ಚಾಮರಾಜನಗರ: ನಗರ ಪ್ರದೇಶಗಳಲ್ಲಿ ಮಾತ್ರ ಬಿಯರ್ ಸೇವನೆ ಹೆಚ್ಚು ಎಂಬುದು ಈಗ ಬದಲಾಗಿದೆ. ಚಾಮರಾಜನಗರದ ಗುಂಡುಪ್ರಿಯರು ಈಗ ಮದ್ಯದಿಂದ ಬಿಯರ್ ನತ್ತ ಮುಖಮಾಡಿದ್ದಂತೆ ಕಾಣುತ್ತಿದೆ. ಹೌದು, ಅಬಕಾರಿ ಇಲಾಖೆ ಕೊಟ್ಟಿರುವ ಅಂಕಿ - ಅಂಶದ ಪ್ರಕಾರ 2023 ಡಿಸೆಂಬರ್ ಹಾಗೂ ಕಳೆದ ಜನವರಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಬಿಯರ್ ಮಾರಾಟಗೊಂಡ ಜಿಲ್ಲೆಗಳಲ್ಲಿ ಚಾಮರಾಜನಗರ ಎರಡನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನ ತುಮಕೂರು ಆಗಿದೆ.
ಬೇಸಿಗೆ ಸಂದರ್ಭದಲ್ಲಿ ಮಾತ್ರ ಬಿಯರ್ ಮಾರಾಟ ಚೇತರಿಕೆ ಕಾಣುತ್ತಿದ್ದ ಚಾಮರಾಜನಗರದಲ್ಲಿ ಈಗ ಬಿಯರ್ ಮಾರಾಟವೇ ಅಧಿಕವಾಗಿದ್ದು, ಭಾರತೀಯ ಮದ್ಯಕ್ಕೆ ಹೋಲಿಸಿದರೇ ಬಿಯರ್ ಮಾರಾಟ ವೇಗ ಪಡೆದುಕೊಂಡಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ, ಕೊಳ್ಳೇಗಾಲ ಎಂಬ ಒಟ್ಟು 4 ವಲಯಗಳಿದ್ದು 2022-23 ರಲ್ಲಿ 2,63,756 ಲಕ್ಷ ಕೇಸ್ ಬಿಯರ್ ಮಾರಾಟವಾಗಿತ್ತು. 2023-24 ರಲ್ಲಿ ಇದು 3,42,414 ಕೇಸ್ ಮಾರಾಟವಾಗಿದ್ದು ಶೇ.30 ರಷ್ಟು ಬಿಯರ್ ಸೇಲ್ ಅಧಿಕವಾಗಿದೆ. ಅಂದರೆ, 78,658 ಲಕ್ಷ ಕೇಸ್ ಹೆಚ್ಚು ಮಾರಾಟಗೊಂಡಿದೆ.
ಕಾರಣವೇನು? : ಚಾಮರಾಜನಗರದಲ್ಲಿ ಹೆಚ್ಚು ಕೂಲಿ ಹಾಗೂ ಕೆಳ ಮಧ್ಯಮ ವರ್ಗದ ಜನರೇ ಹೆಚ್ಚು ಮದ್ಯ ಸೇವನೆ ಮಾಡುತ್ತಾರೆ. ಆದರೆ ಅವರ ಬಳಿ ಮದ್ಯ ಕೊಳ್ಳುವ ಶಕ್ತಿ ಕಡಿಮೆ ಆಗಿರುತ್ತದೆ. ಈ ಹಿನ್ನೆಲೆ ಮದ್ಯಕ್ಕೆ ಹೋಲಿಸಿದರೇ ಬಿಯರ್ ಬೆಲೆ ಕಡಿಮೆ ಇದೆ. ಹೀಗಾಗಿ ಮದ್ಯ ಪ್ರಿಯರು ಬಿಯರ್ ಮತ್ತು ಸ್ವಲ್ಪ ಅಗ್ಗದ ಮದ್ಯವನ್ನು ಸೇವಿಸುವ ಪ್ರವೃತ್ತಿ ಬೆಳಸಿಕೊಂಡಿದ್ದಾರೆ. ಆದ್ದರಿಂದ ಬಿಯರ್ ಮಾರಾಟ ಹೆಚ್ಚಾಗಿರಬಹುದು ಎಂದು ಚಾಮರಾಜನಗರ ಅಬಕಾರಿ ಡಿಸಿ ನಾಗಶಯನ ಹೇಳಿದ್ದಾರೆ. ಇನ್ನು ನಿರೀಕ್ಷಿತ ಆದಾಯವು ಏರಿಕೆ ಕಂಡಿರುವುದಾಗಿ ಆಯುಕ್ತರು ಮಾಹಿತಿ ಕೊಟ್ಟಿದ್ದಾರೆ.
ಓದಿ: ಭೂ ವಿಜ್ಞಾನಿ ಪ್ರತಿಮಾ ಹತ್ಯೆ ಪ್ರಕರಣ: 600 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು