ETV Bharat / state

ಬಿಟ್ ಕಾಯಿನ್ ಹಗರಣ: ಡಿವೈಎಸ್‌ಪಿ ವಿರುದ್ಧ ಘೋಷಿತ ಆರೋಪಿ ಆದೇಶ ರದ್ದು - Bit Coin Scam - BIT COIN SCAM

ಬಿಟ್ ಕಾಯಿನ್ ಪ್ರಕರಣ ಸಂಬಂಧ ಡಿವೈಎಸ್​ಪಿ ವಿರುದ್ಧದ ಘೋಷಿತ ಆರೋಪಿ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್ (Etv Bharat)
author img

By ETV Bharat Karnataka Team

Published : May 3, 2024, 8:16 AM IST

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡ ಆರೋಪ ಎದುರಿಸುತ್ತಿರುವ ಆಂತರಿಕ ಭದ್ರತಾ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್ ಕೆ.ಪೂಜಾರ್ ಅವರ ವಿರುದ್ಧ ಘೋಷಿತ ಆರೋಪಿ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ಹಾಗೂ ವಿಚಾರಣಾ ನ್ಯಾಯಾಲಯ ಘೋಷಿತ ಆರೋಪಿ ಎಂದು ವಾರಂಟ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಡಿವೈಎಸ್‌ಪಿ ಶ್ರೀಧರ್ ಕೆ. ಪೂಜಾರ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀಷಾನಂದ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೇ, ಘೋಷಿತ ಆರೋಪ ಎಂಬ ಆರೋಪವನ್ನು ರದ್ದುಪಡಿಸಿದೆ. ಆದರೆ, ಎಫ್‌ಐಆರ್‌ನ್ನು ರದ್ದುಪಡಿಸಲು ನಿರಾಕರಿಸಿದೆ. ಅಲ್ಲದೇ, ಮೇ 8ರಂದು ಬೆಳಗ್ಗೆ 9 ಗಂಟೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಕಸ್ಟಡಿಗೆ ಪಡೆದು ತನಿಖೆ ನಡೆಸಬೇಕು. ನಂತರ 2 ಲಕ್ಷ ರೂ. ಬಾಂಡ್ ಪಡೆದು ಬಿಡುಗಡೆ ಮಾಡಬೇಕು. ಪೊಲೀಸರ ತನಿಖೆಗೆ ಆರೋಪಿ ಶ್ರೀಧರ್.ಕೆ. ಪೂಜಾರ್ ಸಹಕರಿಸಬೇಕು ಎಂದು ತಿಳಿಸಿ ಹೈಕೋರ್ಟ್, ಅರ್ಜಿಯನ್ನು ಇತ್ಯರ್ಥ ಪಡಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್, ಅರ್ಜಿದಾರರು ದೇಶದಲ್ಲಿ ಕಾನೂನು ಪಾಲಿಸುವ ನಾಗರಿಕರಾಗಿದ್ದು, ಉನ್ನತ ಹುದ್ದೆಯಲ್ಲಿದ್ದಾರೆ. ಅವರು ಯಾವುದೇ ಅಪರಾಧ ಮಾಡಿಲ್ಲ. ಆದರೆ, ಇಲ್ಲಿ ರಾಜಕೀಯ ಉದ್ದೇಶಕ್ಕಾಗಿ ಅವರ ವೃತ್ತಿಪರ ಘನತೆಯನ್ನು ಹಾಳು ಮಾಡುವ ಸಲುವಾಗಿ ಪ್ರಕರಣದಲ್ಲಿ ಅವರನ್ನು ಆರೋಪಿ ಎಂಬಂತೆ ಬಿಂಬಿಸಲಾಗಿದೆ.

ಮಧ್ಯಂತರ ಆದೇಶದ ಮೇರೆಗೆ ಅರ್ಜಿದಾರರು ವಿಚಾರಣೆಗೆ ಹಾಜರಾಗಿದ್ದು, ತನಿಖೆಗೂ ಸಹಕರಿಸಿದ್ದಾರೆ. ಆದರೆ ಪ್ರತಿವಾದಿಗಳು ಅವರು ತನಿಖೆಗೆ ಹಾಜರಾಗಿಲ್ಲ ಎಂದಿರುವುದು ಆಧಾರ ರಹಿತ ಆಪಾದನೆ. ಜೊತೆಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ನೀಡದೇ ವಾರಂಟ್ ಜಾರಿಗೊಳಿಸಿದ್ದು ಕಾನೂನಿಗೆ ವಿರುದ್ಧವಾದ ನಡೆ. ಭಾರತದ ಸಂವಿಧಾನದ 19 ಮತ್ತು 21ನೇ ವಿಧಿ ಅಡಿ ಮೂಲಭೂತ ಹಕ್ಕುಗಳ ಉಲ್ಲಂಘನೆಯನ್ನು ಖಾತರಿಪಡಿಸುತ್ತದೆ. ಹಾಗಾಗಿ ಅರ್ಜಿದಾರರ ವಿರುದ್ಧ ಪ್ರಕರಣಗಳನ್ನು ರದ್ದುಗೊಳಿಸುವಂತೆ ನ್ಯಾಯಪೀಠವನ್ನು ಮನವಿ ಮಾಡಿದರು.

ಪ್ರಕರಣದ ಹಿನ್ನೆಲೆ: ಬಿಟ್ ಕಾಯಿನ್ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾಗ ತಂಡದಲ್ಲಿ ಶ್ರೀಧರ್ ಪೂಜಾರಿ ಕೂಡ ಇದ್ದರು. ಈ ವೇಳೆ ಅಕ್ರಮ ಎಸಗಿರುವ ಆರೋಪ ಕೇಳಿ ಬಂದಿತ್ತು. ಅದರಂತೆ ಪ್ರಕರಣ ದಾಖಲಿಸಿಕೊಂಡ ಎಸ್‌ಐಟಿ ಫೆ.17 ರಂದು ಶ್ರೀಧರ್ ಪೂಜಾರಿ ಬಂಧನಕ್ಕೆ ಮುಂದಾಗಿತ್ತು.

ಇದನ್ನೂ ಓದಿ: ಭ್ರೂಣ ಹತ್ಯೆ ಆರೋಪ: ವೈದ್ಯರ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ - Fetus Killing

ಇದನ್ನೂ ಓದಿ: ಮಗು ತಂದೆಯ ಜೊತೆಗಿದ್ದರೂ ತಾಯಿಯ ಆರೈಕೆ ಮುಖ್ಯ: ಹೈಕೋರ್ಟ್ - High Court

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.