ಹಾವೇರಿ: ನನ್ನ ತಂದೆ ಬಸವರಾಜ ಬೊಮ್ಮಾಯಿ ನಮ್ಮ ಕೆಲಸಗಳು ಮಾತನಾಡಬೇಕು, ನಾವಲ್ಲ ಎಂದು ಹೇಳಿಕೊಟ್ಟಿದ್ದಾರೆ. ಅದೇ ರೀತಿ ನಾನು ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹೇಳಿದರು.
ಭಾನುವಾರ ಶಿಗ್ಗಾಂವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ರಾಜ್ಯ ಸರ್ಕಾರವೇ ಬಂದಿದೆ. ಕಾಂಗ್ರೆಸ್ ನಾಯಕರು ಕ್ಷೇತ್ರಕ್ಕೆ ಬರುವುದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಡಿರುವ ಅಭಿವೃದ್ಧಿ ಕೆಲಸ ನೋಡಿಕೊಂಡು ಹೋಗಲು. ಶಿಗ್ಗಾಂವಿಯಲ್ಲಿ ಸಾಮಾಜಿಕವಾಗಿ ಎಲ್ಲಾ ಸಮುದಾಯದ ಅಭಿವೃದ್ಧಿ ಮಾಡಿದ್ದಾರೆ. ತಂದೆಯವರು ಮಾಡಿರುವ ಅಭಿವೃದ್ಧಿ ಕಾರ್ಯ ನೋಡಿ ಜನ ನನಗೆ ಮತ ನೀಡುತ್ತಾರೆ. ಕಾಂಗ್ರೆಸ್ ನಾಯಕರಿಗೆ ಶಿಗ್ಗಾಂವಿ - ಸವಣೂರು ಸಿಸಿ ರಸ್ತೆ, ಮನೆಗಳನ್ನು ಕಟ್ಟಿಸಿದ್ದೇವೆ. ಗಲ್ಲಿ ಗಲ್ಲಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದೇವೆ. ಅವುಗಳನ್ನು ತೋರಿಸಿ ಎಂದರು.
ಯಡಿಯೂರಪ್ಪ ರೋಡ್ ಶೋ: ಮತ್ತೊಂದೆಡೆ, ಬಹಿರಂಗ ಪ್ರಚಾರಕ್ಕೆ ಸೋಮವಾರ ಕೊನೆ ದಿನ ಆಗಿರುವುದರಿಂದ ಇಂದು ಬಿಜೆಪಿಯ ಘಟಾನುಘಟಿ ನಾಯಕರು ಭರತ್ ಬೊಮ್ಮಾಯಿ ಪರ ಮತಯಾಚನೆ ಮಾಡಿದರು. ಶಿಗ್ಗಾಂವಿ ತಾಲೂಕಿನ ಹುಲುಗೂರಲ್ಲಿ ಭರತ್ ಬೊಮ್ಮಾಯಿ ಪರ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ರೋಡ್ ಶೋ ನಡೆಸಿದರು. ಯಡಿಯೂರಪ್ಪಗೆ ಸಂಸದ ಬಸವರಾಜ ಬೊಮ್ಮಾಯಿ ಸಾಥ್ ನೀಡಿದರು.
ನಂತರ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಶಿಗ್ಗಾಂವಿ ಸಂತೆ ಮೈದಾನದಲ್ಲಿ ಬಹಿರಂಗ ಪ್ರಚಾರ ಸಭೆ ಕೈಗೊಂಡರು. ಸಮಾವೇಶದಲ್ಲಿ ಭರತ್ ಬೊಮ್ಮಾಯಿ ಪರ ಯಡಿಯೂರಪ್ಪ ಮತ ಬೇಟೆ ನಡೆಸಿದರು.
ಪತಿ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ಇಬ್ಬನಿ: ಪತಿ ಭರತ್ ಬೊಮ್ಮಾಯಿ ಗೆಲುವಿಗಾಗಿ ಪತ್ನಿ ಇಬ್ಬನಿ ಬೊಮ್ಮಾಯಿ ವೀರಭದ್ರೇಶ್ವರನ ಮೋರೆ ಹೋದರು. ಸವಣೂರು ತಾಲೂಕು ಕಾರಡಗಿ ಗ್ರಾಮದ ಐತಿಹಾಸಿಕ ವೀರಭದ್ರೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪತ್ನಿ ಇಬ್ಬನಿ ಮತ್ತು ತಾಯಿ ಚೆನ್ನಮ್ಮ ಭರತ್ ಬೊಮ್ಮಾಯಿ ಪರ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.
ನಾಳೆ ಬಹಿರಂಗ ಪ್ರಚಾರಕ್ಕೆ ತೆರೆ: ಸೋಮವಾರ ನ.11 ರಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ನಾಳೆ ಮತ್ತು ನಾಡಿದ್ದು ಮನೆ ಮನೆ ಪ್ರಚಾರ ಮಾತ್ರ ನಡೆಯಲಿದೆ. ಎನ್ಡಿಎ ಅಭ್ಯರ್ಥಿ ಭರತ್ ಬೊಮ್ಮಾಯಿ, ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ನಡುವೆ ನೇರ ಹಣಾಹಣಿ ಇದೆ. ನ. 13 ರಂದು ಶಿಗ್ಗಾಂವಿ - ಸವಣೂರು ಕ್ಷೇತ್ರದ ಮತದಾರರು ಈ ಉಪಚುನಾವಣೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ನ. 23 ರಂದು ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: ಭರತ್ ಬೊಮ್ಮಾಯಿಯನ್ನು ಸೋಲಿಸುವ ಶಕ್ತಿ ಕಾಂಗ್ರೆಸ್ನಲ್ಲಿ ಯಾರಿಗೂ ಇಲ್ಲ: ಯತ್ನಾಳ್