ಬಳ್ಳಾರಿ/ಶಿವಮೊಗ್ಗ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ರಾಜ್ಯಾದ್ಯಂತ ಶ್ರದ್ಧಾ- ಭಕ್ತಿಯಿಂದ ಆಚರಿಸುತ್ತಿದ್ದಾರೆ.
ಬಕ್ರೀದ್ ವಿಶೇಷ: ಪ್ರವಾದಿ ಇಬ್ರಾಹಿಂ ಅವರು ತಮ್ಮ ಪುತ್ರನನ್ನು ದೇವರಿಗೆ ಅರ್ಪಣೆ ಮಾಡಲು ಮುಂದಾದಾಗ ಮಹಮ್ಮದ್ ಪೈಗಂಬರರು ಇಬ್ರಾಹಿಂ ಪುತ್ರನನ್ನು ಬಲಿ ನೀಡದೇ ಕುರಿಯನ್ನು ಅರ್ಪಣೆ ಮಾಡುವಂತೆ ಹೇಳುತ್ತಾರೆ. ಆಗ ಕುರಿಯನ್ನು ಅರ್ಪಿಸುತ್ತಾರೆ. ಅಂದಿನಿಂದ ಬಕ್ರೀದ್ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಬಕ್ರೀದ್ನಲ್ಲಿ ಮುಖ್ಯವಾಗಿ ಮುಸಲ್ಮಾನರು ದಾನ ಧರ್ಮಗಳನ್ನು ಮಾಡುವವರು. ಇಂದು ಪ್ರತಿಯೊಬ್ಬ ಮುಸಲ್ಮಾನರು ದಾನವನ್ನು ಮಾಡುತ್ತಾರೆ. ಬಕ್ರೀದ್ನಲ್ಲಿ ನೀಡುವ ಬಲಿಯಲ್ಲಿ ಮೂರು ಭಾಗಗಳನ್ನು ಮಾಡಲಾಗುತ್ತದೆ. ಒಂದು ಭಾಗವನ್ನು ದಾನ ಮಾಡುವವರು ತಾವೇ ಇಟ್ಟುಕೊಂಡು, ಉಳಿದ ಎರಡು ಭಾಗಗಳಲ್ಲಿ ಒಂದು ಭಾಗವನ್ನು ಸಂಬಂಧಿಕರಿಗೆ ಹಾಗೂ ಇನ್ನೊಂದು ಭಾಗವನ್ನು ಅಶಕ್ತರಿಗೆ ನೀಡಲಾಗುತ್ತದೆ. ಇದೇ ಬಕ್ರೀದ್ನ ವಿಶೇಷ ಎನ್ನಬಹುದು.
ಬಕ್ರೀದ್ನ ಸಾಮೂಹಿಕ ಪ್ರಾರ್ಥನೆಯ ನಂತರ ಪರಸ್ಪರ ಶುಭಾಶಯ ಕೋರಿಕೊಳ್ಳುತ್ತಾರೆ. ನಂತರ ತಮ್ಮ ತಮ್ಮ ಮನೆಗಳಿಗೆ ತೆರಳಿ ಕುರ್ಬಾನಿಯನ್ನು ನೀಡುತ್ತಾರೆ. ಇಂದು ಎಲ್ಲರೂ ತಮ್ಮ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.
ಬಕ್ರೀದ್ ಪ್ರಯುಕ್ತ ಶಿವಮೊಗ್ಗದ ಮುಸ್ಲಿಂ ಬಾಂಧವರು ಸರ್.ಎಂ.ವಿಶ್ವೇಶ್ವರಯ್ಯ ರಸ್ತೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದರು. ಬಕ್ರೀದ್ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾದ್ಯಂತ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಬಳ್ಳಾರಿಯಲ್ಲಿ ಬಕ್ರೀದ್ ಆಚರಣೆ: ಬಳ್ಳಾರಿ ಜಿಲ್ಲಾದ್ಯಂತ ಸಡಗರದಿಂದ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು. ಬೆಳಗ್ಗೆಯಿಂದಲೇ ನಗರದ ಎಪಿಎಂಸಿ ಬಳಿಯ ಈದ್ಗಾ ಮೈದಾನಕ್ಕೆ ತೆರಳಿದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವೃದ್ಧರಿಂದ ಹಿಡಿದು ಚಿಕ್ಕ ಮಕ್ಕಳು ಕೂಡ ಭಾಗವಹಿಸಿದ್ದರು. ಧರ್ಮ ಗುರುಗಳು ಹಬ್ಬದ ಸಂದೇಶ ಸಾರಿ, ದಾನ - ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬಾಳುವಂತೆ ಕರೆ ನೀಡಿದರು. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಅಪ್ಪಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಹಿನ್ನೆಲೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಬೆಳಗಾವಿಯಲ್ಲಿ ಬಕ್ರೀದ್ ಸಂಭ್ರಮ: ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬ ಆಚರಿಸಿದರು. ನಗರದ ನ್ಯಾಯಾಲಯ ಆವರಣ ಬಳಿಯ ಈದ್ಗಾ ಮೈದಾನ, ಕೋಟೆ ಆವರಣದಲ್ಲಿನ ಹಳೆಯ ಮಸೀದಿ ಸೇರಿದಂತೆ ವಿವಿಧೆಡೆ ಮುಸ್ಲಿಮರು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಶಾಸಕ ಆಸೀಫ್ ಸೇಠ್ ಕೂಡ ಪ್ರಾರ್ಥನೆಯಲ್ಲಿ ಭಾಗಿಯಾಗಿ ಶುಭಾಶಯ ಕೋರಿದರು. ಹಲವೆಡೆ ಈದ್ಗಾ ಮೈದಾನಗಳು ಮತ್ತು ಮಸೀದಿಗಳಲ್ಲೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಪರಸ್ಪರರು ಶುಭಾಶಯ ವಿನಿಮಯ ಮಾಡಿಕೊಂಡರು. ಚಿಕ್ಕ ಮಕ್ಕಳು, ವೃದ್ಧರು ಸೇರಿ ಬಹುತೇಕ ಎಲ್ಲರೂ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ನಮಾಜ್ ಮುಗಿದ ಬಳಿಕ ಸಂಪ್ರದಾಯದಂತೆ ಕುರ್ಬಾನಿ ನೀಡಿ, ಅಲ್ಲಾಹುವಿನ ಕೃಪೆಗೆ ಪಾತ್ರರಾದರು.
ವಾಣಿಜ್ಯ ನಗರಿಯಲ್ಲಿ ಬಕ್ರೀದ್: ಬಕ್ರೀದ್ ಹಬ್ಬವನ್ನು ಹುಬ್ಬಳ್ಳಿಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಆಚರಿಸಿದರು. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮಕ್ಕಳು, ಹಿರಿಯರು ಸೇರಿ ಪ್ರಾರ್ಥನೆ ಸಲ್ಲಿಸಿ, ಪರಸ್ಪರವಾಗಿ ಶುಭಾಶಯ ವಿನಮಯ ಮಾಡಿಕೊಂಡರು. ಬಕ್ರೀದ್ ಹಿನ್ನೆಲೆಯಲ್ಲಿ, ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಚಾಮರಾಜನಗರ: ಬಕ್ರಿದ್ ಹಬ್ಬವನ್ನು ಮುಸ್ಲಿಮರು ಜಿಲ್ಲಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಿದರು. ಚಾಮರಾಜನಗರ ಈದ್ಗಾ ಮೈದಾನ, ಸೋಮವಾರಪೇಟೆ, ಗುಂಡ್ಲುಪೇಟೆ ಈದ್ಗಾ ಮೈದಾನಗಳಲ್ಲಿ ಹೊಸ ದಿರಿಸು ಧರಿಸಿ ತೊಟ್ಟ ಚಿಣ್ಣರು, ಹಿರಿಯರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಇಸ್ಲಾಂ ಘೋಷವಾಕ್ಯ ಪಠಿಸಿ ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಂಡರು.
ಮುಸ್ಲಿಂ ಧರ್ಮ ಗುರುಗಳು ಪ್ರಚವನ ನೀಡಿ, ಹಬ್ಬದ ಶುಭ ಸಂದೇಶಗಳನ್ನು ನೀಡಿದರು. ಚಾಮರಾಜನಗರ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ಶಾಸಕ ಹಾಗೂ ಎಂಎಸ್ಐಎಲ್ ಅಧ್ಯಕ್ಷ ಪುಟ್ಟರಂಗಶೆಟ್ಟಿ ಭಾಗಿಯಾಗಿ ಶುಭಾಶಯ ಕೋರಿದರು. ನಾನು ನಾಲ್ಕು ಬಾರಿ ಗೆಲ್ಲಲು ತಮ್ಮೆಲ್ಲರ ಸಹಕಾರ, ಪ್ರಾರ್ಥನೆ ಕಾರಣ. ನಿಮ್ಮೆಲ್ಲರ ಪ್ರಾರ್ಥನೆಯಂತೆ ಮಳೆ-ಬೆಳೆ ಚೆನ್ನಾಗಿ ಈ ಬಾರಿ ಆಗಲಿ ಎಂದು ಆಶಿಸಿದರು.
ದಾವಣಗೆರೆ: ಬಕ್ರೀದ್ ಹಬ್ಬದ ಸಂಭ್ರಮ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ದಾವಣಗೆರೆ ನಗರದ ಪಿಬಿ ರಸ್ತೆಯಲ್ಲಿರುವ ಹಳೇ ಖಬರ್ಸ್ತಾನ್ದಲ್ಲಿ ನಮಾಜ್ ಮಾಡಿದರು. ಶಿವನಗರದಲ್ಲಿರುವ ಹೊಸ ಈದ್ಗಾ ಮೈದಾನ, ರಾಮನಗರ ಈದ್ಗಾ ಮೈದಾನ, ಆವರಗೆರೆ ಈದ್ಗಾ ಮೈದಾನದಲ್ಲಿಯೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಸಂತೇಬೆನ್ನೂರಿನಲ್ಲಿ ಮುಸ್ಲಿಮರು ಹಜರಾತ್ ಮನ್ಸೂರ್ ಷಾ ವಲಿ ದರ್ಗಾದಿಂದ ಸಾಮೂಹಿಕವಾಗಿ ಮೆರವಣಿಗೆ ತೆರಳಿ ರಾಜಬೀದಿಯಿಂದ ಈದ್ಗಾ ಮೈದಾನಕ್ಕೆ ತೆರಳಿದರು. ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ್ದು, ಇಮಾಮ್ ಅವರು ದೇಶದಲ್ಲಿ ಸುಖ, ಶಾಂತಿ, ನೆಮ್ಮದಿಯ ಜೊತೆಗೆ ಸಮೃದ್ಧ ಮಳೆಯಾಗಲಿ ಎಂದು ಪ್ರಾರ್ಥಿಸಿದರು.