ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಬೆಂಗಳೂರಿನ ವೈಮಾನಿಕ ಗುಪ್ತಚರ ನಿರ್ದೇಶನಾಲಯ (DRI) ಒಂದು ವಾರದ ಅಂತರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಮಲೇಷ್ಯಾ ಮತ್ತು ಶಾರ್ಜಾದಿಂದ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದು, ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ತಮಿಳುನಾಡು ಮತ್ತು ನಾಲ್ವರು ಉತ್ತರ ಭಾರತದವರನ್ನು ಬಂಧಿಸಿದ್ದಾರೆ.
ಬೆಂಗಳೂರು ಏರ್ಪೋರ್ಟ್ಗೆ ಮಲೇಷ್ಯಾದಿಂದ ಬಂದಿಳಿದ ನಾಲ್ವರು ಪ್ರಯಾಣಿಕರನ್ನು ತಪಸಾಣೆ ನಡೆಸಿದ್ದಾಗ ಒಳ ಉಡುಪಿನಲ್ಲಿ ಅಡಗಿಸಿಟ್ಟುಕೊಂಡಿದ್ದ ಪೇಸ್ಟ್ ರೂಪದ 2.632 ಕೆ.ಜಿ ಚಿನ್ನ ಪತ್ತೆಯಾಗಿತ್ತು. ಅದರ ಒಟ್ಟು ಮೌಲ್ಯ 1.42 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಜೊತೆಗೆ ಇದೇ ಪ್ರಯಾಣಿಕರಿಂದ 73.70 ಲಕ್ಷ ಮೌಲ್ಯದ 3.510 ಇ ಸಿಗರೇಟ್ ವಶಕ್ಕೆ ಪಡೆಯಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಶಾರ್ಜಾದಿಂದ ಪ್ರಯಾಣಿಕರ ಲಗೇಜ್ನಲ್ಲಿ 3.75 ಕೆಜಿ ಗಟ್ಟಿ ಚಿನ್ನ ಪತ್ತೆಯಾಗಿದ್ದು, ಇದರ ವಾರಸುದಾರರ ಪತ್ತೆ ಕಾರ್ಯ ನಡೆಯುತ್ತಿದೆ. ಕೌಲಾಲಂಪುರದಿಂದ ಬಂದಿಳಿದ ಇಬ್ಬರು ಪ್ರಯಾಣಿಕರನ್ನು ತಪಾಸಣೆ ನಡೆಸಿದ್ದಾಗ ಸಾಕ್ಸ್ನಲ್ಲಿ ಅಡಗಿಸಿಟ್ಟುಕೊಂಡಿದ್ದ 2.854 ಕೆ.ಜಿ ಚಿನ್ನ ಪತ್ತೆಯಾಗಿತ್ತು.
ರೈಲ್ವೆ ಪೊಲೀಸರಿಂದ ಕಳ್ಳತನ ಆರೋಪಿ ಬಂಧನ: ಕಳವು ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತನಿಂದ 4.87 ಲಕ್ಷ ಮೌಲ್ಯದ 45 ಗ್ರಾಂ ಬಂಗಾರದ ಆಭರಣ, 20 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.
ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದ ನಿವಾಸಿ ಕಾಳಪ್ಪ ಬಡಿಗೇರ ಬಂಧಿತ ಆರೋಪಿ. ರೈಲಿನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇನ್‌ಸ್ಪೆಕ್ಟರ್ ಸಂತೋಷ್ ಎಂ.ಪಾಟೀಲ್ ನೇತೃತ್ವದಲ್ಲಿ ಎಎಸ್‌ಐ ನಾಗರಾಜ್ ಜಿ.ಎನ್, ಹೆಡ್ ಕಾನ್ಸ್ಟೇಬಲ್ಗಳಾದ ಶ್ರೀನಿವಾಸ್ ಎಚ್, ಹನುಮಂತಪ್ಪ ಬಿ, ದಿನೇಶ್ ಸಿ.ಪಿ, ಕಾನ್ಸ್ಟೇಬಲ್ಗಳಾದ ಹಾಲೇಶ್ ಬಿ.ಎನ್, ಚೇತನ್ ಬಿ.ಎನ್, ಚೇತನ್ ಟಿ.ಆರ್ ಕಾರ್ಯಾಚರಣೆ ನಡೆಸಿದ್ದಾರೆ.
ಪ್ಲಾಸ್ಕ್ನಲ್ಲಿ ಚಿನ್ನ ಸಾಗಾಟ: ಪ್ಲಾಸ್ಕ್ನಲ್ಲಿ ಮರೆಮಾಚಿ ಚಿನ್ನ ಸಾಗಣೆ ಮಾಡುತ್ತಿದ್ದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ಜ.31 ರಂದು ಪತ್ತೆ ಹಚ್ಚಿದ್ದರು. ಸೌದಿ ಅರೇಬಿಯಾದ ಜೆಡ್ಡಾ ಏರ್ಪೋರ್ಟ್‌ನಿಂದ ಆರೋಪಿ ಆಗಮಿಸಿದ್ದನು. ಕಸ್ಟಮ್ಸ್ ಅಧಿಕಾರಿಗಳು ಅನುಮಾನಗೊಂಡು ಪರಿಶೀಲನೆ ಮಾಡಿದ್ದು, ಚಿನ್ನವನ್ನು ಪ್ಲಾಸ್ಕ್ನೊಳಗಡೆ ಪೇಸ್ಟ್ ರೂಪದಲ್ಲಿ ಅಡಗಿಸಿಟ್ಟಿರುವುದು ಬೆಳಕಿಗೆ ಬಂದಿತ್ತು. 7 ಲಕ್ಷದ 52 ಸಾವಿರ ರೂ ಮೌಲ್ಯದ 122 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿತ್ತು.
ಇದನ್ನೂ ಓದಿ : ಮೊಣಕಾಲಿನ ಕ್ಯಾಪ್ನೊಳಗೆ ಮರೆಮಾಚಿ ಚಿನ್ನ ಸಾಗಾಟ; ಸಿಕ್ಕಿಬಿದ್ದ ಪ್ರಯಾಣಿಕ