ಬೆಂಗಳೂರು: ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮಹಿಳೆ ಮಹಾಲಕ್ಷ್ಮಿಯ ಬರ್ಬರ ಹತ್ಯೆ ಪ್ರಕರಣದ ಶಂಕಿತ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮುಕ್ತಿ ರಂಜನ್ ರಾಯ್ ಆತ್ಮಹತ್ಯೆ ಮಾಡಿಕೊಂಡ ಶಂಕಿತ ಆರೋಪಿ.
ಡಿಸಿಪಿ ಮಾಹಿತಿ: ಕೊಲೆ ಬಳಿಕ ತಲೆಮರೆಸಿಕೊಂಡು ಓಡಾಡುತ್ತಿದ್ದ ಶಂಕಿತ ಆರೋಪಿ ಮುಕ್ತಿ ರಂಜನ್ ರಾಯ್, ಒಡಿಶಾದ ತನ್ನ ಸ್ವಗ್ರಾಮ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕೇಂದ್ರ ಬೆಂಗಳೂರು ಉಪ ಪೊಲೀಸ್ ಆಯುಕ್ತ ಶೇಖರ್ ಎಚ್ ತೆಕ್ಕಣ್ಣವರ್ ತಿಳಿಸಿದ್ದಾರೆ.
ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಬೆಂಗಳೂರು ಪೊಲೀಸರು, ಆರೋಪಿಯ ಬಂಧನಕ್ಕೆ ಒಡಿಶಾ ಸೇರಿದಂತೆ ಹಲವು ಕಡೆ ಕಾರ್ಯಾಚರಣೆ ನಡೆಸುತ್ತಿತ್ತು. ಈ ನಡುವೆ ಮುಕ್ತಿ ರಂಜನ್ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹಾಲಕ್ಷ್ಮಿಯ ಹತ್ಯೆ ಬಳಿಕ ಬೆಂಗಳೂರಿನಿಂದ ಪರಾರಿಯಾಗಿದ್ದ ರಾಯ್, ಒಡಿಶಾದ ಭದ್ರಕ್ ಜಿಲ್ಲೆಯ ಸ್ಮಶಾನದ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಕೊಲೆಯ ನಂತರ, ತನ್ನ ಸ್ವಗ್ರಾಮಕ್ಕೆ ಹಿಂದಿರುಗಿದ್ದ ಆರೋಪಿ, ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಒಡಿಶಾ ಪೊಲೀಸರು ತಿಳಿಸಿದ್ದಾರೆ.
ಡೈರಿಯಲ್ಲಿ ಕೊಲೆ ತಪ್ಪೊಪ್ಪಿಗೆ: ಮಹಿಳೆ ಕೊಲೆ ಪ್ರಕರಣದ ಪ್ರಮುಖ ಶಂಕಿತ ರಂಜನ್ ರಾಯ್ ಭುಯಿನ್‌ಪುರ ಗ್ರಾಮದ ನಿವಾಸಿ. ಸ್ಥಳದಲ್ಲಿ ಆತನ ಲ್ಯಾಪ್‌ಟಾಪ್ ಮತ್ತ ಡೈರಿ ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡೈರಿಯಲ್ಲಿ ಮಹಿಳೆಯನ್ನು ಕೊಂದು ನಂತರ ಆಕೆಯ ಮೃತದೇಹವನ್ನು 59 ತುಂಡುಗಳಾಗಿ ಕತ್ತರಿಸಿರುವುದಾಗಿ ಶಂಕಿತ ಬರೆದುಕೊಂಡಿದ್ದಾನೆ ಎಂದು ಭದ್ರಕ್ ಎಸ್‌ಪಿ ವರುಣ್ ಗುಂಟುಪಲ್ಲಿ ತಿಳಿಸಿದ್ದಾರೆ.
ಈ ಕುರಿತು ಧುಸುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಂಕಿತ ಆರೋಪಿಯ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಅವರ ಕುಟುಂಬಕ್ಕೆ ಹಸ್ತಾಂತರಿಸಿದ್ದೇವೆ ಎಂದು ಧುಸುರಿ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಂಕಿತ ಆರೋಪಿಯು ಬೆಂಗಳೂರಿನ ಹೆಬ್ಬಗೋಡಿ ಪ್ರದೇಶದಲ್ಲಿ ವಾಸವಾಗಿದ್ದು, ಮಲ್ಲೇಶ್ವರಂನಲ್ಲಿರುವ ಫ್ಯಾಶನ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಮಹಾಲಕ್ಷ್ಮಿಯ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ಬೆಳೆದಿತ್ತು. ಆದರೆ, ಮಹಾಲಕ್ಷ್ಮಿ ಮತ್ತೊಬ್ಬರೊಂದಿಗೆ ಸಲುಗೆಯಿಂದ ಮಾತನಾಡುತ್ತಿರುವುದಕ್ಕೆ ಇಬ್ಬರ ನಡುವೆ ಮನಸ್ತಾಪವಾಗಿತ್ತು. ಇದೇ ವಿಚಾರ ಆಕೆಯ ಕೊಲೆಗೆ ಕಾರಣವಾಗಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಪ್ರಕರಣದ ಬಗ್ಗೆ ಮಾತನಾಡಿದ್ದ ಪರಮೇಶ್ವರ್: ಬೆಂಗಳೂರನ್ನೇ ತಲ್ಲಣಗೊಳಿಸಿರುವ ವೈಯಾಲಿಕಾವಲ್‌ನಲ್ಲಿ ನಡೆದ ಮಹಿಳೆ ಮಹಾಲಕ್ಷ್ಮೀ ಹತ್ಯೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಈಗಾಗಲೇ ಆರೋಪಿ ಒಡಿಶಾದಲ್ಲಿದ್ದಾನೆಂದು ಗುರುತಿಸಲಾಗಿದೆ. ಸ್ಥಳ ಬದಲಾಯಿಸುತ್ತಿದ್ದು ತೀವ್ರ ಶೋಧ ನಡೆದಿದೆ. ಈಗಾಗಲೇ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಹೆಚ್ಚಿನ ಸಾಕ್ಷ್ಯ ಮತ್ತು ಮಾಹಿತಿ ಆಧಾರದ ಮೇಲೆ ಒಡಿಶಾದಲ್ಲಿ ತಲೆಮರೆಸಿಕೊಂಡಿರುವ ವ್ಯಕ್ತಿಯ ಮೇಲೆ ಸಂಶಯವಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಂಗಳವಾರ ಬೆಳಗ್ಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಬೆಂಗಳೂರು ಮಹಿಳೆ ಬರ್ಬರ ಹತ್ಯೆ ಪ್ರಕರಣ: ಭೀಕರ ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ? - Woman Dead Body In Fridge