ಬೆಂಗಳೂರು: ರಾಜಧಾನಿಯಲ್ಲಿ ದಿನೇ ದಿನೇ ರೋಡ್ ರೇಜ್ ಗಲಾಟೆಗಳು ಹೆಚ್ಚಾಗುತ್ತಿವೆ. ಕಾರಿಗೆ ಬೈಕ್ ಟಚ್ ಆಗಿದ್ದರಿಂದ ನಡೆದ ಗಲಾಟೆಯಲ್ಲಿ ಓರ್ವ ಬೈಕ್ ಸವಾರ ಮೃತಪಟ್ಟ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಮಹೇಶ್ ಎಂಬ ಯುವಕ ಮೃತಪಟ್ಟಿದ್ದಾನೆ.
ಮಹೇಶ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈತನ ಪೋಷಕರು ಕೂಲಿ ಕೆಲಸ ಮಾಡಿಕೊಂಡು ಜಕ್ಕೂರಿನ ಜಿಕೆವಿಕೆಯಲ್ಲಿ ವಾಸವಿದ್ದಾರೆ. ನಿನ್ನೆ ರಾತ್ರಿ ಸ್ನೇಹಿತರೊಂದಿಗೆ ಟೀ ಕುಡಿದು ವಾಪಸ್ ಮನೆಗೆ ಬೈಕ್ನಲ್ಲಿ ಬರುತ್ತಿದ್ದಾಗ ಯೂಟರ್ನ್ ಮಾಡುವ ವೇಳೆ ಅರವಿಂದ್ ಎಂಬವರ ಕಾರಿಗೆ ಟಚ್ ಆಗಿದೆ. ಇದರಿಂದ ಕೋಪಗೊಂಡ ಕಾರು ಚಾಲಕ, ಮಹೇಶನ ಬೈಕ್ ಚೇಸ್ ಮಾಡಿದ್ದಾನೆ. ಇದರಿಂದ ಭಯಗೊಂಡ ಮಹೇಶ್ ಗಲ್ಲಿ-ಗಲ್ಲಿಯೊಳಗಿನ ರಸ್ತೆಗಳಲ್ಲಿ ಬೈಕ್ ತಿರುಗಿಸಿದ್ದಾನೆ. ಹಿಂಬಾಲಿಸುತ್ತಿದ್ದ ಆರೋಪಿಯ ಕಾರು ಸಪ್ತಗಿರಿ ಲೇಔಟ್‌ನೊಳಗೆ ಬರುತ್ತಿದ್ದಂತೆ ಬೈಕ್ನಲ್ಲಿದ್ದ ಇಬ್ಬರು ಸ್ನೇಹಿತರು ಕೆಳಗೆ ಬಿದ್ದಿದ್ದಾರೆ. ಬಳಿಕ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮನೆಯೊಂದರ ಗೋಡೆಗೆ ಗುದ್ದಿದೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಮಹೇಶ್‌ನನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರಿನಲ್ಲಿ ಅರವಿಂದ್ ಜೊತೆ ಚೆನ್ನಕೇಶವ್ ಎಂಬಾತ ಇದ್ದು, ಕೃತ್ಯದ ಬಳಿಕ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತ್ತೆಗೆ ಬಲೆ ಬೀಸಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿ ಬ್ಯಾಂಕ್ವೊಂದರ ಮ್ಯಾನೇಜರ್ ಆಗಿದ್ದು ತಿಂಡ್ಲು ನಿವಾಸಿ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Bengaluru crime: ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಗೆ ಸಂಚು.. ಕುಖ್ಯಾತ ರೌಡಿಗಳ ವಿರುದ್ಧ ಎಫ್ಐಆರ್