುರಿತು ಈ ನಾಯಕರು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಮುಡಾ ಹಗರಣದ ವಿರುದ್ಧದ ಮೈಸೂರು ಚಲೋ ಪಾದಯಾತ್ರೆ ಬಳಿಕ, ಇತ್ತ ಬಿಜೆಪಿಯ ಮತ್ತೊಂದು ಬಣವು ಬೇರೊಂದು ಪಾದಯಾತ್ರೆಗೆ ಸಿದ್ಧತೆ ನಡೆಸಿದಂತಿದೆ. ವಾಲ್ಮೀಕಿ ನಿಗಮದ ಹಗರಣ ಖಂಡಿಸಿ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಿಂದ ಬಳ್ಳಾರಿವರೆಗೂ ಪಾದಯಾತ್ರೆ ನಡೆಸಲು ಪಾಟೀಲ್ ಯತ್ನಾಳ್ ಯತ್ನಾಳ್ ಮತ್ತು ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕೊಚ್ಚಿ ಹೋದ ತುಂಗಭದ್ರಾ ಡ್ಯಾಂ ಗೇಟ್: ಅಗತ್ಯ ಕ್ರಮಕ್ಕೆ ಆಂಧ್ರ ಸಿಎಂ ಸೂಚನೆ - CM Chandrababu Naidu