ಬಳ್ಳಾರಿ: ಅದು 1874ನೇಯ ಇಸವಿ. ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಭಾಗಿಯಾಗಿದ್ದ ಈ ದೇಶದ ಅಗ್ರಗಣ್ಯ ಹೋರಾಟಗಾರರನ್ನೇ ಹಿಡಿದಿಟ್ಟುಕೊಳ್ಳುವುದೇ ಬ್ರಿಟಿಷರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆಗ ಮದ್ರಾಸ್ ಪ್ರಾಂತ್ಯದ ನಾಲ್ಕು ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟಗಾರರಿಗೆ ಗಣಿನಾಡಿನ ಮೂರು ಜೈಲುಗಳೇ ಪ್ರಮುಖ ಆಸರೆಯಾಗಿದ್ದವು.
ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಸಂದರ್ಭ ಕ್ಷಯರೋಗ ಕಾಯಿಲೆಯ ಭೀತಿ ಎದುರಾಗಿತ್ತು. ಅದನ್ನು ನಿಯಂತ್ರಿಸುವ ಸಲುವಾಗಿಯೇ ಬಳ್ಳಾರಿಯ ಟಿಬಿ ಸ್ಯಾನಿಟೋರಿಯಂ ಪ್ರದೇಶ ವ್ಯಾಪ್ತಿಯಲ್ಲಿ ಪ್ರತ್ಯೇಕ 'ವೆಲ್ಲೆಸ್ಲಿ' ಜೈಲನ್ನು ಅಂದಿನ ಬ್ರಿಟಿಷ್ ಸರ್ಕಾರವು ಪ್ರಾರಂಭಿಸಿತ್ತು. ಕ್ಷಯರೋಗಕ್ಕೆ ತುತ್ತಾಗಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ, ಅಗತ್ಯ ಚಿಕಿತ್ಸೆಯನ್ನು ಕೊಡಿಸಿರುವ ನೆನಪು ಇಂದಿಗೂ ಜೀವಂತವಾಗಿದೆ.
ಅಂದಿನ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಗಣಿ ಜಿಲ್ಲೆ ಬಳ್ಳಾರಿಗರ ಪಾತ್ರವು ಬಹುಮುಖ್ಯವಾಗಿದೆ. 1874ರಲ್ಲಿ ಮೊದಲಿಗೆ ಸೆಂಟ್ರಲ್ ಜೈಲನ್ನು ಪ್ರಾರಂಭಿಸಲಾಯಿತು. ಆ ಬಳಿಕ, ಅಲ್ಲೀಪುರದ ಕಂಟೋನ್ಮಂಟ್ ಪ್ರದೇಶದಲ್ಲೊಂದು ಜೈಲು, ಕ್ಷಯ ರೋಗಿಗಳಿಗೋಸ್ಕರವೇ ಟಿಬಿ ಸ್ಯಾನಿಟೋರಿಯಂ ಪ್ರದೇಶದಲ್ಲಿ ಮತ್ತೊಂದು ಜೈಲನ್ನು ಪ್ರಾರಂಭಿಸಲಾಗಿತ್ತು. ಮದ್ರಾಸ್ ಪ್ರಾಂತ್ಯದ ಕಡಪ, ಕರ್ನೂಲ್, ಅನಂತಪುರ ಹಾಗೂ ಬಳ್ಳಾರಿ ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟಗಾರರನ್ನು ಈ ಮೂರು ಜೈಲುಗಳಲ್ಲಿ ಇರಿಸಲಾಗಿತ್ತು ಎನ್ನುವುದು ಇತಿಹಾಸದಿಂದ ತಿಳಿದು ಬರುತ್ತದೆ.
ಇಲ್ಲಿನ ಜೈಲುಗಳು ಮೊದಲು ಮಾಪಳ ದಂಗೆಕೋರರ ನೆಲೆಯಾಗಿತ್ತು. ದಕ್ಷಿಣ ಭಾರತದ ಅಗ್ರಗಣ್ಯರ ಸ್ಥಳವಾಗಿ ಬಳ್ಳಾರಿ ಜೈಲುಗಳು ಮಾರ್ಪಟ್ಟಿರುವುದು ಬಹುಮುಖ್ಯವಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಭಾಗಿಯಾಗಿದ್ದವರನ್ನು ಬಳ್ಳಾರಿ ಜೈಲಿಗೆ ಕರೆತಂದ ಸಂದರ್ಭ ಆ ಹೋರಾಟಗಾರರಲ್ಲಿ ಭಾಷಾಬಾಂಧವ್ಯ ಬೆಳೆಸೋದರ ಜೊತೆಜೊತೆಗೆ ಯುವಜನರಿಗೆ ಸ್ಫೂರ್ತಿದಾಯಕವೂ ಆಗಿತ್ತು ಎಂದು ಇತಿಹಾಸದ ಮೂಲಕ ತಿಳಿದುಬಂದಿದೆ.
ಸ್ವಾತಂತ್ರ್ಯ ಹೋರಾಟಗಾರರು ಇದ್ದ ಪುರಾತನ ಜೈಲಿಗೆ ದರ್ಶನ್ ಶಿಫ್ಟ್ ಆಗಲಿದ್ದಾರೆ. ಭದ್ರತೆ ದೃಷ್ಟಿಯಿಂದ ಇದು ಸೂಕ್ತವಾದ ಜೈಲು. ರಾಜ್ಯದ ಬಹುತೇಕ ಕ್ರಿಮಿನಲ್ಗಳು ಇರುವ ಜೈಲು ಅಂದ್ರೆ ಅದು ಬಳ್ಳಾರಿ ಕೇಂದ್ರ ಕಾರಾಗೃಹ.
ಆರೋಪಿ ಬಚ್ಚಾಖಾನ್ ಕೂಡ ಬಳ್ಳಾರಿ ಜೈಲಿನಲ್ಲಿ ಇರೋದು. ಸದ್ಯ ಈಗ ಪೆರೋಲ್ ಮೇಲೆ ಹೊರಗಡೆ ಹೋಗಿದ್ದಾರೆ. ಒಟ್ಟು ಜೈಲಿನಲ್ಲಿ 761 ಕೈದಿಗಳನ್ನು ಇಡಬಹುದು. ಸದ್ಯ 361 ಕೈದಿಗಳಿದ್ದಾರೆ. ಈಗ ಬಳ್ಳಾರಿ ಜೈಲು ಅಂದ್ರೆ ಪನಿಶ್ಮೆಂಟ್ ಜೈಲು ಅಂತಾ ಅಪಖ್ಯಾತಿ ಹೊಂದಿದೆ.
ಬಳ್ಳಾರಿ ಜೈಲಿಗೆ ದರ್ಶನ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಅವರ ಸಹಚರರನ್ನು ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲಾಗಿದೆ. ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳನ್ನ ರಾಜ್ಯದ ವಿವಿಧ ಕಾರಾಗೃಹಗಳಿಗೆ ಸ್ಥಳಾಂತರ ಮಾಡಬೇಕೆಂದು ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕರು ನಗರದ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿರುವ ನ್ಯಾಯಾಲಯ ಆರೋಪಿಗಳ ಸ್ಥಳಾಂತರ ಮಾಡಲು ಅನುಮತಿ ನೀಡಿದೆ. ಸದ್ಯದರಲ್ಲೇ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ನಟ ದರ್ಶನ್ ಅವರನ್ನು ಶಿಫ್ಟ್ ಮಾಡಲಾಗುವುದು ಎಂದು ತಿಳಿದುಬಂದಿದೆ.
ಓದಿ: ದರ್ಶನ್ ಮತ್ತು ಸಹಚರರು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರ; ದಾಸ ಬಳ್ಳಾರಿ ಜೈಲಿಗೆ - DARSHAN JAIL SHIFT