ಬಳ್ಳಾರಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಕಾಂಗ್ರೆಸ್ಗೆ ಇಪ್ಪತ್ತು ಸ್ಥಾನ ಬರುವುದು ಕಷ್ಟವಿದೆ. ಇಂಥ ಪರಿಸ್ಥಿತಿ ಇರುವಾಗ ರಾಜ್ಯದಲ್ಲಿ ಕಾಂಗ್ರೆಸ್ 20 ಸೀಟು ಗೆಲ್ಲುವುದು ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಇಪ್ಪತ್ತು ಲೋಕಸಭೆ ಸ್ಥಾನ ಗೆಲ್ಲುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು, ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಕಳೆದ ಬಾರಿ ಬೋನಸ್ ಎಂಬಂತೆ ಕಾಂಗ್ರೆಸ್ ಒಂದೆರಡು ಕ್ಷೇತ್ರಗಳನ್ನು ಗೆದ್ದಿತ್ತು. ಈ ಬಾರಿ ಅಷ್ಟೂ ಸ್ಥಾನ ಗೆಲ್ಲುವುದು ಅನುಮಾನವಿದೆ ಎಂದರು.
ರಾಜ್ಯದ ಎಲ್ಲ 28 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ. ರಾಮಮಂದಿರ ನಿರ್ಮಾಣದ ಬಳಿಕ ದೇಶದಲ್ಲಿ ರಾಮಮಯ ವಾತಾವರಣ ನಿರ್ಮಾಣವಾಗಿದೆ. ನಲವತ್ತು ವರ್ಷದ ರಾಜಕಾರಣದಲ್ಲಿ ರಾಮಮಂದಿರ ಕಟ್ಟಬೇಕೆಂದು ಒಮ್ಮೆಯೂ ಹೇಳದ ಸಿದ್ದರಾಮಯ್ಯ ಬಾಯಿಯಲ್ಲೇ ಜೈ ಶ್ರೀರಾಮ ಘೋಷಣೆ ಬಂದಿದೆ ಎಂದರೆ ಬಿಜೆಪಿ ಗೆಲ್ಲುತ್ತದೆಂದು ಕಾಂಗ್ರೆಸ್ನವರಿಗೆ ಅರಿವಾಗಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ನಾಲ್ಕು ನೂರು ಸ್ಥಾನಗಳ ಗಡಿಯನ್ನು ದಾಟಲಿದೆ ಎಂದು ಅವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಇಂಡಿಯಾ ಒಕ್ಕೂಟವು ಆರಂಭದಲ್ಲಿ ದೊಡ್ಡದಾಗಿ ಸೌಂಡ್ ಮಾಡಿತ್ತು. ಆದರೇ ಸರಣಿ ಸಭೆಗಳು ನಡೆಯುತ್ತ ಅಬ್ಬರ ಕಡಿಮೆಯಾಗಿ, ಮೂರನೇ ಸಭೆಯ ಸಂದರ್ಭದಲ್ಲಿ ಇಂಡಿಯಾ ಒಕ್ಕೂಟ ಮಕಾಡೆ ಮಲಗಿದೆ. ಈಗ ಇಂಡಿಯಾ ಒಕ್ಕೂಟ ‘ಢಮಾರ್’ ಎಂದಿದೆ ಎಂದು ಸಿ.ಟಿ ರವಿ ವ್ಯಂಗ್ಯವಾಡಿದರು.
ಕೆರಗೋಡು ಹನುಮಧ್ವಜ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಮಂಡ್ಯದಲ್ಲಿ ಮಹಾ ಅಪರಾಧವಾಗಿದೆ. ಕಾಂಗ್ರೆಸ್ ಓಲೈಕೆ ರಾಜಕೀಯ ಮಾಡುತ್ತಿದೆ. ರಾಷ್ಟ್ರಧ್ವಜ ಹಾರಿಸಲು ಬೇಡ ಅಂದವರಾರು? ಹನುಮ ಧ್ವಜ ಇಳಿಸಿ ಹಾರಿಸಬೇಕಿತ್ತೆ ? ಅದಕ್ಕಿಂತ ದೊಡ್ಡ ಸ್ತಂಭದ ಮೇಲೆ ಎತ್ತರದಲ್ಲಿ ರಾಷ್ಟ್ರದ ಧ್ವಜ ಹಾರಿಸಬೇಕಿತ್ತು ಎಂದು ತಿಳಿಸಿದರು.
ಕಾಂಗ್ರೆಸ್ನಿಂದ ಟೂಲ್ ಕಿಟ್ ರಾಜಕೀಯ: ಕೆರಗೋಡು ಗ್ರಾಮದಿಂದ ಮಂಡ್ಯದವರೆಗೆ ಜೆಡಿಎಸ್-ಬಿಜೆಪಿ ಆಯೋಜಿಸಿದ್ದ ಪಾದಯಾತ್ರೆ ವೇಳೆ ಜಿಲ್ಲಾ ಕುರುಬರ ಸಂಘದ ಸಾರ್ವಜನಿಕ ವಿದ್ಯಾರ್ಥಿನಿಲಯದ ಕಟ್ಟಡದ ಮೇಲೆ ಯಾರೂ ದಾಳಿ ಮಾಡಿಲ್ಲ. ಹಾಸ್ಟೆಲ್ ಮುಂದೆ ಇರುವ ಕಾಂಗ್ರೆಸ್ ನಾಯಕರ ಪ್ಲೆಕ್ಸ್ ಹರಿದಿದ್ದಾರೆ. ಕಾಂಗ್ರೆಸ್ ಟೂಲ್ ಕಿಟ್ ರಾಜಕೀಯ ಮಾಡುತ್ತಿದೆ. ಸುಳ್ಳು ಸುದ್ದಿ ಹಬ್ಬಿಸುತ್ತಿದೆ' ಎಂದು ಆರೋಪಿಸಿದರು.
ಕುರುಬರು ಹಿಂದೂಗಳೇ, ಸಂಗೊಳ್ಳಿ ರಾಯಣ್ಣ ಯಾರು? ಕನಕದಾಸರು ಸನಾತನ ಪರಂಪರೆ ಎತ್ತಿ ಹಿಡಿದಿದ್ದಾರೆ. ಕುರುಬರು ಹನುಮ ಭಕ್ತರು, ಕುರುಬರನ್ನು ಎತ್ತಿ ಕಟ್ಟುವ ಟೂಲ್ ಕಿಟ್ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು. ಜನಾರ್ದನ ರೆಡ್ಡಿ ಬಿಜೆಪಿಗೆ ಸೇರುವ ವಿಚಾರವನ್ನು ಕಾಲವೇ ನಿರ್ಧಾರ ಮಾಡುತ್ತದೆ. ಲಕ್ಷಣ ಸವದಿ ಸೇರಿದಂತೆ ಯಾರೇ ಬರಲಿ, ಅಧಿಕಾರದ ಆಸೆ ಇಲ್ಲದೇ ದೇಶ ಮುಖ್ಯ ಎನ್ನುವವರು ಬಿಜೆಪಿಗೆ ಬನ್ನಿ ಎಂದು ಆಹ್ವಾನ ನೀಡಿದರು.
ಇದನ್ನೂಓದಿ:ಇಷ್ಟೊಂದು ಕಳಪೆ ಕೇಂದ್ರ ಬಜೆಟ್ನ್ನು ಯಾವತ್ತೂ ನೋಡಿಲ್ಲ, ರಾಜ್ಯಕ್ಕೂ ಅನ್ಯಾಯವಾಗಿದೆ: ಡಿ ಕೆ ಶಿವಕುಮಾರ್