ಬೆಂಗಳೂರು: ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮಾತನಾಡುತ್ತಾ ಹಿಂದೂಗಳು ಹಿಂಸಾಚಾರ ಹಾಗು ದ್ವೇಷದಲ್ಲಿ ನಿರತರಾಗಿದ್ದಾರೆ ಎಂದಿದ್ದಾರೆ. ಇದರೊಂದಿಗೆ ದೇಶದ ಅಸಂಖ್ಯಾತ ಹಿಂದೂಗಳಿಗೆ ಅವಮಾನ ಮಾಡಿದ್ದು, ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಿನ್ನೆ ಚೊಚ್ಚಲ ಬಾರಿಗೆ ಪ್ರತಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ಮಾಡಿರುವ ಭಾಷಣ ಸುಳ್ಳು, ನಿರಾಶೆ ಹಾಗೂ ಆಧಾರರಹಿತ ಆರೋಪಗಳಿಂದ ಕೂಡಿತ್ತು. ತಮ್ಮ ಭಾಷಣದ ಮೂಲಕ ಸಂಸತ್ತಿನ ಘನತೆಗೆ ಧಕ್ಕೆ ತಂದಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ಸುಳ್ಳನ್ನೇ ಹತ್ತಾರು ಬಾರಿ ಹೇಳಿಕೊಂಡು ತಿರುಗಾಡಿ ಈಗ ಪ್ರತಿಪಪಕ್ಷ ನಾಯಕರಾಗಿ ಅದೇ ಚಾಳಿ ಮುಂದುವರೆಸಿದ್ದಾರೆ. ಪ್ರತಿಪಕ್ಷದ ನಾಯಕ ಸ್ಥಾನದ ಘನತೆಗೂ ಧಕ್ಕೆ ತಂದಿದ್ದಾರೆ ಎಂದು ಟೀಕಿಸಿದರು.
ಅಗ್ನಿವೀರ್, ರೈತರು, ಅಯೋಧ್ಯೆ, ಮೈಕ್ರೋಫೋನ್ ವಿಚಾರದಲ್ಲಿಯೂ ರಾಹುಲ್ ಗಾಂಧಿ ಸುಳ್ಳು ಹೇಳಿಕೆ ಕೊಟ್ಟಿದ್ದಾರೆ. ಅನೇಕ ವಿಚಾರಗಳಲ್ಲಿ ಸುಳ್ಳು ಪ್ರಚಾರ ಮಾಡುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಆಗ್ರಹಿಸಿದರು.
ಜವಾಬ್ದಾರಿಯುತ ಸ್ಥಾನದಲ್ಲಿದ್ದು ಸುಳ್ಳು ಹೇಳಿ ಓಡಿಹೋಗುವಂತಿಲ್ಲ. ಈ ಹಿಂದೆ ವಿದೇಶದಲ್ಲಿ ಭಾಷಣ ಮಾಡುತ್ತಾ ಭಾರತದಲ್ಲಿ ಪ್ರಜಾಭುತ್ವವಿಲ್ಲ ಎಂದಿದ್ದರು. ಈಗ ಸದನದಲ್ಲೇ ಹಿಂದೂಗಳಿಗೆ ಅಪಮಾನ ಮಾಡಿದ್ದಾರೆ. ಮನಸೋಇಚ್ಚೆ ಮಾತನಾಡಲು ಸದನವನ್ನು ದುರ್ಬಳಕೆ ಮಾಡಿಕೊಂಡಿದ್ದು ಖಂಡನೀಯ. ಸಿಖ್ ಹತ್ಯಾಕಾಂಡ, ತುರ್ತು ಪರಿಸ್ಥಿತಿಗೂ ಕಾರಣ ಕಾಂಗ್ರೆಸ್ ಪಕ್ಷ. ಇಂತಹ ಕಾಂಗ್ರೆಸ್ ದೇಶವನ್ನು ಉದ್ಧಾರ ಮಾಡುತ್ತೇವೆ ಎಂದು ಏನೇನೋ ಭರವಸೆ ನೀಡಿ ಈಗ ಪ್ರತಿಪಕ್ಷದ ಸ್ಥಾನದಲ್ಲಿದೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ರಾಹುಲ್ ಗಾಂಧಿ ದೇಶದ ಕ್ಷಮೆ ಕೇಳಲಿ: ಸಿ.ಟಿ.ರವಿ - MLC C T Ravi