ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಸ್ತಿ ತೆರಿಗೆ ಪಾವತಿಸುವ ವೆಬ್‌ಸೈಟ್ ಲಿಂಕ್ ಸ್ಥಗಿತಗೊಂಡಿದ್ದು, ಆಸ್ತಿ ಮಾಲೀಕರು ತೆರಿಗೆ ಪಾವತಿಸಲು ಪರದಾಡುತ್ತಿದ್ದಾರೆ. ವೆಬ್‌ಸೈಟ್ ಲಿಂಕ್ ಸ್ಥಗಿತಗೊಳ್ಳಲು ತಾಂತ್ರಿಕ ಸಮಸ್ಯೆಯಿದ್ದರೂ ಕೂಡಾ ಬಿಡಿಎ ಇದುವರೆಗೂ ಗ್ರಾಹಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಇದರಿಂದಾಗಿ ತೆರಿಗೆ ಪಾವತಿಗಾಗಿ ಬಿಡಿಎ, ಬೆಂಗಳೂರು ಒನ್ ಕಚೇರಿಗಳಿಗೆ ನಿತ್ಯ ಅಲೆದಾಡುವಂತಾಗಿದೆ.
ವೆಬ್‌ಸೈಟ್‌ನಲ್ಲಿರುವ ಸಮಸ್ಯೆ ಇದು: ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿಯೇ ವಾರ್ಷಿಕ ತೆರಿಗೆಯನ್ನು ಪಾವತಿಸಲು ದಿನಾಂಕ ನಿಗದಿಯಾಗಿರುತ್ತದೆ. ಆದರೆ ನವೀಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ನಿಮ್ಮ ಆಸ್ತಿ ತೆರಿಗೆಯನ್ನು ಸುಲಭ ಮತ್ತು ಸುರಕ್ಷಿತವಾಗಿ ಆನ್‌ಲೈನ್‌ನಲ್ಲಿ ಪಾವತಿಸಿ ಎಂಬ ಅಕ್ಷರದ ಸಾಲುಗಳ ಕೆಳಗಡೆ 'ಆಸ್ತಿ ತೆರಿಗೆ ಪಾವತಿ' ಎಂಬ ಬಟನ್ ವೆಬ್‌ಸೈಟ್‌ನ ಮುಖಪುಟದಲ್ಲಿ ತೋರಿಸುತ್ತಿದೆ. ಅದರ ಮೇಲೆ ಕ್ಲಿಕ್ ಮಾಡಿದರೆ, ಯಾವುದೇ ಮಾಹಿತಿ ಸಿಗುತ್ತಿಲ್ಲ. ಬದಲಿಗೆ ಮರಳಿ ಮುಖಪುಟದತ್ತ ಪೇಜ್ ಹೋಗುತ್ತದೆ.
ಆಸ್ತಿ ಮಾಲೀಕರ ಅಳಲೇನು?: ಆಸ್ತಿ ತೆರಿಗೆ ಪಾವತಿಗೆ ಈಗಾಗಲೇ ತಡವಾಗಿದೆ. ದರ ಎಷ್ಟು ಎಂಬುದು ಗೊತ್ತಿಲ್ಲ. ಯಾವಾಗ ಕಟ್ಟಬೇಕು ಎಂಬ ಬಗ್ಗೆೆ ಮಾಹಿತಿಯೂ ಇಲ್ಲ. ಒಟ್ಟಿಗೆ ಪಾವತಿಸಬೇಕೆಂದರೆ ಹೊರೆಯಾಗುತ್ತದೆ. ಬಿಡಿಎ ವೆಬ್‌ಸೈಟ್ ತಾಂತ್ರಿಕ ಸಮಸ್ಯೆೆಯಿಂದ ತಡವಾದರೆ ಅದಕ್ಕೆ ಹೆಚ್ಚುವರಿ ಶುಲ್ಕವನ್ನು ಕೂಡ ನಾವೇ ಭರಿಸಬೇಕಾಗುತ್ತದೆ ಎಂದು ಹಲವರು ಅಳಲು ತೋಡಿಕೊಂಡಿದ್ದಾರೆ.
ಬಿಡಿಎ ಅಧಿಕಾರಿಗಳ ಪ್ರತಿಕ್ರಿಯೆ ಹೀಗಿದೆ: ಈ ಹಿಂದೆ ಕಿಯೋನಿಕ್ಸ್ ಕಡೆಯಿಂದ ವೆಬ್‌ಸೈಟ್ ಮತ್ತು ಅದರ ಲಿಂಕ್ ಸಿದ್ಧಪಡಿಸಲಾಗಿತ್ತು. ಆದರೆ ಕಿಯೋನಿಕ್ಸ್ಗೆ 4ಜಿಯಲ್ಲಿ ವಿನಾಯಿತಿ ಇಲ್ಲದ ಹಿನ್ನೆೆಲೆಯಲ್ಲಿ ಈ ಬಾರಿ ಇ-ಗವರ್ನನ್ಸ್ ಕಡೆಯಿಂದ ವೆಬ್‌ಸೈಟ್ ಅಪ್ಡೇಟ್ ತಯಾರಾಗುತ್ತಿದೆ. ಹೀಗಾಗಿ ತಾಂತ್ರಿಕ ಸಮಸ್ಯೆೆಯಾಗಿದೆ. ಆದ್ದರಿಂದ ತೆರಿಗೆ ಪಾವತಿಗೆ ವೆಬ್ ಲಿಂಕ್ ಬಿಟ್ಟಿಲ್ಲ. ಕೆಲವೇ ದಿನಗಳಲ್ಲಿ ತಯಾರಾಗುತ್ತದೆ. ನಂತರ ಆನ್‌ಲೈನ್ ತೆರಿಗೆಗೆ ಅವಕಾಶ ನೀಡಲಾಗುವುದು. ತಾಂತ್ರಿಕ ಸಮಸ್ಯೆೆ ನಿವಾರಣೆಗೆ ಎಲ್ಲ ರೀತಿಯಲ್ಲೂ ಪ್ರಾಧಿಕಾರ ಕ್ರಮ ಕೈಗೊಂಡಿದೆ ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ದಾವಣಗೆರೆಯ ಕಂದನಕೋವಿಯಲ್ಲಿ ಕುಡಿವ ನೀರಿಗೆ ತತ್ವಾರ, ಯುವಕರಿಗೆ ಹೆಣ್ಣು ಕೊಡಲು ಹಿಂದೇಟು: ಆರೋಪ - drink water problem