ಬೆಂಗಳೂರು: ಎರಡು ದಿನಗಳಿಂದ ಸುರಿಯುತ್ತಿರುವ ವರ್ಷಧಾರೆಗೆ ಬೆಂಗಳೂರು ಅಕ್ಷರಶಃ ತತ್ತರಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. 200ಕ್ಕೂ ಅಧಿಕ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿದರೆ, ಮತ್ತೊಂದೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮಳೆ ಸಂಬಂಧ ಅವಘಡಗಳಲ್ಲಿ ಮೂವರು ಗಾಯಗೊಂಡಿದ್ದಾರೆ. ಒಟ್ಟು ಈವರೆಗೆ 111.1 ಮಿಲಿ ಮೀಟರ್ ಮಳೆಯಾಗಿದ್ದು, 133 ವರ್ಷಗಳ ನಂತರ ಜೂನ್ ತಿಂಗಳಲ್ಲಿ ಸುರಿದ ಅತ್ಯಧಿಕ ಮಳೆ ಇದೆಂದು ದಾಖಲೆಯಾಗಿದೆ.
ಇಡೀ ತಿಂಗಳ ವಾಡಿಕೆ ಮಳೆ ಒಂದೇ ಸಂಜೆ ಸುರಿದಿದೆ. 133 ವರ್ಷಗಳ ಹಿಂದೆ ಸುರಿದಿದ್ದ ಮಳೆ ಪ್ರಮಾಣವನ್ನು ಮೀರಿಸಿ ಹೊಸ ದಾಖಲೆ ಬರೆದಿದೆ. 1891ರ ಜೂನ್ 18ರಂದು ಬೆಂಗಳೂರಲ್ಲಿ 24 ಗಂಟೆಗಳಲ್ಲಿ 101.6 ಮಿ.ಮೀ ಮಳೆಯಾಗಿದ್ದು ಈವರೆಗಿನ ದಾಖಲೆಯಾಗಿತ್ತು. ಆದರೆ ಭಾನುವಾರ ಸುರಿದ ಮಳೆ ಆ ದಾಖಲೆಯನ್ನು ಮುರಿದಿದೆ.
ಮಳೆ ಸೃಷ್ಟಿಸಿದ ಅವಾಂತರ: ಮಳೆಯ ಅವಾಂತರಕ್ಕೆ ಆರ್‌ಆರ್ ನಗರದಲ್ಲಿ ಓರ್ವ ಹಾಗೂ ಜಯನಗರದಲ್ಲಿ ಇಬ್ಬರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನ ಸುಮಾರು 40 ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿರುವ ಅವಾಂತರ ಸೃಷ್ಟಿಯಾಗಿದೆ. ಸದ್ಯ ರಸ್ತೆಗಳಲ್ಲಿ ನಿಂತಿದ್ದ ನೀರು ಖಾಲಿಯಾಗುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸಲಾಗಿದೆ.
ಮಳೆಯ ಜೊತೆಗೆ ವಿಪರೀತ ಗಾಳಿಯೂ ಸೇರಿದ್ದರಿಂದ ವಾಣಿಜ್ಯ ಮಳಿಗೆಗಳ ಬೋರ್ಡ್ಗಳು ರಸ್ತೆಗೆ ಬಂದು ಬಿದ್ದಿವೆ. ಈಗಲೂ ಕೆಲವೆಡೆ ಅಂಡರ್ ಪಾಸ್‌ಗಳಲ್ಲಿ ನೀರು ನಿಂತು ವಾಹನ ಸಂಚಾರ ದುಸ್ತರವಾಗಿದೆ. ಜೊತೆಗೆ ಬೈಕ್, ಕಾರುಗಳಿಗೆ ಕೂಡ ಭಾರೀ ಹಾನಿ ಉಂಟಾಗಿದೆ. ಇನ್ನು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಸಿಎಂ ಸರ್ಕಾರಿ ನಿವಾಸದ ಎದುರು ರಸ್ತೆ ಕುಸಿದು, ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಅವಾಂತರಕ್ಕೆ 100ಕ್ಕೂ ಹೆಚ್ಚು ಮರಗಳು ಧರಾಶಾಹಿ; ಇನ್ನೂ ಐದು ದಿನ ವರುಣನ ಆರ್ಭಟ - Bengaluru Rain
ಬನ್ನೇರುಘಟ್ಟ ರಸ್ತೆಯ ಹುಳಿಮಾವು ಬಳಿ ಬೃಹತ್ ಗಾತ್ರದ ಮರ ಬಿದ್ದಿದೆ. ಅಂಗಡಿ ಮತ್ತು 10ಕ್ಕೂ ಹೆಚ್ಚು ಬೈಕ್ಗಳು ಜಖಂ ಆಗಿವೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಸಾರ್ವಜನಿಕರು ಪಾರಾಗಿದ್ದಾರೆ. ಪೀಣ್ಯಾದ ಅರವಿಂದ ಮೋಟಾರ್ಸ್ ಬಳಿ ಕಾರಿನ ಮೇಲೆ ಮರ ಬಿದ್ದ ಕಾರಣ ಕಾರಿನಲ್ಲಿ ಸಿಲುಕಿದ ಚಾಲಕನನ್ನು ಸ್ಥಳೀಯರು ರಕ್ಷಿಸಿದ್ದಾರೆ.
'ನಮ್ಮ ಮೆಟ್ರೋ' ಎಂದಿನಂತೆ ಸಂಚಾರ: ಮಳೆಯ ಅಬ್ಬರಕ್ಕೆ ಜೀವನಾಡಿಯಾಗಿರುವ ಮೆಟ್ರೋ ಸಂಚಾರಕ್ಕೂ ನಿನ್ನೆ ಅಡಚಣೆ ಉಂಟಾಗಿತ್ತು. ನೇರಳೆ ಲೈನ್ ಇಂದಿರಾನಗರ ಮತ್ತು ಎಂಜಿ ರಸ್ತೆಯ ನಡುವಿನ ಮೆಟ್ರೋ ಸೇತುವೆ ಮೇಲೆ ಮರವೊಂದು ಉರುಳಿ ಬಿತ್ತು. ಹೀಗಾಗಿ ಮೆಟ್ರೋ ಸಂಚಾರವನ್ನು ಅನಿವಾರ್ಯವಾಗಿ ನಿಲ್ಲಿಸಬೇಕಾಗಿತ್ತು. ಇಂದು ಮತ್ತೆ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರು ಎಂದಿನಂತೆ ಸಂಚರಿಸುತ್ತಿದ್ದಾರೆ.
ನಗರದಲ್ಲಿ ಎಲ್ಲೆಲ್ಲಿ ಎಷ್ಟು ಮಳೆ?: ಬೆಂಗಳೂರಿನ ಹಂಪಿ ನಗರದಲ್ಲಿ 101 ಮಿ.ಮೀ, ವಿದ್ಯಾಪೀಠ 88 ಮಿ.ಮೀ, ಕಾಟನ್‌ಪೇಟೆ 87 ಮಿ.ಮೀ. ಮಾರುತಿ ಮಂದಿರ ವಾರ್ಡ್ 83 ಮಿ.ಮೀ, ಹೊರಮಾವು 80 ಮಿ.ಮೀ. ಕೊಡಿಗೇಹಳ್ಳಿ 79 ಮಿ.ಮೀ. ಕೊಟ್ಟಿಗೆಪಾಳ್ಯ 77 ಮಿ.ಮೀ, ಸಂಪಂಗಿರಾಮನಗರ 71 ಮಿ.ಮೀ, ಚಾಮರಾಜಪೇಟೆ 71 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಜುಲೈ-ಸೆಪ್ಟೆಂಬರ್ ವೇಳೆಗೆ 'ಲಾ ನಿನಾ' ಪ್ರಬಲ, ಉತ್ತಮ ಮುಂಗಾರು ನಿರೀಕ್ಷೆ - El Nio Ending