ಬೆಂಗಳೂರು:ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿರುವುದು ಸತ್ಯಕ್ಕೆ ಸಂದ ಗೆಲುವಾಗಿದೆ. ಇದು ಪ್ರಜಾಪ್ರಭುತ್ವದ ಗೆಲುವಾಗಿದೆ. ಪ್ರಧಾನಿ ನರೇಂದ್ರ ಮೋದಿಗೆ ಸೋಲಿನ ಮುನ್ಸೂಚನೆಯಾಗಿದೆ. ಜೈಲಿನ ಕಂಬಿಗಳು ಮುರಿದಿವೆ ಎಂದು ಎಎಪಿ ಪಕ್ಷದ ರಾಜ್ಯ ಕಚೇರಿಯಲ್ಲಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಎಎಪಿ ವರಿಷ್ಠ ಕೇಜ್ರಿವಾಲ್ಗೆ ಜಾಮೀನು: ಎಎಪಿ ವರಿಷ್ಠ ಅರವಿಂದ ಕೇಜ್ರಿವಾಲ್ರಿಗೆ ಸುಪ್ರೀಂ ಕೋರ್ಟ್ ಜಾಮೀನು ಕೊಟ್ಟ ಬೆನ್ನಲ್ಲೇ ಸುದ್ದಿಗಾರರ ಜೊತೆಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಅವರು, ಈ ಬಾರಿ ಚುನಾವಣೆಯಲ್ಲಿ ಕೇಜ್ರಿವಾಲ್ ಅಲೆಯನ್ನು ತಡೆಯಲು ಪ್ರಧಾನಿ ಮೋದಿಗೆ ಇನ್ಯಾವ ದಾರಿಯು ಉಳಿದಿಲ್ಲ. ಇಂಡಿಯಾ ಒಕ್ಕೂಟದ ಗೆಲುವನ್ನು ತಡೆಯುವ ಮೋದಿಯವರ ಹುನ್ನಾರ ನುಚ್ಚು ನೂರಾಗಿದೆ. ದೆಹಲಿಯ ಜನರಲ್ಲಿ ಮಿಂಚಿನ ಸಂಚಾರವಾಗಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ನೂರ್ಮಡಿ ಶಕ್ತಿಯ ಸಂಚಲನವಾಗಿದೆ. ಮೇ 25ರಂದು ದೆಹಲಿಯಲ್ಲಿ ನಡೆಯಲಿರುವ ಚುನಾವಣೆಯಲ್ಲಿ, ಕೇಜ್ರಿವಾಲ್ ಅವರ ಉಪಸ್ಥಿತಿಯಿಂದ ಇಂಡಿಯಾ ಒಕ್ಕೂಟವು 7ಕ್ಕೆ 7 ಸ್ಥಾನವನ್ನು ಗೆಲ್ಲಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕೇಜ್ರಿವಾಲ್ ಬಂಧನ ಹಿಂದೆ ಮೋದಿಯವರ ಹುನ್ನಾರ: ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಪಾರ ನಂಬಿಕೆ ಹೊಂದಿದ್ದೇವೆ. ನಮ್ಮ ನಿರೀಕ್ಷೆಯಂತೆ ಕೇಜ್ರಿವಾಲ್ರಿಗೆ ಜಾಮೀನು ಸಿಕ್ಕಿದೆ. ಕೇಜ್ರಿವಾಲ್ ಬಂಧನ ಪ್ರಧಾನಿ ಮೋದಿಯವರ ದೊಡ್ಡ ಹುನ್ನಾರ ಎಂಬುದು ಜಗಜ್ಜಾಹೀರಾಗಿದೆ. ಚುನಾವಣೆಯಲ್ಲಿ ಎಎಪಿಯನ್ನು ಕಟ್ಟಿಹಾಕುವ ಸಲುವಾಗಿ ಚುನಾವಣೆಯ ಹೊಸ್ತಿಲಲ್ಲಿ ಕೇಜ್ರಿವಾಲ್ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಿದರು ಎಂಬ ಸತ್ಯ ಭಾರತದ ಜನತೆಗೆ ಅರಿವಾಗಿದೆ. ಮೂರು - ಮೂರು ಭಾರಿ ಪ್ರಚಂಡ ಬಹುಮತದಿಂದ ಗೆದ್ದಿರುವ ಕೇಜ್ರಿವಾಲ್ರನ್ನು ಬಂಧಿಸುವ ಮೂಲಕ ಪ್ರಜಾಪ್ರಭುತ್ವದ ವಿರುದ್ಧ ಅಣಕವಾಡಿದ್ದ ಮೋದಿಗೆ ತಕ್ಕ ಶಾಸ್ತಿಯಾಗುವ ದಿನಗಳು ಹತ್ತಿರವಾಗಿವೆ ಎಂದು ತಿಳಿಸಿದರು.
ಕೇಜ್ರಿವಾಲ್ ಇಂದೇ ಜೈಲಿನಿಂದ ಹೊರಬರಲಿದ್ದಾರೆ. ಚುನಾವಣೆ ಪ್ರಚಾರದ ದಿಕ್ಕೇ ಬದಲಾಗಲಿದೆ. ಕೇಜ್ರಿವಾಲ್ ಹೊರಬರುತ್ತಿರವ ವಿಚಾರ ಬಿಜೆಪಿ ಪಾಳೆಯದಲ್ಲಿ ನಡುಕ ಹುಟ್ಟಿಸಿದೆ. 3 ಹಂತದ ಮತದಾನ ಮುಗಿದಿರುವ ಈ ಸಂದರ್ಭ ಸೋಲಿನ ಭೀತಿಯಲ್ಲಿ ಮಾನಸಿಕ ಅಸ್ವಸ್ಥರಂತೆ ಮೋದಿ ಭಾಷಣ ಮಾಡುತ್ತಿದ್ದಾರೆ. ಕೇಜ್ರಿವಾಲ್ ಬಿಡುಗಡೆಯಿಂದ ಸಂಪೂರ್ಣ ಸ್ಥಿಮಿತ ಕಳೆದುಕೊಳ್ಳಲಿದ್ದಾರೆ. ಕೇಜ್ರಿವಾಲ್ ಬಿಡುಗಡೆಯಿಂದ ಇನ್ನುಳಿದ ನಾಲ್ಕು ಹಂತಗಳ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಇಂಡಿಯಾ ಅಭ್ಯರ್ಥಿಗಳಲ್ಲಿ ಗೆಲುವಿನ ವಿಶ್ವಾಸ ಹೆಚ್ಚಿಸಿದೆ ಎಂದು ಹೇಳಿದರು.
ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿ ಪಕ್ಷದ ಕಚೇರಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಡಾ. ಸತೀಶ್ ಕುಮಾರ್ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಎಲ್ಲರೂ ಸೇರಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.