ಬೆಂಗಳೂರು: ಜಾಮೀನಿನ ಮೇಲೆ ಹೊರಬಂದಾಗ ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿ ಬೈಕ್ ಮೂಲಕ ಸಂಚರಿಸಿ ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದು, 24 ಲಕ್ಷ ರೂ ಮೌಲ್ಯದ 310 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿಯ ಕೋಳಿವಾಡದ ನಿವಾಸಿ ವಿಶ್ವನಾಥ್(34) ಬಂಧಿತ ಆರೋಪಿ. ಈತ ಕಳ್ಳತನ ಪ್ರಕರಣದಲ್ಲಿ ಈಗಾಗಲೇ ಹೈದರಾಬಾದ್ನ ಜೈಲಿನಲ್ಲಿದ್ದ. ಗಿರಿನಗರ ಪೊಲೀಸರು ಟ್ರಾನ್ಸಿಟ್ ವಾರೆಂಟ್ ಮೇರೆಗೆ ನಗರಕ್ಕೆ ಕರೆತಂದು ವಿಚಾರಣೆ ನಡೆಸಿದ್ದು, ಹಲವು ದರೋಡೆ ಪ್ರಕರಣಗಳೂ ಬೆಳಕಿಗೆ ಬಂದಿವೆ. ಹುಳಿಮಾವು, ಬ್ಯಾಟರಾಯನಪುರ, ಬಾಗಲಗುಂಟೆ, ಧಾರವಾಡದಲ್ಲಿ ಎರಡು ಪ್ರಕರಣಗಳು ಸೇರಿ ಒಟ್ಟು ಎಂಟು ಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯವಹಾರದಲ್ಲಿ ನಷ್ಟವಾಗಿದ್ದಕ್ಕೆ ಕಳ್ಳತನಕ್ಕಿಳಿದ ಆರೋಪಿ: ಆರೋಪಿ ವಿಶ್ವನಾಥ್ ಈ ಹಿಂದೆ ಲಾರಿ ಮಾಲೀಕನಾಗಿದ್ದ. ವ್ಯವಹಾರದಲ್ಲಿ ನಷ್ಟವಾಗಿದ್ದರಿಂದ ಬೆಂಗಳೂರಿಗೆ ಬಂದಿದ್ದ. ಕಳೆದ ಆಗಸ್ಟ್‌ನಲ್ಲಿ ಗಿರಿನಗರದಲ್ಲಿ ಮನೆ ಯಜಮಾನನ ಕುರಿತು ವಿಚಾರಿಸುವ ಸೋಗಿನಲ್ಲಿ ನುಗ್ಗಿ, ಮಹಿಳೆಯ ಕೊರಳಲ್ಲಿದ್ದ 40 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಗಿರಿನಗರ ಪೊಲೀಸರು ಇನ್‌ಸ್ಪೆಕ್ಟರ್ ಸತೀಶ್ ಕುಮಾರ್ ನೇತೃತ್ವದಲ್ಲಿ ತನಿಖೆಗೆ ಮುಂದಾಯಿತು. ಸಿಸಿಟಿವಿ ಆಧರಿಸಿ ತನಿಖೆ ನಡೆಸಿದಾಗ ಈತ ಕಳ್ಳತನವನ್ನೇ ಚಟ ಮಾಡಿಕೊಂಡಿದ್ದು, ಜಾಮೀನು ಮೇಲೆ ಹೊರಬಂದು ಪದೇ ಪದೇ ಈ ರೀತಿ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಮಾಹಿತಿ ನೀಡಿದ್ದಾರೆ.
ಮಾಂಗಲ್ಯ ಸರ ಕದ್ದು ದೇವಸ್ಥಾನಕ್ಕೆ ತಪ್ಪು ಕಾಣಿಕೆ ಅರ್ಪಣೆ: ಸರಗಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಆರೋಪಿ, ಆನ್‌ಲೈನ್ ಮೂಲಕ ಬೈಕ್ ಖರೀದಿಸಿದ್ದು, ಅದನ್ನು ಕೃತ್ಯಕ್ಕೆ ಬಳಸುತ್ತಿದ್ದ. ರಸ್ತೆಯಲ್ಲಿ ಸಾಗುತ್ತಿದ್ದ ಮಹಿಳೆಯರ ಚಿನ್ನಾಭರಣ ಕದಿಯುತ್ತಿದ್ದ. ಕದ್ದ ಚಿನ್ನಾಭರಣಗಳನ್ನು ಪರಿಚಯಸ್ಥರ ಮೂಲಕ ಮಾರಾಟ ಮಾಡಿ ಬಂದ ಹಣದಿಂದ ಗೋವಾಕ್ಕೆ ತೆರಳಿ ಜೂಜಾಡುತ್ತಿದ್ದ. ಮದ್ಯಪಾನ ಸೇರಿ ಇನ್ನಿತರ ದುಶ್ಚಟಗಳಿಗೂ ದಾಸನಾಗಿದ್ದ. ಕದ್ದ ಮಾಂಗಲ್ಯ ಸರದಿಂದ ತನಗೆ ಕೆಡುಕಾಗಬಹುದೆಂದು ಭಾವಿಸಿ ದೇವಸ್ಥಾನಕ್ಕೆ ತೆರಳಿ ಮಾಂಗಲ್ಯವನ್ನು ದೇವರಿಗೆ ತಪ್ಪು ಕಾಣಿಕೆ ಅರ್ಪಿಸುತ್ತಿದ್ದ.

ಈತನ ವಿರುದ್ಧ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸುಮಾರು 155ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 2018ರಲ್ಲಿ ಜ್ಞಾನಭಾರತಿ ಪೊಲೀಸರು ಈತನ ಕಾಲಿಗೆ ಗುಂಡು ಹೊಡೆದಿದ್ದರು. ನಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಸ್ನೇಹಿತನಿಗೆ ತಿಳಿಯದಂತೆ ಆತನ ಮನೆಯಲ್ಲೇ ಚಿನ್ನ ಬಚ್ಚಿಟ್ಟಿದ್ದ: ಸರಗಳ್ಳತನ ಮಾಡಿದ್ದ ಚಿನ್ನಾಭರಣವನ್ನು ಹೊಸೂರು ರಸ್ತೆಯ ಗಾರ್ವೆಭಾವಿ ಪಾಳ್ಯದಲ್ಲಿ ನೆಲೆಸಿದ್ದ ಸ್ನೇಹಿತನ ಮನೆಯಲ್ಲಿ ತಿಳಿಯದಂತೆ ಅಡಗಿಸಿಟ್ಟ. ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ತೆರಳಿ 80 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹಾಸನ: ಹಸೆಮಣೆ ಏರಬೇಕಿದ್ದ ಕಾನ್ಸ್ಟೇಬಲ್ ಭೀಕರ ಕೊಲೆ