ಬೆಂಗಳೂರು: ಅಕ್ರಮವಾಗಿ ಕಳ್ಳಸಾಗಣೆ ಮಾಡಿ ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳಲ್ಪಟ್ಟಿದ್ದ 12 ಅಪ್ರಾಪ್ತ ಬಾಲಕಿಯರನ್ನು ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಪೊಲೀಸರು ರಕ್ಷಿಸಿದ್ದಾರೆ. ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ಸರ್ಕಾರೇತರ ಸಂಸ್ಥೆಗಳ (NGO) ಸಹಯೋಗದಲ್ಲಿ ಸಿಸಿಬಿ ಪೊಲೀಸರು 11 ಕಡೆ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ 14ರಿಂದ 17 ವರ್ಷದ 12 ಬಾಲಕಿಯರನ್ನು ರಕ್ಷಿಸಿದ್ದಾರೆ.
ಇಬ್ಬರು ಸ್ಥಳೀಯ ಬಾಲಕಿಯರು, ತ್ರಿಪುರಾ, ಮಹಾರಾಷ್ಟ್ರ, ಪಂಜಾಬ್ ರಾಜ್ಯಗಳ ತಲಾ ಒಬ್ಬರು, ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಮೂಲದ ತಲಾ ಮೂವರು ಸೇರಿದಂತೆ ಒಟ್ಟು 12 ಬಾಲಕಿಯರನ್ನು ರಕ್ಷಿಸಲಾಗಿದೆ.
ಉದ್ಯೋಗ, ಶಿಕ್ಷಣ ಮತ್ತಿತರ ಆಮಿಷವೊಡ್ಡಿ ಬಾಲಕಿಯರನ್ನು ಕರೆತಂದಿರುವ ಹಾಗೂ ಕೆಲ ಸಂದರ್ಭಗಳಲ್ಲಿ ಪೋಷಕರೂ ಸಹ ಈ ದಂಧೆಗೆ ಸಹಕರಿಸಿರುವ ಸಾಧ್ಯತೆಯಿದ್ದು ತನಿಖೆ ಮುಂದುವರೆಸಲಾಗಿದೆ. ಒಟ್ಟು 26 ಮಧ್ಯವರ್ತಿಗಳು ಹಾಗೂ ಐವರು ಗಿರಾಕಿಗಳನ್ನು ಬಂಧಿಸಲಾಗಿದೆ.
ದಾಳಿ ಸಮಯದಲ್ಲಿ ರಕ್ಷಿಸಿರುವ ಅಪ್ರಾಪ್ತರನ್ನು ಸರ್ಕಾರೇತರ ಸಂಸ್ಥೆಗಳು, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಕಲ್ಯಾಣ ಇಲಾಖೆಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಮನೋ ಚಿಕಿತ್ಸೆ ಮತ್ತು ಪುನರ್ವಸತಿ ಕಲ್ಪಿಸಲಾಗಿದೆ. ವಿದೇಶಿ ಮೂಲದ ಪ್ರಜೆಯೆಂದು ದೃಢಪಟ್ಟ ಬಾಲಕಿಯರನ್ನು ಅವರ ದೇಶಗಳಿಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಡಿಜಿಟಲ್ ಅರೆಸ್ಟ್ ಭಯ ಮೂಡಿಸಿ ನಿವೃತ್ತ ಬ್ಯಾಂಕ್ ನೌಕರನ 95 ಲಕ್ಷ ರೂ. ಎಗರಿಸಿದ ಕಳ್ಳರು!