ಬೆಂಗಳೂರು: ಬಿಬಿಎಂಪಿಯಲ್ಲಿ ದಾಖಲಾಗಿರುವ ಎಲ್ಲಾ ಎ ಖಾತಾ ಮತ್ತು ಬಿ ಖಾತಾ ಎರಡನ್ನೂ ಡಿಜಿಟಲೀಕರಣ ಮಾಡಲಾಗಿದ್ದು, 21 ಲಕ್ಷಕ್ಕೂ ಹೆಚ್ಚು ಕರಡು ಇ-ಖಾತಾಗಳನ್ನು ಯಾರಾದರೂ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಆನ್‌ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಬಿಬಿಎಂಪಿ, ಕರಡು ಇ-ಖಾತಾ ಅನ್ನು ಪಾಲಿಕೆಯ ವೆಬ್‌ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಬಿಬಿಎಂಪಿ ನಾಗರಿಕರು ತಮ್ಮ ಅಂತಿಮ ಇ-ಖಾತಾವನ್ನು ಪಡೆಯಲು ಬಿಬಿಎಂಪಿಯಲ್ಲಿ ಯಾರನ್ನೂ ಭೇಟಿ ಮಾಡುವ ಅವಶ್ಯಕತೆ ಇರುವುದಿಲ್ಲ. ಇದು ಸಂಪೂರ್ಣವಾಗಿ ಆನ್‌ಲೈನ್ ವ್ಯವಸ್ಥೆಯಾಗಿದ್ದು, ಸಂಪೂರ್ಣ ಸಂಪರ್ಕರಹಿತವಾಗಿದೆ. ಅಂತಿಮ ಇ-ಖಾತಾ ಪಡೆಯಲು ನಾಗರಿಕರು ಆನ್‌ಲೈನ್‌ನಲ್ಲಿ ಕೆಲವು ದಾಖಲೆಗಳನ್ನು ಒದಗಿಸಬೇಕಾಗಿದೆ ಎಂದು ತಿಳಿಸಿದೆ.
ಇ-ಆಸ್ತಿ ತಂತ್ರಾಂಶವು ವಿದ್ಯುನ್ಮಾನವಾಗಿ ಕಾವೇರಿಯಿಂದ ಪಡೆಯುವ ಕ್ರಯ ಪತ್ರ ಅಥವಾ ನೋಂದಾಯಿತ ಪತ್ರದ ಸಂಖ್ಯೆ ಹೊಂದಿರಬೇಕು. 2004ರ ಏಪ್ರಿಲ್ನಿಂದ ಇಲ್ಲಿಯವರೆಗಿನ ಸ್ವತ್ತಿನ ಋಣಭಾರ ಪ್ರಮಾಣ ಪತ್ರ ಹಾಗೂ ಅದರ ಪ್ರಮಾಣ ಪತ್ರ ಸಂಖ್ಯೆಯನ್ನು ಮಾತ್ರ ನಮೂದಿಸಬೇಕು ಎಂದು ಹೇಳಿದೆ.
ನಮೂದಿಸಿದ ಮಾಹಿತಿಯು ಅಪೂರ್ಣವಾಗಿದ್ದರೆ ಅಥವಾ ಬಿಬಿಎಂಪಿ ದಾಖಲೆಗಳೊಂದಿಗೆ ಹೊಂದಿಕೆಯಾಗದಿದ್ದರೆ ಅಂತಿಮ ಇ-ಖಾತಾವನ್ನು ನೀಡದಿರಲು ಯಾರಾದರೂ ಆಕ್ಷೇಪಣೆ ಸಲ್ಲಿಸಿದ್ದರೆ ಮಾತ್ರ ನಾಗರಿಕರು ಬಿಬಿಎಂಪಿಗೆ ಭೇಟಿ ನೀಡಬೇಕಾಗುತ್ತದೆ. ಇದು ಅತ್ಯಂತ ಪಾರದರ್ಶಕ ಮತ್ತು ನಾಗರಿಕ ನಿಯಂತ್ರಣದಲ್ಲಿರುವ ಇ-ಖಾತಾ ವ್ಯವಸ್ಥೆಯಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಎಲ್ಲಾ ವಿವರಗಳನ್ನು ವಿದ್ಯುನ್ಮಾನವಾಗಿ ಒದಗಿಸಿದ ನಂತರ, ತಂತ್ರಾಂಶವು ಸ್ವತಃ ಎಲ್ಲಾ ದಾಖಲೆಗಳನ್ನು ಪರಿಶೀಲಿಸುತ್ತದೆ ಮತ್ತು ಸ್ವಯಂಚಾಲಿತವಾಗಿ ಅಂತಿಮ ಇ-ಖಾತಾವನ್ನು ನೀಡುತ್ತದೆ. ಅಂತಿಮ ಇ-ಖಾತಾ ಪಡೆಯಲು ಬಿಬಿಎಂಪಿಯಲ್ಲಿ ಯಾರನ್ನೂ ಭೇಟಿ ಮಾಡುವ ಅಗತ್ಯವಿಲ್ಲ. ಈ ಸಂಬಂಧ ತರಬೇತಿ ವಿಡಿಯೋಗಳನ್ನು ಬಿಡುಗಡೆ ಮಾಡಲಾಗುವುದು ಹಾಗೂ ಸಂಬಂಧಿಸಿದ ಲಿಂಕ್ ಅನ್ನು ಬಿಬಿಎಂಪಿ ಹಂಚಿಕೊಳ್ಳಲಾಗುತ್ತದೆ ಎಂದು ಪಾಲಿಕೆ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರು: ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು - Pavement Encroachment Clearance