ಬಂಟ್ವಾಳ(ದಕ್ಷಿಣ ಕನ್ನಡ): ಖೋಟಾ ನೋಟು ವಿನಿಮಯ ನಡೆಸುವ ಜಾಲವೊಂದನ್ನು ಬಂಟ್ವಾಳ ನಗರ ಪೊಲೀಸರು ಪತ್ತೆ ಹಚ್ಚಿದ್ದು, ಈ ಪ್ರಕರಣದಡಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊಹಮ್ಮದ್ ಸಿ.ಎ (61) ಮಹಿಳೆ ಕಮರುನ್ನೀಸಾ (41) ಎಂಬುವರು ಬಂಧಿತ ಆರೋಪಿಗಳು. ಬಂಧಿತರಿಂದ 500 ರೂ ಮುಖಬೆಲೆಯ 46 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಆರೋಪಿ ಶರೀಫ್ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಮೇ 10ರಂದು ರಾತ್ರಿ ಬಂಟ್ವಾಳ ಬಿ.ಸಿ.ರೋಡ್ ಸೋಮಯಾಜಿ ಆಸ್ಪತ್ರೆ ಬಳಿ ನಿಂತಿದ್ದ ಕೇರಳ ರಿಜಿಸ್ಟ್ರೇಶನ್ ನಂಬರಿನ ಕಾರನ್ನು ಅನುಮಾನಾಸ್ಪದವಾಗಿ ಬಂಟ್ವಾಳ ನಗರ ಠಾಣೆ ಎಸ್ಐ ರಾಮಕೃಷ್ಣ ಅವರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಕಾರಿನಲ್ಲಿದ್ದ ಚಾಲಕ ಮೊಹಮ್ಮದ್ ಸಿ.ಎ ಹಾಗೂ ಇನ್ನೊಬ್ಬ ಶರೀಫ್, ಮಹಿಳೆ ಕಮರುನ್ನೀಸಾ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ, ಶರೀಫ್ ಪೊಲೀಸ್ರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ವಿಚಾರಣೆ ವೇಳೆ ಬಂಧಿತ ಇಬ್ಬರು ಆರೋಪಿಗಳು ಖೋಟಾ ನೋಟುಗಳನ್ನು ವಿನಿಮಯ ಮಾಡಲು ಬಂದಿರುವುದಾಗಿ ತಿಳಿಸಿದ್ದು, ಆರೋಪಿಗಳಿಂದ 500 ರೂಪಾಯಿ ಮುಖಬೆಲೆಯ 46 ಖೋಟಾ ನೋಟು 3 ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂಓದಿ:ಮೈಸೂರು: ಬಿರುಗಾಳಿ ಮಳೆಗೆ ಉರುಳಿ ಬಿದ್ದ ಬೃಹತ್ ಅರಳಿ ಮರ, 4 ಮನೆಗಳು ಜಖಂ - tree fell down on the homes