ಬೆಂಗಳೂರು: ದೀಪಾವಳಿ ಹಬ್ಬದ ಆಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಪಟಾಕಿ ವರ್ತಕರೊಂದಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸಭೆ ನಡೆಸಿದರು. ಸಭೆಯಲ್ಲಿ ಬಿಬಿಎಂಪಿ, ಬೆಸ್ಕಾಂ, ಅಗ್ನಿಶಾಮಕ ಮತ್ತು ತುರ್ತು ಸೇವೆ, ಜಿಎಸ್‌ಟಿ ಇಲಾಖೆಗಳ ಪ್ರತಿನಿಧಿಗಳು ಹಾಗೂ ಪಟಾಕಿ ವರ್ತಕರು ಭಾಗಿಯಾಗಿದ್ದರು.
ದುರಂತ ಮರುಕಳಿಸದಂತೆ ಮುನ್ನೆಚ್ಚರಿಕೆ: ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಮಾರಾಟ ಮಾಡಲು ದಾಸ್ತಾನು ಮಾಡಲಾಗಿದ್ದ ಪಟಾಕಿಗಳ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿ 17 ಮಂದಿ ಸಾವನ್ನಪ್ಪಿದ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿಬೆಲೆ ವ್ಯಾಪ್ತಿಯಲ್ಲಿ ನಡೆದಿತ್ತು. ನಗರದಲ್ಲಿ ಅಂತಹ ಯಾವುದೇ ದುರಂತ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿರುವ ಬೆಂಗಳೂರು ಪೊಲೀಸ್ ಇಲಾಖೆ, ವರ್ತಕರೊಂದಿಗೆ ಸಭೆ ನಡೆಸಿ ವಿವಿಧ ಇಲಾಖೆಗಳ ಅಹವಾಲುಗಳನ್ನು ಸ್ವೀಕರಿಸಿದೆ.
ನಕಲಿ ಪಟಾಕಿ ಮಾರಾಟಗಾರರ ವಿರುದ್ಧ ಕ್ರಮ: ''ಪಟಾಕಿ ಮಾರಾಟಗಾರರು ಪೊಲೀಸ್, ಅಗ್ನಿಶಾಮಕ, ಬಿಬಿಎಂಪಿ, ಬೆಸ್ಕಾಂ ಇಲಾಖೆಗಳಿಂದ ಅನುಮತಿ ಪಡೆದಿರಬೇಕು. ಹಾಗೂ ಆಯಾ ಇಲಾಖೆಗಳು ನಿಗದಿಪಡಿಸಿರುವ ನಿಯಮಗಳನ್ನು ಪಾಲಿಸಬೇಕು. ಅಲ್ಲದೇ, ಸುಪ್ರೀಂ ಕೋರ್ಟ್ ಆದೇಶದಂತೆ ಹಸಿರು ಪಟಾಕಿಗಳನ್ನು ಮಾತ್ರವೇ ಮಾರಾಟ ಮಾಡಬೇಕು. ನಕಲಿ ಪಟಾಕಿ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು'' ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಇದನ್ನೂ ಓದಿ: ಕೋಟ್ಯಂತರ ಭಕ್ತರ ಆರಾಧ್ಯ ದೇವತೆ ಸವದತ್ತಿಯ ಯಲ್ಲಮ್ಮ: ಗುಡ್ದದಲ್ಲಿ ಪ್ರವಾಸೋದ್ಯಮಕ್ಕೆ ಬೇಕಿದೆ ಉತ್ತೇಜನ - Savadatti Yallamma