ಬೆಂಗಳೂರು : ಆಪರೇಷನ್ ಕಮಲದ ಯತ್ನವನ್ನು ಈಗಲೂ ಬಿಜೆಪಿಯವರು ಮಾಡುತ್ತಿದ್ದು, ನಮ್ಮ ಶಾಸಕರಿಗೆ ಈಗಲೂ 50 ಕೋಟಿ ರೂ. ಆಫರ್ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಖಾತೆ ಜಪ್ತಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬಿಜೆಪಿಯವರದ್ದು ಖಾತೆ ಏಕೆ ಜಪ್ತಿ ಮಾಡಿಲ್ಲ. ಅಕ್ರಮವಾಗಿ ಸಂಪತ್ತು ಗಳಿಸಿರುವವರು ಬಿಜೆಪಿಯಲ್ಲಿ ಇಲ್ವಾ?. ಆಪರೇಷನ್ ಕಮಲವನ್ನು ಮೊದಲು ಆರಂಭಿಸಿದ್ದು ಬಿಜೆಪಿ ಪಕ್ಷ. ಆಪರೇಷನ್ ಕಮಲದ ಯತ್ನವನ್ನು ಇಂದೂ ಕರ್ನಾಟಕದಲ್ಲಿ ಮಾಡುತ್ತಿದ್ದಾರೆ. ನಮ್ಮ ಶಾಸಕರಿಗೆ ಈಗಲೂ 50 ಕೋಟಿ ಆಫರ್ ಮಾಡುತ್ತಿದ್ದಾರೆ. ಅದರ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ. ನಮ್ಮ ಶಾಸಕರಿಗೆ ರಾಜೀನಾಮೆ ಕೊಡಿ, ಚುನಾವಣೆ ಖರ್ಚು ನಾವು ನೋಡುತ್ತೇವೆ ಎಂದು ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನಾಶ ಮಾಡುತ್ತಿದ್ದಾರೆ. ಜನರೊಂದಿಗೆ ಭಾವನಾತ್ಮಕವಾಗಿ ಮಾತನಾಡಿ ದಾರಿ ತಪ್ಪಿಸುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಾಗ ಮತದಾರರು ಅವರನ್ನು ಸುಮ್ಮನೆ ಬಿಡಲ್ಲ. ತಕ್ಕ ಪಾಠ ಕಲಿಸುತ್ತಾರೆ. ಈ ಬಾರಿ ಬಿಜೆಪಿಗೆ ಪಾಠ ಕಲಿಸುತ್ತಾರೆ ಎಂಬ ನಂಬಿಕೆ ಇದೆ. ಕರ್ನಾಟಕದಲ್ಲಿ ನಾವು ಕನಿಷ್ಠ 20 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಚುನಾವಣಾ ಆಯೋಗ ಕೂಡಲೇ ಮಧ್ಯಪ್ರವೇಶಿಸಿ ಜಪ್ತಿಯಾದ ಖಾತೆಯನ್ನು ರಿಸ್ಟೋರ್ ಮಾಡುವಂತೆ ಒತ್ತಾಯ ಮಾಡುತ್ತೇನೆ ಎಂದು ಆಗ್ರಹಿಸಿದರು.
ಆರ್ಎಸ್ಎಸ್, ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಅವರ ನಡವಳಿಕೆ ಮೂಲಕ ಅನೇಕ ಸಾರಿ ಅವರ ನಿಲುವು ಸ್ಪಷ್ಟಪಡಿಸಿದ್ದಾರೆ. ಸಂವಿಧಾನವನ್ನು ಬದಲಾವಣೆ ಮಾಡಬೇಕು ಎಂದು ಹಲವು ಬಾರಿ ಹೇಳಿದ್ದಾರೆ. ಮೋದಿ ಈ ಮಾತನ್ನು ಬೇರೆಯವರ ಬಾಯಲ್ಲಿ ಹೇಳಿಸುತ್ತಿದ್ದಾರೆ. ಸರ್ವಾಧಿಕಾರದ ಮೇಲೆ ಅವರು ನಂಬಿಕೆ ಇಟ್ಟವರು. ಯಾವುದೇ ಚುನಾವಣೆ ಮುಕ್ತ ಹಾಗೂ ಪಾರದರ್ಶಕವಾಗಿರಬೇಕು. ಚುನಾವಣೆ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು. ರಾಜಕೀಯ ಪಕ್ಷಗಳು ಜನರಿಂದ ಹಣ ಪಡೆಯುತ್ತವೆ. ಆ ಹಣ ರಾಜಕೀಯ ಪಕ್ಷಗಳ ಹಣ ಅಲ್ಲ. ಅದು ಜನರ ಹಣ. ಚುನಾವಣೆ ಸನಿಹದಲ್ಲಿ ಕಾಂಗ್ರೆಸ್ ಪಕ್ಷದ ಖಾತೆಯನ್ನು ಜಪ್ತಿ ಮಾಡಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಅವರಿಗೆ ಸೋಲಿನ ಭೀತಿ ಶುರುವಾಗಿದೆ : ಸಣ್ಣ ಕಾರಣ ಇಟ್ಟು ಇಡೀ ಖಾತೆ ಜಪ್ತಿ ಮಾಡಿದ್ದಾರೆ. ಚುನಾವಣೆಯಲ್ಲಿ ಓಡಾಡಬಾರದು, ಪ್ರಚಾರ ಮಾಡಬಾರದು ಎಂದು ಹೀಗೆ ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ ಕ್ರಮ. ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಬಿಜೆಪಿ ಮನುಸ್ಮೃತಿನಲ್ಲಿ ನಂಬಿಕೆ ಇಟ್ಟವರು. ಮೇಲು ಕೀಳು ಇರಬೇಕು ಎಂಬುದರಲ್ಲಿ ನಂಬಿಕೆ ಇಟ್ಟವರು. ಅಸಮಾನತೆ ಇದ್ದರೆ, ಅನಕ್ಷರತೆ ಇದ್ದರೆ, ಬಡತನ ಇದ್ದರೆ ಶೋಷಣೆ ಮಾಡಬಹುದು ಎಂಬುದು ಅವರ ವಾದ. ಪಕ್ಷದ ಖಾತೆ ಜಪ್ತಿ ಮಾಡುವ ಮೂಲಕ ಇದನ್ನು ಯಾರೂ ಒಪ್ಪಲು ಆಗಲ್ಲ. ಅವರಿಗೆ ಸೋಲಿನ ಭೀತಿ ಶುರುವಾಗಿದೆ. ಆ ಭೀತಿಯಿಂದ ರಾಜಕೀಯ ಪಕ್ಷವನ್ನು ನಿಷ್ಕ್ರಿಯ ಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ : ನರೇಂದ್ರ ಮೋದಿ ಹಿಂದಿರುವ “ದುಷ್ಟ ಶಕ್ತಿ’’ ತಡೆಯುವ ಶಕ್ತಿ ಇರುವುದು ಚುನಾವಣೆಗೆ ಮಾತ್ರ: ಸಿಎಂ ಸಿದ್ದರಾಮಯ್ಯ - CM Siddaramaiah DEMAND