ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಆರಂಭವಾಗುತ್ತಲೇ ಅಲ್ಲಿನ ಸೊಬಗು, ಸೌಂದರ್ಯ ಇಮ್ಮಡಿಯಾಗುತ್ತದೆ. ರಸ್ತೆ ಪಕ್ಕದ ಹಸಿರು ಗುಡ್ಡ-ಬೆಟ್ಟ ಎಲ್ಲೆಂದರಲ್ಲಿ ಝರಿ, ಜಲಪಾತಗಳು ಸೃಷ್ಟಿಯಾಗುತ್ತವೆ. ಅಪರೂಪದ ದೃಶ್ಯಗಳನ್ನು ನೋಡುತ್ತ, ದಟ್ಟ ಮಂಜು, ಚುಮು ಚುಮು ಚಳಿಯಲ್ಲಿ ಅಂಕುಡೊಂಕಾದ ರಸ್ತೆಯಲ್ಲಿ ಪ್ರಯಾಣ ಮಾಡುವ ಅನುಭವವೇ ಬೇರೆ. ಇದೀಗ ಅಂತಹ ಜಲವೈಭವ ಚಾರ್ಮಾಡಿ ಘಾಟ್ನಲ್ಲಿ ಮೈದಳೆದಿದ್ದು, ಪ್ರವಾಸಿಗರು, ವಾಹನ ಸವಾರರನ್ನು ತನ್ನತ್ತ ಸೆಳೆಯುತ್ತಿವೆ.
ಕಳೆದ ಒಂದು ವಾರದಿಂದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಹಾಗೂ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಜೋರಾಗಿದ್ದು, ಚಾರ್ಮಾಡಿ ಘಾಟ್ನಲ್ಲಿ ಜಲಪಾತಗಳು ಆರ್ಭಟಿಸುತ್ತಿವೆ. ನಿತ್ಯ ಹರಿದ್ವರ್ಣ ಅರಣ್ಯದಲ್ಲಿ ಪ್ರಕೃತಿಯ ಕ್ಷೀರಾಭಿಷೇಕ ಹಾಗೂ ಅದ್ಭುತ ದೃಶ್ಯಗಳನ್ನು ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಘಾಟಿಯ 22 ಕಿ.ಮೀ. ವ್ಯಾಪ್ತಿಯ ರಸ್ತೆಯಲ್ಲಿ ನೂರಾರು ಝರಿ, ಜಲಪಾತಗಳು ಮೈದಳೆದಿವೆ.
ಜಲಪಾತಗಳ ಸಮೀಪದಲ್ಲಿ ಜಿಲ್ಲಾಡಳಿತವು ಪೊಲೀಸರ ಕಾವಲು ಹಾಕಿದ್ದು, ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್ ಹಾಕುವ ಯತ್ನ ನಡೆದಿದೆ. ಹೀಗಾಗಿ, ಜನರು ರಸ್ತೆಯಲ್ಲಿಯೇ ನಿಂತು ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ವರುಣನ ಆರ್ಭಟ, ಇಂದು-ನಾಳೆ ರೆಡ್ ಅಲರ್ಟ್: ದಕ್ಷಿಣ ಕನ್ನಡದಲ್ಲಿ ಶಾಲೆ, ಪಿಯು ಕಾಲೇಜುಗಳಿಗೆ ರಜೆ - SCHOOL COLLEGE HOLIDAY
ಧಾರಾಕಾರ ಮಳೆಗೆ ಹಾರಿ ಹೋದ ಮೇಲ್ಛಾವಣಿ ಶೀಟ್: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಶನಿವಾರವೂ ಮಳೆ ಆರ್ಭಟ ಮುಂದುವರೆದಿದೆ. ಗಾಳಿ - ಮಳೆಯಿಂದ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನೆಲ್ಯಪಲ್ಕೆ ಎಂಬಲ್ಲಿ ಯುನೂಸ್ ಹಾಗೂ ಅಬ್ದುಲ್ ಖಾದರ್ ಎಂಬವರ ಮನೆಗಳಿಗೆ ಭಾಗಶಃ ಹಾನಿ ಆಗಿದೆ. ಬಿರುಗಾಳಿಯ ಪರಿಣಾಮ ಅಂಗಡಿ ಮುಂಗಟ್ಟುಗಳ ಮೇಲ್ಛಾವಣಿಯ ಶೀಟ್ಗಳು ಹಾರಿ ಹೋಗಿವೆ. ಗಾಳಿಯಿಂದ ಖಾದರ್ ಇಕ್ರಾ ಅವರಿಗೆ ಸೇರಿದ ಕಾಂಪ್ಲೆಕ್ಸ್ನ ಮುಂಭಾಗದಲ್ಲಿ ಅಳವಡಿಸಿದ್ದ ಶೀಟ್ಗಳು ಹಾರಿ ಹೋಗಿದ್ದು, ಅದರ ವಿಡಿಯೋ ದೃಶ್ಯಗಳು ಸೆರೆಯಾಗಿವೆ. ಘಟನೆಯಲ್ಲಿ ಯಾವುದೇ ರೀತಿಯ ಜೀವ ಹಾನಿ ಉಂಟಾಗಿಲ್ಲ.
ವೀರಕಂಭ ಗ್ರಾಮದ ಬಾಯಿಲ ಎಂಬಲ್ಲಿ ಕಲ್ಯಾಣಿ ಎಂಬವರ ಮನೆ ಗೋಡೆ ಕುಸಿದು ಬಿದ್ದು ಹಾನಿಯಾಗಿದ್ದು, ಕುರಿಯಾಳ ಗ್ರಾಮದ ಕುರಿಯಾಳ ಪಡು ಎಂಬಲ್ಲಿ ಉಗ್ಗಪ್ಪ ಪೂಜಾರಿ ಅವರ ಮನೆಯ ಪಕ್ಕದ ಕೊಟ್ಟಿಗೆಗೆ ಹಾನಿ ಸಂಭವಿಸಿದೆ. ಪೆರ್ನೆಯ ಸೀತಾ ನಾಯ್ಕ ಅವರ ಮನೆಗೆ ತಾಗಿಕೊಂಡಿರುವ ಕೊಟ್ಟಿಗೆಗೆ ಮರ ಬಿದ್ದು ಹಾನಿಯಾಗಿದೆ. ಕೊಳ್ನಾಡು ಗ್ರಾಮದ ಮಜಲು ಎಂಬಲ್ಲಿ ರಾಮಣ್ಣ ನಾಯಕ್ ಮನೆಗೆ ಮರ ಬಿದ್ದು ಭಾಗಶಃ ಹಾನಿ ಹಾಗೂ ಇರ್ವತ್ತೂರು ಗ್ರಾಮದ ನವೀನ್ ಮೂಲ್ಯ ಎಂಬವರ ದನದ ಹಟ್ಟಿಗೆ ಹಾನಿ ಉಂಟಾಗಿದೆ.
ಇದನ್ನೂ ಓದಿ: ರಾಜ್ಯದಲ್ಲೇ ಚಾರ್ಮಾಡಿ, ಕೊಟ್ಟಿಗೆಹಾರದಲ್ಲಿ ಅತೀ ಹೆಚ್ಚು ಮಳೆ ದಾಖಲು - Mudigere Heavy Rain