ಬೆಂಗಳೂರು: ಅಧಿಕಾರ ದುರ್ಬಳಕೆ ಹಾಗೂ ಸಾಕ್ಷ್ಯನಾಶ ಆರೋಪದಡಿ ಬಿಟ್ ಕಾಯಿನ್ ಪ್ರಕರಣದಲ್ಲಿಇನ್ಸ್ಪೆಕ್ಟರ್ ಚಂದ್ರಾಧರ್ ಅನ್ನ ವಿಶೇಷ ತನಿಖಾ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಮೂವರು ಪೊಲೀಸರು ಸೇರಿ ಒಟ್ಟು ನಾಲ್ವರನ್ನ ಬಂಧಿಸಿದಂತಾಗಿದೆ.
ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ ಆಗಿರುವ ಶ್ರೀಕೃಷ್ಣ ಆಲಿಯಾಸ್ ಶ್ರೀಕಿಯನ್ನ 2020ರಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಈತನ ವಿರುದ್ಧ ಕೆಂಪೇಗೌಡನಗರ, ಅಶೋಕನಗರ ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣೆ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ಸೈಬರ್ ಕ್ರೈಂ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ಚಂದ್ರಾಧರ್ ನನ್ನ ಶ್ರೀಕಿಯನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದರು.
ಪೊಲೀಸ್ ವಶದಲ್ಲಿರುವಾಗಲೇ ಅಕ್ರಮವಾಗಿ ವಿಚಾರಣೆ ನೆಪದಲ್ಲಿ ಬಂಧಿತನಾಗಿರುವ ಸಂತೋಷ್ ಮಾಲೀಕತ್ವದ ಜಿಸಿಐಡಿ ಸೈಬರ್ ಕಂಪನಿಗೆ ಕರೆದೊಯ್ದು ಕ್ರಿಪ್ಟೊ ವ್ಯಾಲೆಟ್ಗಳಲ್ಲಿ ಅನಧಿಕೃತವಾಗಿ ಆಕ್ಸಿಸ್ ಮಾಡಿ 1,83,624 ಲಕ್ಷ ಮೌಲ್ಯದ ಬಿಟ್ ಕಾಯಿನ್ ಗಳನ್ನ ಅಕ್ರಮವಾಗಿ ವರ್ಗಾವಣೆಗೆ ಚಂದ್ರಾಧರ್ ಸಹಕರಿಸಿದ್ದರು. ಅಲ್ಲದೇ ಶ್ರೀಕಿಗೆ ಲ್ಯಾಪ್ ಟಾಪ್ ಕೊಡಿಸಿ ಅತನಿಂದ ವಿವಿಧ ವೆಬ್ ಸೈಟ್ಗಳನ್ನು ಹ್ಯಾಕ್ ಮಾಡಿಸಿ ಲಕ್ಷಾಂತರ ರೂಪಾಯಿ ಹಣ ಕಬಳಿಸಿರುವ ಆರೋಪ ಕೇಳಿ ಬಂದಿತ್ತು.
ಎಸ್ಐಟಿ ರಚನೆಯಾಗುತ್ತಿದ್ದಂತೆ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡು ಅಧಿಕಾರಿಗಳು ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು, ಲಕ್ಷ್ಮೀಕಾಂತಯ್ಯ, ಖಾಸಗಿ ಸೈಬರ್ ಸಂಸ್ಥೆಯ ಮಾಲೀಕ ಸಂತೋಷ್ ಬಂಧಿಸಿದ್ದರು. ಇದೀಗ ಅಧಿಕಾರ ದುರ್ಬಳಕೆ ಹಾಗೂ ಸಾಕ್ಷ್ಯಾಧಾರ ನಾಶ ಆರೋಪದಡಿ ಚಂದ್ರಾಧರ್ ನನ್ನ ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ ಆಗಿನ ಇನ್ಸ್ಪೆಕ್ಟರ್ ಶ್ರೀಧರ್ ಕೆ.ಪೂಜಾರ್ ಆರೋಪಿಯಾಗಿದ್ದು, ತಮ್ಮನ್ನ ಬಂಧಿಸದಂತೆ ಹೈಕೋರ್ಟ್ನಿಂದ ತಡೆಯಾಜ್ಣೆ ತಂದಿರುವುದಾಗಿ ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.