ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯದ ಜನರಿಗೆ ಬೆಲೆ ಏರಿಕೆಯ ಶಾಕ್ ಸಿಕ್ಕಿದ್ದು, ನಿನ್ನೆ (ಶನಿವಾರ) ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ತೆರಿಗೆಯಲ್ಲಿ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನೂತನ ದರಗಳು ಈಗಾಗಲೇ ಜಾರಿಗೆ ಬಂದಿವೆ. ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 3 ರೂಪಾಯಿ ಮತ್ತು ಡಿಸೇಲ್ ದರದಲ್ಲಿ 3.50 ರೂಪಾಯಿ ಹೆಚ್ಚಳವಾಗಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹೆಚ್ಚಳದಿಂದ ಜನಸಾಮಾನ್ಯರ ದಿನ ನಿತ್ಯದ ಓಡಾಟಕ್ಕೆ ತೊಂದರೆಯಾಗಲಿದೆ. ಹಣದುಬ್ಬರ ಹೆಚ್ಚಾಗಲಿದೆ. ದಿನಸಿ ಸೇರಿದಂತೆ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಗಗನಕ್ಕೇರಲಿದೆ. ಡೆಲಿವರಿಯವರಿಗೂ ಇದರ ಬಿಸಿ ತಟ್ಟಲಿದ್ದು, ಗ್ರಾಹಕರಿಗೆ ಡೆಲಿವರಿ ದರಗಳು ದುಪ್ಪಟ್ಟಾಗಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಕುರಿತು ಈಟಿವಿ ಭಾರತದ ಜೊತೆ ಕುಮಾರ ಪಾರ್ಕ್ ನಿವಾಸಿ ಕನ್ಹಯ್ಯ ಲಾಲ್ ಮಾತನಾಡಿ, ದುಡಿಮೆ ಅಥವಾ ವ್ಯಾಪಾರ ಈಗಿನ ಕಾಲದಲ್ಲಿ ಕಷ್ಟವಾಗಿದೆ. ಏಕಾಏಕಿ ಪೆಟ್ರೋಲ್, ಡಿಸೇಲ್ ಬೆಲೆ ಜಾಸ್ತಿ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಂದೇ ಬಾರಿ ಲೀಟರ್ಗೆ 3 ರೂಪಾಯಿ ಹೆಚ್ಚಿಸಿರುವುದು ಕಂಗಾಲಾಗುವಂತೆ ಮಾಡಿದೆ. ರೈತರಿಗೆ ಮತ್ತು ಗ್ರಾಹಕರಿಗೂ ಸಹ ಕಷ್ಟವಾಗಲಿದೆ. ಸರ್ಕಾರ ಒಂದು ಕಡೆ ಫ್ರೀ ಕೊಟ್ಟು, ಇನ್ನೊಂದು ಕಡೆ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡುತ್ತಿದೆ. ಈ ರೀತಿಯಲ್ಲಿ ಮಾಡುವುದು ಸರಿಯಲ್ಲ. ಅಂಗಡಿಗಳ ಕರೆಂಟ್ ಬಿಲ್ ಕೂಡ ಹೆಚ್ಚಾಗಿದೆ ಎಂದು ಅಳಲು ತೋಡಿಕೊಂಡರು.
ವಿಜಯನಗರದ ಮಾರ್ಕೆಟಿಂಗ್ ಉದ್ಯೋಗಿ ಯೂನಿಸ್ ಮಾತನಾಡಿ, ಪೆಟ್ರೋಲ್ ದರ ಕೇವಲ 57 ರೂಪಾಯಿ ಇದೆ, ಇದನ್ನು ಈಗ 100 ರೂಪಾಯಿಗಿಂತ ಜಾಸ್ತಿ ಮಾಡಲಾಗಿದೆ. ಮೊದಲಿನಿಂದ ಪೆಟ್ರೋಲ್, ಡೀಸೆಲ್ಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ. ಜನರಿಗೆ ಇದು ದೊಡ್ಡ ಆಘಾತವಾಗಿದೆ. 3 ರೂಪಾಯಿ ಹೆಚ್ಚಳ ಈಗ ಮಾಡಿರುವುದು ದೊಡ್ಡದಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ದರ ಕಡಿಮೆಯೇ ಇದೆ. ಈಗ ವಾಹನಗಳನ್ನು ಮನೆಯಿಂದ ಹೊರ ತೆಗೆಯುವುದೂ ಕಷ್ಟಕರವಾಗಿದೆ ಎಂದು ಹೇಳಿದರು.
ಇನ್ನು, ಗಿರಿನಗರದ ನಿವಾಸಿ ಭಾಸ್ಕರ್ ಮಾತನಾಡಿ, ಫ್ರೀ ಯೋಜನೆಗಳಿಗಾಗಿ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಮಾಡಿರಿರುವುದು ಸರಿಯಲ್ಲ. ಸಾಮಾನ್ಯ ಜನರಿಗೆ ಈ ಹೆಚ್ಚಿನ ಹೊರೆಯಾಗಿದೆ. ಯೋಜನೆಗಳನ್ನು ತರುವ ಮುಂಚೆ ಸರ್ಕಾರಗಳು ಯೋಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ನಾಳೆ ಬಿಜೆಪಿಯಿಂದ ಪ್ರತಿಭಟನೆ: ಡಾ. ಅಶ್ವತ್ಥನಾರಾಯಣ್ - BJP PROTEST