ಬೆಂಗಳೂರು: ವಿಧಾನಸಭೆಯ ಶೂನ್ಯ ವೇಳೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ರಾಮನಗರದಲ್ಲಿ ವಕೀಲರ ಪ್ರತಿಭಟನೆ ಬಗ್ಗೆ ಪ್ರಸ್ತಾಪಿಸಿದರು. ಐಜೂರು ಠಾಣೆ ಪಿಎಸ್ಐ ಅಮಾನತು ಮಾಡುವಂತೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
''ರಾಮನಗರ ಪ್ರಕ್ಷುಬ್ಧ ಆಗಿದೆ, ನಿನ್ನೆ ನಾನೂ, ಎಚ್ಡಿಕೆ ಹೋಗಿದ್ವಿ. ಚಾಂದ್‌ಪಾಷ ಅನ್ನೋ ವಕೀಲ ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಕೋರ್ಟ್ ಆದೇಶ ಮಾಡಿರುವ ಬಗ್ಗೆ ಟ್ವೀಟ್ನಲ್ಲಿ ಆ ಜಡ್ಜ್ಗೆ ಕೆಟ್ಟ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಹಿಂದೂಗಳು, ಬಿಜೆಪಿ ವಿರುದ್ಧವೂ ನಿಂದಿಸಿದ್ದಾರೆ. ಇಷ್ಟೆಲ್ಲ ಆದ ನಂತರ ಚಾಂದ್‌ಪಾಷ ವಿರುದ್ಧ ಜನ ಠಾಣೆಗೆ, ವಕೀಲರ ಸಂಘಕ್ಕೆ ದೂರು ಕೊಡ್ತಾರೆ. ವಕೀಲರ ಸಂಘದ ಸದಸ್ಯರು ಇದರ ಬಗ್ಗೆ ಚರ್ಚೆ ಮಾಡುವಾಗ ಕೆಲವರು ನುಗ್ಗಿ ವಕೀಲರಿಗೆ ಕೆಟ್ಟ ಪದಗಳಿಂದ ಬೈತಾರೆ. ಇದರ ವಿರುದ್ಧವೂ ವಕೀಲರು ಪೊಲೀಸರಿಗೆ ದೂರು ಕೊಡ್ತಾರೆ. ಆದ್ರೆ ಪೊಲೀಸರು ವಕೀಲರ ದೂರು ಪಡೆದು ಸುಮ್ಮನಾಗುತ್ತಾರೆ. ಯಾವುದೇ ಕ್ರಮಕ್ಕೆ ಮುಂದಾಗಿಲ್ಲ'' ಎಂದು ಅಶೋಕ್ ವಾಗ್ದಾಳಿ ನಡೆಸಿದರು.
''ನಂತರ ಚಾಂದ್‌ಪಾಷ ಕಡೆಯವರಿಂದಲೂ ಪೊಲೀಸರು ಒಂದು ದೂರು ತಗೋತಾರೆ. ವಕೀಲರೇ ಚಾಂದ್‌ಪಾಷ ಕಡೆಯವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ದೂರು ಕೊಡ್ತಾರೆ. ಪೊಲೀಸರು ತಕ್ಷಣ ಮೊದಲು ದೂರು ಕೊಟ್ಟ ವಕೀಲರ ವಿರುದ್ಧವೆ ಎಫ್‌ಐಆರ್ ಹಾಕ್ತಾರೆ. ಇದನ್ನು ಖಂಡಿಸಿ ವಕೀಲರು ಪ್ರತಿಭಟನೆಗೆ ಇಳಿದಿದ್ದಾರೆ. ಚಾಂದ್‌ಪಾಷ ಜ್ಞಾನವಾಪಿ ಮಸೀದಿ ಬಗ್ಗೆ ಆದೇಶಿಸಿ ಜಡ್ಜ್ ವಿರುದ್ಧ ಲೂಟಿ ಆರೋಪ ಮಾಡಿದ್ದಾರೆ. ವಕೀಲರ ಸಂಘದ ಚುನಾವಣೆಯಲ್ಲಿ ಗೆದ್ದವರಿಗೂ ಜಾತಿ ನಿಂದನೆ ಮಾಡಿದ್ದಾರೆ'' ಎಂದು ಆರ್ ಅಶೋಕ್ ಆರೋಪಿಸಿದರು.
ರಾಮನಗರ ವಕೀಲರ ಪ್ರತಿಭಟನೆ ವಿಚಾರವಾಗಿ ಉತ್ತರ ನೀಡಿದ ಗೃಹ ಸಚಿವ ಜಿ ಪರಮೇಶ್ವರ್, ಚಾಂದ್‌ಪಾಷ ವಿರುದ್ಧ 504, 505 ಐಪಿಸಿ ಪ್ರಕಾರ ಕೇಸ್ ದಾಖಲಾಗಿದೆ. ಸರ್ಕಾರ ಚಾಂದ್‌ಪಾಷ ಪರ ನಿಂತಿಲ್ಲ, ಇದು ಸತ್ಯಕ್ಕೆ ದೂರವಾಗಿದೆ. ಸಬ್ ಇನ್ಸ್ಪೆಕ್ಟರ್ ತನ್ವೀರ್ ಹುಸೇನ್ ತಪ್ಪಿದೆಯಾ ಇದರಲ್ಲಿ?. ಅವರು ಕೇಸ್ ಕೊಟ್ಟಿದ್ದನ್ನು ತಗೊಂಡಿದ್ದಾರೆ. ಸಬ್ ಇನ್ಸ್ಪೆಕ್ಟರ್ ಸಸ್ಪೆಂಡ್ ಮಾಡೋದು ದೊಡ್ಡ ವಿಷ್ಯ ಅಲ್ಲ. ಆದ್ರೆ ಅವರು ಕೇಸ್ ರಿಜಿಸ್ಟರ್ ಮಾಡಿ ತನಿಖೆ ನಡೆಸಲು ಮುಂದಾಗಿದ್ದು ತಪ್ಪು ಅನ್ನಕ್ಕಾಗುತ್ತಾ ಹೇಳಿ?. ಸಸ್ಪೆಂಡ್ ಮಾಡೋದು ಐದು ನಿಮಿಷದ ಕೆಲಸ ಅಷ್ಟೇ. ಒಟ್ಟು ಮೂರು ಎಫ್‌ಐಆರ್ ದಾಖಲಾಗಿವೆ ಎಂದು ತಿಳಿಸಿದರು.
ನಂತರ ವಕೀಲರ ಸಂಘದ ಅಧ್ಯಕ್ಷರಿಗೆ ಮನವಿ ಮಾಡ್ತೇನೆ. ಪ್ರತಿಭಟನೆ ಕೈಬಿಟ್ಟು ಸಹಕರಿಸಲಿ. ತನಿಖೆ ವರದಿ ಏನು ಬರುತ್ತೋ ಅಂತ ನೋಡ್ತೇವೆ. ತನಿಖಾ ವರದಿ ಬಂದ ಮೇಲೆ ಕ್ರಮ ಕೈಗೊಳ್ಳಿ. ಸಬ್ ಇನ್ಸ್ಪೆಕ್ಟರ್ ತಪ್ಪು ಕಂಡು ಬಂದರೆ ಖಂಡಿತ ಕ್ರಮ ವಹಿಸುತ್ತೇವೆ. ಯಾರನ್ನೂ ರಕ್ಷಣೆ ಮಾಡುವ ಪ್ರಮೇಯ ಇಲ್ಲ. ತಪ್ಪು ಯಾರದ್ದು ಅಂತ ಗೊತ್ತಾಗಲು ತನಿಖೆ ನಡೆಸುತ್ತಿದ್ದೇವೆ ಎಂದರು. ಗೃಹ ಸಚಿವರ ಉತ್ತರಕ್ಕೆ ಸಮಾಧಾನಗೊಳ್ಳದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಪಿಎಸ್ಐ ಅಮಾನತಿಗೆ ಆಗ್ರಹಿಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ಬಿಜೆಪಿ ವಿಷದ ಹೊಗೆ ಬಿಡುತ್ತದೆ ಎಂದು ಜನ ಪಕ್ಕಕ್ಕೆ ತಳ್ಳಿದರು: ಸಿಎಂ ಸಿದ್ದರಾಮಯ್ಯ ವ್ಯಂಗ್ಯ