ಹಾವೇರಿ: ತಮ್ಮ 15 ಎಕರೆ ಜಮೀನಿನಲ್ಲಿ ಸಾವಯವ ಹಾಗೂ ಸಮಗ್ರ ಕೃಷಿ ಪದ್ಧತಿ ಅನುಸರಿಸಿರುವ ಸಂಗೂರು ಗ್ರಾಮದ ರೈತ ಭುವನೇಶ್ವರ್ ಶಿಡ್ಲಾಪುರ ಅವರು ವಿವಿಧ ಬೆಳೆಗಳಿಂದ ವರ್ಷಕ್ಕೆ 30 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.
ನೀರಾವರಿ ಸೌಲಭ್ಯವಿರುವ ಎಂಟು ಎಕರೆ ಜಮೀನಿನಲ್ಲಿ ಅಡಕೆ, ಕರಿಬೇವು, ನಿಂಬೆ, ತೆಂಗು ಬೆಳೆ ಬೆಳೆದಿರುವ ಇವರು, ತೋಟದ ಸುತ್ತಲೂ ಸಾಗುವಾನಿ ಮತ್ತು ಹೆಬ್ಬೇವು ಮರಗಳನ್ನು ಬೆಳೆಸಿದ್ದಾರೆ. ಇದರ ಜೊತೆಗೆ ಅಡಕೆ ತೋಟದಲ್ಲಿ ಗೋವಿನಜೋಳ, ಕಬ್ಬು, ಹಲಸಂದಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ರಾಸಾಯನಿಕ ಗೊಬ್ಬರಕ್ಕೆ ಗುಡಬೈ ಹೇಳಿ ಭುವನೇಶ್ವರ್ ಅವರು ಕಳೆದ ಆರು ವರ್ಷಗಳಿಂದ ಸಾವಯುವ ಕೃಷಿಗೆ ಹೆಚ್ಚು ಒತ್ತು ಕೊಟ್ಟು ಅಡಕೆ ಮರಗಳಿಗಾಗಿ ಸೆಣಬು ಬೆಳೆದಿದ್ದಾರೆ.
ಸೆಣಬು ಬೆಳೆಯುತ್ತಿದ್ದಂತೆ ಅದನ್ನು ಕತ್ತರಿಸಿ ಹಸಿರೆಲೆ ಗೊಬ್ಬರವನ್ನಾಗಿ ಅಡಕೆ ಮರಗಳಿಗೆ ಹಾಕುವ ಇವರು, ಇದರ ಜೊತೆ ತಿಪ್ಪೆ ಮತ್ತು ಕೋಳಿ ಗೊಬ್ಬರವನ್ನೂ ಅಡಕೆ ಮರಗಳಿಗೆ ಹಾಕುತ್ತಾರೆ. ಪರಿಣಾಮ ಇವರ ತೋಟ ಇಂತಹ ಬರಗಾಲದಲ್ಲಿ ಸಹ ಹಸಿರಿನಿಂದ ನಳನಳಿಸುತ್ತಿದೆ. ಎಂಟು ಎಕರೆ ಜಮೀನಿನಲ್ಲಿ ಐದು ಸಾವಿರಕ್ಕೂ ಅಧಿಕ ಅಡಕೆ ಮರ ನೆಟ್ಟಿದ್ದಾರೆ. ಅಡಕೆ ಮರ ನೆಟ್ಟು ಐದು ವರ್ಷಗಳಾಗಿದ್ದು, ಈ ವರ್ಷದಿಂದ ಅಡಕೆ ಫಸಲು ಬರಲಾರಂಭಿಸಿದೆ.
ಫಸಲು ಪ್ರಾರಂಭಿಸಿರುವ ಬೆಳೆಗಳು: ತಮ್ಮ ಕೃಷಿ ಜಗತ್ತಿನ ಬಗ್ಗೆ ಮಾತನಾಡುವ ಭುವನೇಶ್ವರ್, "50 ಕರಿಬೇವಿನ ಗಿಡಗಳನ್ನು ನೆಟ್ಟಿದ್ದು, ಅವುಗಳಿಂದ ತಿಂಗಳಿಗೊಮ್ಮೆ ಆದಾಯ ಪಡೆಯುತ್ತಾರೆ. 50 ನಿಂಬೆ ಗಿಡಗಳನ್ನು ಹಾಕಿದ್ದು, ಅವುಗಳೂ ಸಹ ಈ ವರ್ಷದಿಂದ ಫಸಲು ನೀಡಲಿವೆ. ಅಡಕೆ ಮರಗಳು ವರ್ಷಕ್ಕೆ ಎರಡು ಬಾರಿ ಫಸಲು ಬಿಡುತ್ತವೆ. ಜೊತೆಗೆ ಮೆಕ್ಕೆಜೋಳ ಶೇಂಗಾ ಬೆಳೆಗಳು ಆರು ತಿಂಗಳಿಗೊಮ್ಮೆ ಆದಾಯ ತರುತ್ತವೆ. ಇದರಿಂದ ನನಗೆ ಒಂದಿಲ್ಲಾ ಒಂದು ಬೆಳೆಯಿಂದ ಆದಾಯ ಬರುತ್ತಲೇ ಇರುತ್ತದೆ" ಎಂದರು.
ಅಡಕೆ ಮರಗಳಿಗೆ ಬಿಸಿಲಿನ ಎಫೆಕ್ಟ್ ಆಗಬಾರದು ಎಂದು ಅವುಗಳ ನಡುವೆ ಕಬ್ಬು ಬೆಳೆದಿದ್ದಾರೆ. ಸಮೀಪದಲ್ಲಿ ಸಂಗೂರು ಸಕ್ಕರೆ ಕಾರ್ಖಾನೆ ಇರುವ ಕಾರಣ ಕಾರ್ಖಾನೆಗೆ ಕಬ್ಬು ಪೂರೈಸುತ್ತಾರೆ. ವರ್ಷಕ್ಕೆ ಸುಮಾರು ಸಾವಿರ ಟನ್ ಕಬ್ಬು ಪೂರೈಸುತ್ತಾರೆ.
ಇನ್ನು ಜಮೀನಿನ ಪಕ್ಕದಲ್ಲಿಯೇ ವರದಾ ನದಿ ಹರಿಯುತ್ತಿದ್ದು, ಇವರಿಗೆ ವರದಾನವಾಗಿದೆ. ಮಳೆಗಾಲದಲ್ಲಿ ಮಳೆ ನೀರು ಹೆಚ್ಚು ಪೋಷಕಾಂಶಗಳನ್ನು ತೋಟಕ್ಕೆ ಒದಗಿಸುತ್ತದೆ. ವರ್ಷದ 6 ತಿಂಗಳು ವರದಾ ನದಿ ನೀರು ಬಳಸುವ ಇವರು ಉಳಿದ ತಿಂಗಳುಗಳಲ್ಲಿ ಕೊಳವೆ ಬಾವಿ ನೀರು ಬಳಿಸುತ್ತಾರೆ. ಬೋರಿನ ನೀರಿಗಿಂತ ನದಿ ನೀರು ಹೆಚ್ಚು ಫಲವತ್ತತೆ ತಂದುಕೊಡುತ್ತದೆ. ಇನ್ನು ಸಾಗುವಾನಿ ಮತ್ತು ಹೆಬ್ಬೇವು ಒಂದು ಬಾರಿ ಮಾತ್ರ ಆದಾಯ ತರುವಂತ ಮರಗಳಾಗಿದ್ದು, ಇವುಗಳು ಒಂದು ಥರ ಠೇವಣಿ ಇಟ್ಟಂತೆ ಎನ್ನುತ್ತಾರೆ ಸಮಗ್ರ ಕೃಷಿಕ.
ವರ್ಷಕ್ಕೆ 30 ಲಕ್ಷ ಆದಾಯ: "ವರ್ಷಕ್ಕೆ ಒಮ್ಮೆ ಅಡಕೆ ಮರ, ಕರಿಬೇವು, ನಿಂಬೆಗಿಡ, ತೆಂಗಿಗೆ ಸಾವಯುವ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರವನ್ನು ಹಾಕುತ್ತೇನೆ. ತೋಟದಲ್ಲಿರುವ ಸೆಣಬು ತೋಟದಿಂದ ತೇವಾಂಶ ಕಡಿಮೆಯಾದಂತೆ ನೋಡಿಕೊಳ್ಳುತ್ತದೆ. ತೆಂಗು, ಅಡಕೆ, ನಿಂಬೆ, ಕರಿಬೇವು, ಗೋವಿನಜೋಳ, ಶೇಂಗಾ ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಂದ ವರ್ಷಕ್ಕೆ ಸುಮಾರು 30 ಲಕ್ಷ ರೂಪಾಯಿ ಆದಾಯ ಪಡೆಯುತ್ತಿದ್ದೇನೆ" ಎಂದು ತಿಳಿಸಿದರು.
ಭುವನೇಶ್ವರ್ ಒಬ್ಬರೇ ತೋಟವನ್ನು ನೋಡಿಕೊಳ್ಳುತ್ತಾರೆ. ಟ್ರ್ಯಾಕ್ಟರ್ ಸಹಾಯದಿಂದ ಬೇಸಾಯ ಮಾಡುತ್ತಾರೆ. ಉಳಿದ ಸಮಯದಲ್ಲಿ ಕೂಲಿ ಕಾರ್ಮಿಕರ ಅವಶ್ಯಕತೆ ಇದ್ದಾಗ ಅವರನ್ನು ಸಹ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಸಾವಯುವ ಕೃಷಿಗೆ ಇನ್ನುಷ್ಟು ಪ್ರಾಮುಖ್ಯತೆ ಬರಲಿದ್ದು, ರೈತರು ಸಾವಯುವ ಕೃಷಿಯತ್ತ ವಾಲುತ್ತಿದ್ದಾರೆ. ಇವರ ಸಾವಯುವ ಕೃಷಿ ಉಳಿದ ರೈತರಿಗೆ ಮಾದರಿಯಾಗಿದ್ದು, ಯುವ ರೈತರು ಇವರಿಂದ ಹೆಚ್ಚು ಕಲಿಯುವುದಿದೆ ಎನ್ನುತ್ತಾರೆ ಅಕ್ಕಪಕ್ಕದ ರೈತರು.
ಇದನ್ನೂ ಓದಿ: ಹಾವೇರಿ : ಕಲ್ಲಂಗಡಿ ನಂಬಿ ಬದುಕು ಕಟ್ಟಿಕೊಂಡ ರೈತ, ಸಾವಯವ ಕೃಷಿಕರಿಗೆ ಇವರೇ ಮಾದರಿ