ಶಿವಮೊಗ್ಗ: ಮಧ್ಯ ಕರ್ನಾಟಕ ಜೀವನಾಡಿ ಭದ್ರಾ ಜಲಾಶಯದ ಬುಡದಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಡೆಸುವುದರಿಂದ ಭದ್ರಾ ಜಲಾಶಯ ಅಪಾಯಕ್ಕೆ ಸಿಲುಕಲಿದೆ. ಹಾಗಾಗಿ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು" ಎಂದು ರೈತ ಮುಖಂಡ ಕೆ.ಟಿ. ಗಂಗಾಧರ್ ಆಗ್ರಹಿಸಿದ್ದಾರೆ.
ಶಿವಮೊಗ್ಗ ಪ್ರೆಸ್ಸ್ಟ್ರಸ್ಟ್ನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, "ಭದ್ರಾ ಜಲಾಶಯ ಮಧ್ಯ ಕರ್ನಾಟಕದಲ್ಲಿ ಸುಮಾರು 4.50 ಲಕ್ಷ ಎಕರೆ ಭೂಮಿಗೆ ನೀರು ಕೊಡುವ ದೊಡ್ಡ ಜಲಾಶಯವಾಗಿದೆ. 7.50 ಟಿಎಂಸಿ ನೀರನ್ನು ಕುಡಿಯುವ ನೀರು, ಜಾನುವಾರು ಹಾಗೂ ಜಲಚರಗಳಿಗೆ ಮೀಡಲಿಡಲಾಗಿದೆ. ನೀರನ್ನು ತರೀಕೆರೆ, ಹೊಸದುರ್ಗ ಸೇರಿದಂತೆ ಇತರೆ ಗ್ರಾಮಗಳಿಗೆ ತೆಗೆದುಕೊಂಡು ಹೋಗುವ ಯೋಜನೆಗೆ ನಮ್ಮ ವಿರೋಧವಿಲ್ಲ. ಈಗ ತರೀಕೆರೆ ಹಾಗೂ ಹೊಸದುರ್ಗದ ಗ್ರಾಮಾಂತರ ಭಾಗಕ್ಕೆ ಜಲಜೀವನ್ ಮಿಷನ್ ಮೂಲಕ ನೀರು ತೆಗೆದುಕೊಂಡು ಹೋಗಲಾಗುತ್ತಿದೆ. ಇದಕ್ಕಾಗಿ ಭದ್ರಾ ಜಲಾಶಯದ ಬಫರ್ ಝೋನ್ ಬಳಿಯೇ ಕಾಮಗಾರಿ ನಡೆಸಲಾಗುತ್ತಿದೆ" ಎಂದರು.
"ಅಣೆಕಟ್ಟೆಯ ಬಫರ್ ಝೋನ್ನಲ್ಲಿ ಯಾವುದೇ ಕಟ್ಟಡಗಳು, ವಾಸದ ಮನೆಗಳು ಇರುವಂತಿಲ್ಲ. ಜಲಾಶಯಗಳ ಮೇಲೆ ದುಷ್ಟಶಕ್ತಿಗಳ ಕಣ್ಣಿದೆ. ಆದರೆ ಜಲಾಶಯ ಬುಡದಲ್ಲಿಯೇ ಜಲಜೀವನ್ ಮಿಷನ್ನ ಶುದ್ಧೀಕರಣ ಘಟಕ ಪ್ರಾರಂಭಿಸುವ ಕೆಲಸ ಮಾಡಲಾಗಿದೆ. ಡ್ಯಾಂನ ಮುಂಭಾಗವೇ ಭೂಮಿಯನ್ನು ಅಗೆದು, ಕಾಮಗಾರಿ ನಡೆಸಲಾಗುತ್ತಿದೆ. ಈ ಕಾಮಗಾರಿಯಲ್ಲಿ ದೊಡ್ಡ ದೊಡ್ಡ ನೀರಿನ ಟ್ಯಾಂಕರ್ಗಳು, ಅಲ್ಲದೆ ವಸತಿ ಸಮುಚ್ಚಯಗಳನ್ನು ಸಹ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಡ್ಯಾಂ ಅಸ್ಥಿರಗೊಳ್ಳುವ ಸಾಧ್ಯತೆ ಇದೆ" ಎಂದು ಆತಂಕ ವ್ಯಕ್ತಪಡಿಸಿದರು.
"ಇದಕ್ಕೆ ನೀರಾವರಿ ಇಲಾಖೆ ಯಾವಾಗ ಅನುಮತಿ ನೀಡಿದೆ ಎಂಬುದರ ಸ್ಪಷ್ಟನೆ ಇನ್ನೂ ಇಲ್ಲ. ಕೇಂದ್ರದ ಜಲ ಮಂಡಳಿಯ ಅನುಮತಿಯನ್ನು ಪಡೆದಿಲ್ಲ. ಗ್ರಾಮೀಣ ಕುಡಿಯುವ ನೀರಿನ ಯೋಜನೆ ಹಾಗೂ ನೀರಾವರಿ ಯೋಜನೆಯ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ಇಲ್ಲ. ಭದ್ರಾ ಜಲಾಶಯದ ಭದ್ರತಾ ಸಿಬ್ಬಂದಿಗೂ ಮಾಹಿತಿ ಇಲ್ಲ. ಕೆಲಸ ಶುರುವಾಗಿದೆ. ಈ ಕುರಿತು ಭದ್ರಾ ಯೋಜನೆಯ ಇಂಜಿನಿಯರ್ಗಳಿಗೆ ಮಾಹಿತಿ ಇದ್ದರೂ ಮೌನ ವಹಿಸುವ ಮೂಲಕ ತಮ್ಮ ಸಮ್ಮತಿ ಸೂಚಿಸಿದ್ದಾರೆ" ಎಂದು ಆರೋಪಿಸಿದರು.
"ಆಂಧ್ರ ಮೂಲದ ಗುತ್ತಿಗೆದಾರನಿಗೆ 16 ಎಕರೆ ಪ್ರದೇಶವನ್ನು ಕಾಮಗಾರಿಗೆ ನೀಡಲಾಗಿದೆ. ನಮ್ಮ ಡ್ಯಾಂನಲ್ಲಿ 71 ಟಿಎಂಸಿ ನೀರು ಸಂಗ್ರಹ ಮಾಡಲಾಗಿದೆ. ಈ ಡ್ಯಾಂ ಅನ್ನು ಎರಡು ಗುಡ್ಡಗಳ ನಡುವೆ ನಿರ್ಮಿಸಲಾಗಿದೆ. ಇಂತಹ ಗುಡ್ಡದ ಕೆಳ ಭಾಗದಲ್ಲಿ ಅಗೆದು ಕಾಮಗಾರಿ ನಡೆಸಿರುವುದು ಖಂಡನೀಯ. ಸರ್ಕಾರ ಹಾಗೂ ನೀರಾವರಿ ಇಲಾಖೆ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕಿದೆ. ಇಲ್ಲವಾದಲ್ಲಿ ರೈತ ಸಂಘ ಡ್ಯಾಂ ಉಳಿಸಿಕೊಳ್ಳಲು ಸಂಘರ್ಷಕ್ಕೆ ಬೇಕಾದರೂ ತಯಾರಿದೆ. ಸರ್ಕಾರ ಸಂಘರ್ಷಕ್ಕೆ ಎಡೆಮಾಡಿಕೊಡದೆ ಕೊಡಲೇ ಕಾಮಗಾರಿ ನಿಲ್ಲಿಸಿ, ಕಾಮಗಾರಿಗೆ ಬೇರೆ ಕಡೆ ಜಾಗ ನೀಡಬೇಕಿದೆ. ಜಲಾಶಯದ ಭದ್ರತಾ ಪ್ರದೇಶದಲ್ಲಿ, ಸುರಕ್ಷಿತ ಪ್ರದೇಶದಲ್ಲಿ ನೀರು ಶುದ್ಧೀಕರಣ ಘಟಕ ಮಾಡಿರುವುದು ಅವೈಜ್ಞಾನಿಕವಾಗಿದೆ. ವಸತಿ ಗೃಹ ಪಕ್ಕದಲ್ಲಿಯೇ ನಿರ್ಮಾಣ ಮಾಡಲಾಗುತ್ತಿದೆ. ಮುಂದೆ ದುಷ್ಟಶಕ್ತಿಗಳು ವಾಸದ ಮನೆಯಲ್ಲಿ ಉಳಿದುಕೊಂಡು ಹಾನಿಯನ್ನುಂಟು ಮಾಡಿದರೆ ಜಲಾಶಯದ ಭದ್ರತೆ ಕಾಪಾಡುವವರು ಯಾರು" ಎಂದು ಪ್ರಶ್ನಿಸಿದರು.
"ಈಗ ಭದ್ರಾ ಮೇಲ್ದಂಡೆ ಯೋಜನೆಗೆ 19 ಟಿಎಂಸಿ ನೀರನ್ನು ಚಿತ್ರದುರ್ಗ, ತುಮಕೂರಿಗೆ ಕೊಡುತ್ತಿದ್ದೇವೆ. ತುಂಗಾ ಜಲಾಶಯದಿಂದ 19 ಟಿಎಂಸಿ ನೀರನ್ನು ಭದ್ರಕ್ಕೆ ತಂದು ಅದನ್ನು ಮೇಲ್ದಂಡೆ ಯೋಜನೆಗೆ ನೀಡಲಾಗುತ್ತಿದೆ. ಇದರಿಂದ ಭದ್ರಾ ಅಣೆಕಟ್ಟು ಎಷ್ಟು ಮಹತ್ವದ್ದಾಗಿದೆ ಎಂದು ಸರ್ಕಾರ ತಿಳಿಯಬೇಕಿದೆ. ಮಧ್ಯ ಕರ್ನಾಟಕದ ಜೀವನಾಡಿಯಾದ ಭದ್ರಾ ಜಲಾಶಯದಲ್ಲಿ ಕೆಎಸ್ಆರ್ ಮಾದರಿಯಲ್ಲಿ ಉದ್ಯಾನವನ ನಿರ್ಮಾಣ ಮಾಡಿ ಸೌಂದರ್ಯ ಹೆಚ್ಚಿಸಬೇಕಿದೆ. ಈ ಕುರಿತು ನೀರಾವರಿ ಇಲಾಖೆ ಇಂಜಿನಿಯರ್ಗಳಿಗೆ ಕಾಮಗಾರಿ ನಿಲ್ಲಿಸಲು ಶೋಕಾಸ್ ನೋಟಿಸ್ ನೀಡಬೇಕೆಂದು ತಿಳಿಸಲಾಗಿದೆ. ಆದರೆ ಅಧಿಕಾರಿಗಳು ಈ ಜಾಗವನ್ನು ಮೀನುಗಾರಿಕಾ ಇಲಾಖೆಗೆ ನೀಡಿದ್ದೇವೆ. ಅವರು ಕಾಮಗಾರಿಗೆ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ" ಎಂದು ತಿಳಿಸಿದರು.
"ಹಿಂದೆ ಡ್ಯಾಂನಿಂದ ನೀರು ಬಿಡುವ ಜಾಗದಲ್ಲಿ ಕಾಮಗಾರಿ ನಡೆಸಲು ಅಗೆಯಲಾಗಿತ್ತು. ಕಾಮಗಾರಿ ನಡೆಯುವ ಕಂಪನಿಯನ್ನು ಬ್ಲಾಕ್ ಲಿಸ್ಟ್ಗೆ ಹಾಕಿಲ್ಲ. ಇದಕ್ಕಾಗಿ 7 ಕೋಟಿ ರೂ. ಮೌಲ್ಯದ ಕಾಮಗಾರಿಯನ್ನು ನೀಡಲಾಗಿತ್ತು. ಈಗ ಸರ್ಕಾರ ಡ್ಯಾಂನ ಸೌಂದರ್ಯವನ್ನು ಹಾಳು ಮಾಡಲು ಹೊರಟಿದೆ. ಇಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳ ಕರ್ತವ್ಯಲೋಪ ಕಂಡು ಬರುತ್ತಿದೆ. ಹಾಗಾಗಿ ನೀರಾವರಿ ಸಚಿವ ಡಿ. ಕೆ. ಶಿವಕುಮಾರ್ ಅವರೇ, ತಕ್ಷಣ ಕಾಮಗಾರಿಯನ್ನು ನಿಲ್ಲಿಸಬೇಕು. ಇಲ್ಲವಾದರೆ 7 ಜಿಲ್ಲೆಯ ಜನರ ಸಂಘರ್ಷವನ್ನು ಎದುರಿಸಬೇಕಾಗುತ್ತದೆ" ಎಂದು ಕೆ ಟಿ ಗಂಗಾಧರ್ ಎಚ್ಚರಿಕೆ ರವಾನಿಸಿದರು.