ಬೆಂಗಳೂರು: ರಾಜ್ಯದ 20 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಪ್ರಕಟಿಸಿದೆ. ಅದರಲ್ಲಿ 6 ಸಂಸದರಿಗೆ ಟಿಕೆಟ್ ನಿರಾಕರಿಸಿದ್ದು, ಮೂವರು ಸಂಸದರು ಚುನಾವಣಾ ನಿವೃತ್ತಿ ಘೋಷಿಸಿರುವ ಕಾರಣಕ್ಕೆ ಬೇರೆ ಹೆಸರು ಪ್ರಕಟಿಸಲಾಗಿದೆ. ಆ ಮೂಲಕ 9 ಹಾಲಿಗಳ ಬದಲಾವಣೆ ಆಗಿದೆ. ಬೆಂಗಳೂರು ಉತ್ತರಕ್ಕೆ ಶೋಭಾ ಕರಂದ್ಲಾಜೆ ಬಾರದಂತೆ ತಡೆಯುವ ಬೆಂಗಳೂರು ಬಿಜೆಪಿ ನಾಯಕರ ಪ್ರಯತ್ನ ವಿಫಲವಾಗಿದೆ.
ರಾಜ್ಯ ಲೋಕಸಭಾ ಚುನಾವಣೆಗೆ ಬಿಡುಗಡೆಯಾಗಿರುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಹಾಲಿಗಳಿಗೆ ಕೋಕ್, ಅಚ್ಚರಿ ಆಯ್ಕೆ, ವಿರೋಧಕ್ಕೆ ಸಿಗದ ಮನ್ನಣೆ, ಹಿರಿಯರಿಗೆ ನಿರಾಸೆಯಂತಹ ಸನ್ನಿವೇಶ ಎದುರಾಗಿದೆ. ದೀರ್ಘಾವಧಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನಿಕಟಪೂರ್ವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಟಿಕೆಟ್ ವಂಚಿತರಾಗಿದ್ದಾರೆ.
![ಲೋಕಸಭಾ ಚುನಾವಣೆಗೆ ಟಿಕೆಟ್](https://etvbharatimages.akamaized.net/etvbharat/prod-images/13-03-2024/20978765_thumbnppppp.jpg)
ಪುತ್ರನ ರಾಜಕೀಯ ಭವಿಷ್ಯ ರೂಪಿಸಲು ಹಾವೇರಿ ಟಿಕೆಟ್ ಬೇಡಿಕೆ ಇಟ್ಟಿದ್ದ ಈಶ್ವರಪ್ಪಗೆ ನಿರಾಸೆಯಾಗಿದ್ದು, ಪುತ್ರ ಕಾಂತೇಶ್ ಬದಲು ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಟಿಕೆಟ್ ಸಿಕ್ಕಿದೆ. ಮತ್ತೊಂದೆಡೆ ಅಳಿಯನಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದ ಚಾಮರಾಜನಗರ ಸಂಸದ ಶ್ರೀನಿವಾಸ ಪ್ರಸಾದ್ಗೂ ನಿರಾಸೆಯಾಗಿದ್ದು, ಅಲ್ಲಿ ಕೊಳ್ಳೆಗಾಲ ಮಾಜಿ ಶಾಸಕ ಬಾಲರಾಜ್ಗೆ ಟಿಕೆಟ್ ನೀಡಲಾಗಿದೆ.
ಇನ್ನು ಶತಾಯಗತಾಯ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಟಿಕೆಟ್ ತಪ್ಪಿಸಬೇಕು ಎನ್ನುವ ಪ್ರಯತ್ನ ಫಲಿಸಿಲ್ಲ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೋ ಬ್ಯಾಕ್ ಅಭಿಯಾನ ನಡೆದು ಸಿಟಿ ರವಿ ಆಕಾಂಕ್ಷಿಯಾಗಿ ಅಪೇಕ್ಷಿತರ ಪಟ್ಟಿ ಸೇರಿದ್ದರು. ಆದರೆ, ಗೋ ಬ್ಯಾಕ್ ಅಭಿಯಾನ ಸಫಲವಾದರೂ ಸಿಟಿ ರವಿ ಕನಸು ಈಡೇರಲಿಲ್ಲ. ಅಲ್ಲಿ ಸಿಟಿ ರವಿ ಬದಲು ಕೋಟಾ ಶ್ರೀನಿವಾಸ ಪೂಜಾರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಇಲ್ಲಿ ಟಿಕೆಟ್ ಮಿಸ್ ಆಗಿದ್ದರೂ ಬೆಂಗಳೂರು ಉತ್ತರದಿಂದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಫಲರಾಗಿದ್ದಾರೆ.
![ಲೋಕಸಭಾ ಚುನಾವಣೆಗೆ ಟಿಕೆಟ್](https://etvbharatimages.akamaized.net/etvbharat/prod-images/13-03-2024/20978765_thumbn.jpg)
ಬೆಂಗಳೂರು ಬಿಜೆಪಿ ನಾಯಕರು ಶೋಭಾ ಕರಂದ್ಲಾಜೆ ಬೆಂಗಳೂರು ರಾಜಕಾರಣಕ್ಕೆ ಬಾರದಂತೆ ತಡೆಯಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದ ಸದಾನಂದಗೌಡರನ್ನೇ ಮತ್ತೆ ಕಣಕ್ಕಿಳಿಸಿವ ಪ್ರಯತ್ನಕ್ಕೆ ಬೆಂಗಳೂರು ನಾಯಕರು ಪ್ರಯತ್ನಿಸಿದರೂ ಅದಕ್ಕೆ ಮನ್ನಣೆ ಸಿಕ್ಕಿಲ್ಲ. ಶೋಭಾ ಕರಂದ್ಲಾಜೆಗೆ ಟಿಕೆಟ್ ಪ್ರಕಟಿಸಿದೆ. ಆ ಮೂಲಕ ಅಶೋಕ್ ಸೇರಿದಂತೆ ಬೆಂಗಳೂರು ಬಿಜೆಪಿ ನಾಯಕರು ಮತ್ತು ಸದಾನಂದಗೌಡರಿಗೆ ನಿರಾಸೆಯಾಗುವಂತಾಗಿದೆ.
![ಲೋಕಸಭಾ ಚುನಾವಣೆಗೆ ಟಿಕೆಟ್](https://etvbharatimages.akamaized.net/etvbharat/prod-images/13-03-2024/20978765_thumb.jpg)
ಇನ್ನು ದಾವಣಗೆರೆ ವಿಷಯದಲ್ಲೂ ಹಾಲಿ ಸಂಸದ ಜಿ ಎಂ ಸಿದ್ದೇಶ್ವರ್ಗೆ ಟಿಕೆಟ್ ನೀಡಲು ಇದ್ದ ವಿರೋಧಕ್ಕೆ ಮನ್ನಣೆ ಸಿಕ್ಕಿದೆ. ಆದರೆ, ಅವರ ಕುಟುಂಬಕ್ಕೆ ಟಿಕೆಟ್ ನೀಡಬಾರದು ಎನ್ನುವ ಬೇಡಿಕೆ ಕಡೆಗಣಿಸಲಾಗಿದ್ದು, ಹಾಲಿ ಸಂಸದರ ಪತ್ನಿಗೆ ಟಿಕೆಟ್ ಪ್ರಕಟಿಸಿದೆ. ವಿಶೇಷ ಕಾರಣಕ್ಕಾಗಿ ಪ್ರತಾಪ ಸಿಂಹರನ್ನು ಕೈಬಿಡಲಾಗಿದ್ದರೆ, ಕ್ಷೇತ್ರದಲ್ಲಿ ವಿರೋಧ ವ್ಯಕ್ತವಾಗಿದ್ದನ್ನು ಪರಿಗಣಿಸಿ ನಳಿನ್ ಕುಮಾರ್ ಕಟೀಲ್ಗೆ ಟಿಕೆಟ್ ನಿರಾಕರಿಸಲಾಗಿದೆ.
ಟಿಕೆಟ್ ವಂಚಿತ ಸಂಸದರ ವಿವರ : ಮೂವರು ನಿವೃತ್ತಿ :
ತುಮಕೂರು ಸಂಸದ ಜಿ ಎಸ್ ಬಸವರಾಜ್ ಕ್ಷೇತ್ರಕ್ಕೆ ಮಾಜಿ ಸಚಿವ ವಿ. ಸೋಮಣ್ಣ
ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಕ್ಷೇತ್ರಕ್ಕೆ ಮಾಜಿ ಶಾಸಕ ಎಸ್ ಬಾಲರಾಜ್
ಹಾವೇರಿ ಸಂಸದ ಶಿವಕುಮಾರ್ ಉದಾಸಿ ಕ್ಷೇತ್ರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
6 ಸಂಸದರಿಗೆ ಟಿಕೆಟ್ ಮಿಸ್:
ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಬದಲಿಗೆ ಯದುವೀರ್ ಒಡೆಯರ್ಗೆ ಅವಕಾಶ
ಬೆಂಗಳೂರು ಉತ್ತರ ಸಂಸದ ಸದಾನಂದ ಗೌಡರ ಬದಲಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಅವಕಾಶ
ದಕ್ಷಿಣ ಕನ್ನಡ ಸಂಸದ ನಳೀನ್ ಕಟೀಲ್ ಬದಲಿಗೆ ಬ್ರಿಜೇಶ್ ಚೌಟಾರಿಗೆ ಅವಕಾಶ
ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ ಬದಲಿಗೆ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ಗೆ ಅವಕಾಶ
![ಲೋಕಸಭಾ ಚುನಾವಣೆಗೆ ಟಿಕೆಟ್](https://etvbharatimages.akamaized.net/etvbharat/prod-images/13-03-2024/20978765_thumbnalll.jpg)
ಹೆಚ್ಚು ಮತದಿಂದ ಗೆಲ್ಲಿಸಿ ಕಳಿಸುತ್ತಾರೆ ಎಂಬ ವಿಶ್ವಾಸ ಇದೆ: ನರೇಂದ್ರ ಮೋದಿಯವರನ್ನು ಇನ್ನೊಮ್ಮೆ ಪ್ರಧಾನಿಯಾಗಿ ಮಾಡಿ ದೇಶವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕೆಂಬ ಬಯಕೆ ದೇಶಾದ್ಯಂತ ಇರುವಂತೆ ಹಾವೇರಿ ಗದಗ ಕ್ಷೇತ್ರದ ಜನರಲ್ಲಿಯೂ ಇದೆ. ಹೀಗಾಗಿ ನನ್ನನ್ನು ಅತ್ಯಂತ ಹೆಚ್ಚು ಮತದಿಂದ ಗೆಲ್ಲಿಸಿ ಕಳಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಟಿಕೆಟ್ ಘೋಷಣೆ ಬೆನ್ನಲ್ಲೇ ಹುಬ್ಬಳ್ಳಿಗೆ ಬಂದಿಳಿದ ಕೇಂದ್ರ ಸಚಿವ ಜೋಶಿ: ಧಾರವಾಡ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಎರಡನೇ ಲಿಸ್ಟ್ ಹೊರ ಬಂದಿದ್ದು, ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಐದನೇ ಬಾರಿ ಅಖಾಡಕ್ಕೆ ಇಳಿಯಲಿದ್ದಾರೆ. ಈ ನಿಟ್ಟಿನಲ್ಲಿ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಹುಬ್ಬಳ್ಳಿಗೆ ಆಗಮಿಸಿದ ಜೋಶಿಯವರಿಗೆ ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.
ಪಕ್ಷದ ನಾಯಕರ-ಜನರ ಪ್ರೀತಿ, ವಿಶ್ವಾಸಕ್ಕೆ ಚಿರಋಣಿ- ಸಚಿವ ಪ್ರಹ್ಲಾದ್ ಜೋಶಿ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನಿರೀಕ್ಷೆಯಂತೆ ಸತತ 5ನೇ ಬಾರಿ ತಮಗೆ ಸಿಕ್ಕಿದ್ದು, ಸರ್ವರ ಪ್ರೀತಿ, ವಿಶ್ವಾಸಕ್ಕೆ ಚಿರಋಣಿಯಾಗಿರುವೆ ಎಂದು ಸಚಿವ ಪ್ರಹ್ಲಾದ್ ಜೋಶಿ ಅವರು ಟ್ವೀಟ್ ಮಾಡಿದ್ದಾರೆ.
![ಗಾಯತ್ರಿ ಸಿದ್ದೇಶ್ವರ್](https://etvbharatimages.akamaized.net/etvbharat/prod-images/13-03-2024/photos_13032024205628_1303f_1710343588_263.jpg)
ಸಂಸದ ಪ್ರಸಾದ್ ಅಳಿಯನಿಗೆ ತಪ್ಪಿದ ಟಿಕೆಟ್ - ಬಿಜೆಪಿ ಹುರಿಯಾಳಾದ ಬಾಲಾರಾಜು: ಲೋಕಸಭಾ ಚುನಾವಣೆಯಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದ ಸಂಸದ ಶ್ರೀನಿವಾಸ ಪ್ರಸಾದ್ ಅಳಿಯಂದರಿಗೆ ಟಿಕೆಟ್ ಕೈ ತಪ್ಪಿದ್ದು, ಮಾಜಿ ಶಾಸಕ ಬಾಲಾರಾಜು ಕಮಲಪಡೆ ಹುರಿಯಾಳಾಗಿದ್ದಾರೆ.
2004 ರಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಶಾಸಕರಾಗಿದ್ದ ಬಾಲರಾಜು ಬಳಿಕ ನಡೆದ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದರೂ ಕೈ ಹಿಡಿದಿರಲಿಲ್ಲ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಬಿಜೆಪಿಗೆ ಬಂದ ಬಾಲರಾಜು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಂಡು ಕ್ಷೇತ್ರದಲ್ಲಿ ಓಡಾಟ ನಡೆಸಿದ್ದರು.
ಗಾಯತ್ರಿ ಸಿದ್ದೇಶ್ವರ್ ಬಿಜೆಪಿ ದಾವಣಗೆರೆ ಲೋಕಸಭಾ ಅಭ್ಯರ್ಥಿ: ಬಿಜೆಪಿ ಹೈಕಮಾಂಡ್ ಹಾಲಿ ಸಂಸದ ಜಿ ಎಂ ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ಗೆ ಮಣೆ ಹಾಕಿದೆ. ದಾವಣಗೆರೆ ಲೋಕಸಭಾ ಬಿಜೆಪಿ ಟಿಕೆಟ್ ಅನ್ನು ಸಂಸದ ಜಿ ಎಂ ಸಿದ್ದೇಶ್ವರ್ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಘೋಷಣೆ ಮಾಡಿದೆ.
ನಾಲ್ಕು ಬಾರಿ ಸಂಸದರಾಗಿದ್ದ ಜಿ ಎಂ ಸಿದ್ದೇಶ್ವರ್ ಅವರ ಆರೋಗ್ಯ ಸರಿ ಇಲ್ಲದ ಕಾರಣ ಅವರ ಪತ್ನಿ ಗಾಯಿತ್ರಿ ಸಿದ್ದೇಶ್ವರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಹೊಸಬರಿಗೆ, ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂಬ ಕೂಗಿನ ನಡುವೆಯು ಬಿಜೆಪಿ ಹೈಕಮಾಂಡ್ ಜಿ. ಎಂ ಸಿದ್ದೇಶ್ವರ್ ಕುಟುಂಬಕ್ಕೆ ಮಣೆ ಹಾಕಿರುವುದು ಬೂದಿ ಮುಚ್ಚಿದ ಕೆಂಡದಂತೆ ಇದೆ. ಇನ್ನು ಹೊಸ ಮುಖಕ್ಕೆ ಮಣೆ ಹಾಕಬೇಕು ಎಂದು ಮಾಜಿ ಸಚಿವ ರೇಣುಕಾಚಾರ್ಯ ದೆಹಲಿಗೆ ತೆರಳಿದ್ರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ.
ಇದನ್ನೂ ಓದಿ : ವಿವಾದವಿಲ್ಲದ ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಬಿಜೆಪಿ ಹೈಕಮಾಂಡ್ ಸಜ್ಜು