ಬಾಗಲಕೋಟೆ: ಇಲ್ಲಿ ಪಟಾಕಿ ಸಿಡಿಸುವುದೇ ಹರಕೆ. ಜಾತ್ರೆ ಸಂದರ್ಭದಲ್ಲಿ ಭಕ್ತರು ಪಟಾಕಿ ಸಿಡಿಸುವ ಮೂಲಕ ಹರಕೆ ಈಡೇರಿಸುತ್ತಾರೆ. ಹೀಗಾಗಿ ಈ ಜಾತ್ರೆ ಪಟಾಕಿ ಜಾತ್ರೆಯೆಂದೇ ಪ್ರಸಿದ್ಧಿ. ರಬಕವಿ - ಬನಹಟ್ಟಿ ಪಟ್ಟಣದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಪಟಾಕಿ ಜಾತ್ರೆ ನಡೆಯುತ್ತದೆ. ಅದರಂತೆ ಬನಹಟ್ಟಿ ನಗರದ ಆರಾಧ್ಯದೈವ ಶ್ರೀ ಕಾಡಸಿದ್ದೇಶ್ವರ ಜಾತ್ರೆ ರಥೋತ್ಸವ ಗುರುವಾರ ಅದ್ಧೂರಿಯಾಗಿ ಜರುಗಿತು. ಜಾತ್ರೆಯಲ್ಲಿ ಭಕ್ತರು ಐನೂರು ರೂಪಾಯಿಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿ ಸಿಡಿಸಿ ಭಕ್ತಿ ಮೆರೆದರು.
ಕಾಡ ಸಿದ್ದೇಶ್ವರ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ಪ್ರಾಣಿಗಳ ಭಯದಿಂದ ಸಿಡಿಮದ್ದುಗಳನ್ನು ಸಿಡಿಸುತ್ತಾ, ಘೋಷಣೆ ಹಾಕುತ್ತಾ ಬರುತ್ತಿದ್ದರು. ಈಗ ಅದೇ ಪದ್ಧತಿ ಮುಂದುವರೆದಿದ್ದು, ಲಕ್ಷಾಂತರ ರೂಪಾಯಿಗಳ ಪಟಾಕಿ ಸಿಡಿಸಿ ತಮ್ಮ ಹರಕೆ ತೀರಿಸುತ್ತಾರೆ.
ಭಕ್ತರು ದೇವರ ದರ್ಶನ ಬಳಿಕ, ರಥೋತ್ಸವದ ಸಮಯದಲ್ಲಿ ಬೆಂಡು ಬೆತ್ತಾಸು ಹಾರಿಸಿ, ಕಂಟಮಾಲೆ ಕಟ್ಟಿ ಜೈಕಾರ ಹಾಕುತ್ತಾರೆ. ನಂತರ ಪಟಾಕಿ ಅಂಗಡಿಗೆ ತೆರಳಿ ಪಟಾಕಿ ಸಿಡಿಸುವ ಪದ್ಧತಿ ಇದೆ. ಮಹಾರಾಷ್ಟ್ರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸಿ, ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಲಕ್ಷಾಂತರ ರೂಪಾಯಿಗಳ ವ್ಯರ್ಥ ಮಾಡಿ, ಪರಿಸರ ಹಾನಿ ಮಾಡುತ್ತಿರುವ ಬಗ್ಗೆ ವಿರೋಧ ಬಂದರೂ ಭಕ್ತರು ತಮ್ಮ ಇಷ್ಟಾರ್ಥ ಪೂರ್ಣ ಆಗಿದ್ದರಿಂದ ಪಟಾಕಿ ಸಿಡಿಸಿ ಹರಕೆ ತೀರಿಸುವುದನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ: ಅದ್ಧೂರಿಯಾಗಿ ನೆರವೇರಿದ ಕಿಚಡಿ ಜಾತ್ರೆ, ಜಟಾ ಪ್ರದರ್ಶನ ಜಾತ್ರೆ - Fair In bagalkote