ಮೈಸೂರು: ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಮೈತ್ರಿ ಪಕ್ಷಗಳು ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ಶುಕ್ರವಾರ ಸಂಜೆ ಮೈಸೂರು ತಲುಪಿದೆ. ಇಂದು (ಶನಿವಾರ) ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಇದಕ್ಕಾಗಿ ಬೃಹತ್ ವೇದಿಕೆ ಹಾಗೂ ಮೈತ್ರಿ ನಾಯಕರ ಫ್ಲೆಕ್ಸ್, ಬ್ಯಾನರ್ಗಳನ್ನು ಹಾಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ನಡೆದಿದೆ. ಬೆಂಗಳೂರಿನಿಂದ ಮೈಸೂರಿಗೆ ಬರುವಾಗ ಮಾರ್ಗದಲ್ಲಿ ಹಲವೆಡೆ ಸಮಾವೇಶಗಳನ್ನು ನಡೆಸಲಾಗಿತ್ತು. ಇಂದು ಸಿದ್ದಲಿಂಗಪುರದ ಬಳಿ ಪಾದಯಾತ್ರೆಯನ್ನು ಮೈಸೂರು ನಗರ ಪ್ರವೇಶಿಸದಂತೆ ಪೊಲೀಸರು ಅರ್ಧ ಗಂಟೆಗಳ ಕಾಲ ತಡೆದು, ಬಳಿಕ ಪಾದಯಾತ್ರೆಗೆ ಅನುಮತಿ ನೀಡಿದರು.
ಪಾದಯಾತ್ರೆ ತಡೆದ ಬಗ್ಗೆ ಮೈಸೂರು ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಮಾತನಾಡಿ, ಸಂಜೆ ಕಾಂಗ್ರೆಸ್ ಜನಾಂದೋಲನ ಸಮಾವೇಶಕ್ಕೆ ಬಂದ ಜನ ನಗರದಿಂದ ಹೊರಗೆ ಹೋಗುವ ದೃಷ್ಟಿಯಿಂದ ಶುಕ್ರವಾರ ಸಂಜೆ 7 ಗಂಟೆಯ ನಂತರ ಮೈತ್ರಿ ಪಾದಯಾತ್ರೆ ಮೈಸೂರು ನಗರ ಪ್ರವೇಶಿಸುವಂತೆ ತಿಳಿಸಲಾಯಿತು. ಆದರೆ ಮೈತ್ರಿ ಪಾದಯಾತ್ರೆ ಬಹು ಬೇಗ ನಗರದ ಹೊರ ವಲಯಕ್ಕೆ ಬಂದ ಹಿನ್ನೆಲೆಯಲ್ಲಿ ಅರ್ಧ ಗಂಟೆಗಳ ಕಾಲ ತಡೆಯಲಾಯಿತು ಅಷ್ಟೇ ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಶನಿವಾರ ಮಹಾರಾಜ ಕಾಲೇಜು ಮೈದಾನದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳ ಮೈಸೂರು ಚಲೋ ಪಾದಯಾತ್ರೆಯ ಬೃಹತ್ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ. ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಿಬೇಕೆಂದು ಆಗ್ರಸಹಿಸಿ ನಡೆಸಿದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಮುಖ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಳೆದ ಶನಿವಾರ ಬೆಂಗಳೂರಿನಿಂದ ಆರಂಭಗೊಂಡ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್‌ನ ಜನಾಂದೋಲನ ಸಮಾವೇಶಕ್ಕೆ ಉತ್ತರ ನೀಡಲು ಮೈತ್ರಿ ಪಕ್ಷಗಳ ನಾಯಕರು ಸಜ್ಜಾಗಿದ್ದಾರೆ. ಸಮಾರಂಭದಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮೈತ್ರಿ ಪಕ್ಷಗಳ ಹಿರಿಯ ನಾಯಕರುಗಳು ಪಾಲ್ಗೊಳ್ಳಲಿದ್ದಾರೆ.
ಪೊಲೀಸ್ ಬಿಗಿ ಭದ್ರತೆ: ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಹೆಚ್ಚಿನ ಜನ ಭಾಗವಹಿಸುವ ಹಿನ್ನೆಲೆಯಲ್ಲಿ ಮಹಾರಾಜ ಕಾಲೇಜು ಮೈದಾನದಲ್ಲಿ ಹಾಗೂ ಸುತ್ತಮುತ್ತ ನಾಲ್ಕು ಹಂತದ ಭದ್ರತೆ ಹಾಗೂ ಪ್ರಮುಖ ಸರ್ಕಲ್ಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ವಾಹನ ನಿಲುಗಡೆ ಹಾಗೂ ಬದಲಿ ಸಂಚಾರ ಮಾರ್ಗಗಳ ವ್ಯವಸ್ಥೆಯನ್ನು ಮಾಡಲಾಗಿದೆ. ನಾಳಿನ ಮೈಸೂರು ಚಲೋ ಸಮಾವೇಶದ ಭದ್ರತೆಗೆ 4,500 ಮಂದಿ ಪೊಲೀಸರು, ಮೂವರು ಡಿವೈಎಸ್ಪಿ, 22 ಇನ್ಸ್ಪೆಕ್ಟರ್ಗಳು , 175 ಎಸ್ಐ, 100 ಜನ ಕಮಾಂಡೋಗಳು , 500 ಹೋಂ ಗಾರ್ಡ್ಸ್ ಗಳು ಹಾಗೂ ಕೆಎಸ್ಆರ್ಪಿ ಜೊತೆಗೆ ಸಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಡಿ.ಕೆ.ಶಿವಕುಮಾರ್ಗೆ ಡಿಸೆಂಬರ್‌ನೊಳಗೆ ಸಿಎಂ ಆಗುವ ಯೋಗವಿದೆ ಎಂದು ಅಜ್ಜಯ್ಯ ಹೇಳಿದ್ದಾರೆ: ಆರ್.ಅಶೋಕ್ - R Ashok